ಶಹಾಪುರ: ರೋಗಿಗಳಿಗೆ ಮೂಲಭೂತ ಸೌಕರ್ಯ ಹಾಗೂ ಆರೋಗ್ಯಕರ ವಾತಾವರಣ ನೀಡುವ ಸದುದ್ದೇಶಗಳಿಂದ
ಸರ್ಕಾರಿ ಆಸ್ಪತ್ರೆಯಲ್ಲಿ ವಿವಿಧ ವಾರ್ಡ್ ಮತ್ತು ಒಳ ರೋಗಿಗಳ ಮತ್ತು ತಪಾಸಣೆ ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಒಟ್ಟು 75 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ನವೀಕರಣ ಕಾಮಗಾರಿ ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಸರ್ಕಾರಿ ಆಸ್ಪತ್ರೆ ಗಂಗಾವತಿ ಆಸ್ಪತ್ರೆ ಮಾದರಿಯಲ್ಲಿ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಲಾಗಿದೆ. ಗಂಗಾವತಿ ಆಸ್ಪತ್ರೆಯಂತೆ ಸಕಲ ಸೌಲಭ್ಯ ಶುಚಿಯುತವಾಗಿ ನಿರ್ಮಿಸಲಾಗುವುದು ಎಂದರು.
ಪ್ರತಿ ವಾರ್ಡ್‌ಗಳಲ್ಲಿ ಸಿಸಿ ಟಿವಿ ಮತ್ತು ಎಸಿ ಅಳವಡಿಸುವಂತೆ ಸೂಚನೆ ನೀಡಿದ್ದೇನೆ. ಅಲ್ಲದೇ ಎಚ್‌ಕೆಆರ್‌ಡಿಬಿ ಅನುದಾನದಡಿ 60 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಿಸಿ ರಸ್ತೆ ಮತ್ತು ವಾಲ್ ಟೈಲ್ಸ್, ಕುಡಿಯುವ ನೀರು ಪೂರೈಕೆಗೆ ಹಣ ನೀಡಲಾಗಿದೆ. ಹೆಚ್ಚುವರಿಯಾಗಿ 50 ಲಕ್ಷ ರೂ.ಗಳನ್ನು ಮಂಜೂರಿ ಮಾಡಲಾಗಿದೆ. ರೋಗಬಾಧೆ ನಿವಾರಣೆಗೆ ಆಗಮಿಸುವವರಿಗೆ ಆಸ್ಪತ್ರೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
ಈಗಾಗಲೇ ಆಯುರ್ವೇದಿಕ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಯಾವುದೇ ಸೌಕರ್ಯ ಆರಂಭವಾಗಿಲ್ಲ. ಸಕಾಲದಲ್ಲಿ 50 ಲಕ್ಷ ರೂ.ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲಿ ಸಕಲ ವ್ಯವಸ್ಥೆಯೊಂದಿಗೆ ಆಯುರ್ವೇದ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ| ರಮೇಶ ಗುತ್ತೇದಾರ, ಡಾ| ಜಗದೀಶ ಉಪ್ಪಿನ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಲಿಂ ಸಂಗ್ರಾಮ, ಹಣಮಂತ್ರಾಯ ಯಕ್ಷಿಂತಿ, ತಿರುಪತಿಗೌಡ ಬಾಣತಿಹಾಳ ಇದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣ ನಿರ್ಮಾಣಕ್ಕೆ 2 ಕೋಟಿ ರೂ. ಮಂಜೂರಿ ಯಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳುವ ಸಕಲ ಸಿದ್ಧತೆಗಳು ಮುಂದುವರೆದಿವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆ ಈಡೇರಿಸುