Advertisement

ಕಾನೂನು ಕಾಲೇಜಿಗೆ ರೇಷ್ಮೇ ಇಲಾಖೆ ಕಟ್ಟಡ

07:08 AM Jun 20, 2019 | Lakshmi GovindaRaj |

ಚಾಮರಾಜನಗರ: ಜಿಲ್ಲೆಯ ನೂತನವಾಗಿ ಮಂಜೂರಾಗಿರುವ ಸರ್ಕಾರಿ ಕಾನೂನು ಕಾಲೇಜಿನ ತರಗತಿಗಳನ್ನು ಆರಂಭಿಸಲು ನಗರದ ರೇಷ್ಮೆ ಇಲಾಖೆ ಕಟ್ಟಡವನ್ನು ಗುರುತಿಸಲಾಗಿದ್ದು, ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರಿಶೀಲನೆ ಸಮಿತಿ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿತು.

Advertisement

ಮೂಲ ಸೌಕರ್ಯ ಪರಿಶೀಲನೆ: ನಗರದ ಸಂತೆಮರಹಳ್ಳಿ ರಸ್ತೆಯಲ್ಲಿರುವ ರೇಷ್ಮೆ ಇಲಾಖೆ ಕಟ್ಟಡ (ಹಿಂದಿನ ಕೇಂದ್ರಿಯ ವಿದ್ಯಾಲಯ)ಕ್ಕೆ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯದ ಪರಿಶೀಲನೆ ಸಮಿತಿ ಆಗಮಿಸಿ, ತರಗತಿಗಳನ್ನು ನಡೆಸಲು ತಾತ್ಕಾಲಿಕ ಕಟ್ಟಡ ಸೂಕ್ತವಾಗಿದೆಯೇ, ಮೂಲಸೌಕರ್ಯಗಳಿವೆಯೇ ಎಂದು ಪರಿಶೀಲಿಸಿತು. ಕಾನೂನು ಶಾಲೆಯ ಮುಖ್ಯಸ್ಥ ಹಾಗೂ ಸಮಿತಿಯ ಅಧ್ಯಕ್ಷ ಡಾ.ಸಿ.ಎಸ್‌. ಪಾಟೀಲ, ಸಮಿತಿ ಸದಸ್ಯ ಡಾ.ಬಿ.ಎಸ್‌.ರೆಡ್ಡಿ, ಸಂಯೋಜಕ ಸುನೀಲ್‌ ಭಾಗಡೆ ಅವರು ಕಾನೂನು ಕಾಲೇಜಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ವೀಕ್ಷಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಆರಂಭಕ್ಕೆ ಮನವಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾನೂನು ಕಾಲೇಜು ಆರಂಭವಾಗಬೇಕಾದರೆ ಆಗಸ್ಟ್‌ ವೇಳೆಗೆ ಕಟ್ಟಡ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರಬೇಕು. ಹೀಗಾಗಿ ಸದ್ಯ ಕಟ್ಟಡ, ಕೊಠಡಿಗಳು ಸಿದ್ಧವಾಗಿದೆ. ಪೀಠೊಪಕರಣ, ಪಾಠೊಪಕರಣಗಳ ಅಗತ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಈ ಸಂದರ್ಭದಲ್ಲಿ ಹಾಜರಿದ್ದು, ಕೂಡಲೇ ಅವೆಲ್ಲವನ್ನೂ ಪೂರೈಸಲು ಸಿದ್ಧ ಎಂದು ಭರವಸೆ ನೀಡಿದರು. ಸಮಿತಿಯೊಂದಿಗೆ ಸಮಾಲೋಚಿಸಿದ ಸಚಿವರು, ಈ ಶೈಕ್ಷಣಿಕ ವರ್ಷದಿಂದಲೇ ಕಾನೂನು ಕಾಲೇಜು ಆರಂಭಿಸಲು ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

ಪರಿಶೀಲನೆ ವರದಿ ಸಲ್ಲಿಕೆ: ಕಾಲೇಜಿನ ತರಗತಿಗಳಿಗೆ ಅಗತ್ಯವಿರುವ ಕೊಠಡಿ, ಬೋಧಕರ ಕೊಠಡಿ, ಗ್ರಂಥಾಲಯ, ಶೌಚಾಲಯ, ನೀರಿನ ವ್ಯವಸ್ಥೆ ಮತ್ತಿತರ ಮೂಲ ಸೌಲಭ್ಯಗಳನ್ನು ಸಮಿತಿಯು ವೀಕ್ಷಣೆ ಮಾಡಿತು. ಕಾಲೇಜು ಆರಂಭಕ್ಕೆ ಬೇಕಾಗಿರುವ ಮೂಲ ಸೌಕರ್ಯ ಹಾಗೂ ಪೂರಕ ವ್ಯವಸ್ಥೆಗಳು ಲಭ್ಯವಿದೆಯೇ ಎಂಬ ಬಗ್ಗೆ ನೋಡಿ ಪರಿಶೀಲಿಸಲು ಬಂದಿದ್ದೇವೆ. ಪರಿಶೀಲನೆ ಸಂಬಂಧ ವರದಿ ಸಲ್ಲಿಸಲಿದ್ದೇವೆ ಎಂದು ಸಮಿತಿಯ ಅಧ್ಯಕ್ಷ‌ ಡಾ.ಸಿ.ಎಸ್‌.ಪಾಟೀಲ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 105 ಕಾನೂನು ಕಾಲೇಜುಗಳಿದ್ದು, ಇಡೀ ರಾಜ್ಯದಲ್ಲಿ ಐದು ಸರ್ಕಾರಿ ಕಾನೂನು ಕಾಲೇಜುಗಳಿವೆ. ಚಾಮರಾಜನಗರದಲ್ಲಿ ಪ್ರಾರಂಭವಾದರೆ 6ನೇ ಸರ್ಕಾರಿ ಕಾಲೇಜಾಗಲಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೆ ಕಾನೂನು ಕಾಲೇಜು ಆರಂಭಕ್ಕೆ ಅಗತ್ಯವಿರುವ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾನೂನು ವಿವಿ ಸ್ಥಳೀಯ ಪರಿಶೀಲನ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇಲ್ಲಿನ ಸೌಲಭ್ಯಗಳ ಬಗ್ಗೆ ಸಮಿತಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

Advertisement

ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಸಮಿತಿಯು ಸಹ ಭೇಟಿಕೊಟ್ಟು ಪರಿಶೀಲನೆ ನಡೆಸಲಿದೆ. ಮುಖ್ಯ ಮಂತ್ರಿಯವರು ಕಾನೂನು ಕಾಲೇಜಿಗಾಗಿ ಆಯವ್ಯಯದಲ್ಲಿ 1 ಕೋಟಿ ರೂ ನೀಡಿದ್ದಾರೆ. ಇತರೆ ನೆರವನ್ನು ಬಳಸಿಕೊಂಡು ಕಾಲೇಜಿಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು. ಆರಂಭದಲ್ಲಿ ಒಟ್ಟು 60 ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅವಕಾಶ ಸಿಗಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು. ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಎ. ಗೋಪಾಲ್‌, ನಿರ್ಮಿತಿ ಕೇಂದ್ರದ ಅಧಿಕಾರಿ ರಾಜಪ್ಪ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಾಜಿ ಸಂಸದ ಧ್ರುವ ಕನಸು: ಶೈಕ್ಷಣಿಕವಾಗಿ ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ನಗರಕ್ಕೆ ಕಾನೂನು ಕಾಲೇಜು ಮಂಜೂರು ಮಾಡಿಸಲು ಹಿಂದಿನ ಸಂಸದ ಆರ್‌. ಧ್ರುವನಾರಾಯಣ ವಿಶೇಷ ಆಸಕ್ತಿ ವಹಿಸಿದ್ದರು. ಅವರ ಶ್ರಮದ ಫ‌ಲವಾಗಿ ಈ ಹಿಂದೆ 2017-18 ನೇ ಸಾಲಿನ ಆಯವ್ಯಯದಲ್ಲೇ ಲೆಕ್ಕ ಶೀರ್ಷಿಕೆ 2014-00-800-5-01ರಡಿ ನಗರದಲ್ಲಿ ಸರ್ಕಾರಿ ಕಾನೂನು ಕಾಲೇಜು ಆರಂಭಿಸಲು 1 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. 2018-19ನೇ ಸಾಲಿನ ಆಯವ್ಯಯದಲ್ಲಿ ಅದನ್ನು ಮುಂದುವರಿಸಿ 1 ಕೋಟಿ ರೂ. ಮೀಸಲಿಡಲಾಗಿತ್ತು.

ಕಾನೂನು ಕಾಲೇಜನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಬೇಕೆಂದು ಹಿಂದಿನ ಕೇಂದ್ರೀಯ ವಿದ್ಯಾಲಯದ ಕಟ್ಟಡವನ್ನು ಕಾನೂನು ಕಾಲೇಜಿಗೆ ಬಳಸಿಕೊಳ್ಳಲು ಶಿಫಾರಸು ಮಾಡಿದ್ದರು. ಒಟ್ಟಾರೆ ಕಾಲೇಜು ಸ್ಥಾಪನೆಗೆ 3.14 ಕೋಟಿ ರೂ. ವೆಚ್ಚವಾಗಲಿದೆ. ಸ್ವಂತ ಕಟ್ಟಡವನ್ನು ಮುಂದೆ ಎಡಬೆಟ್ಟ ಬಳಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಬಳಿ 5 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next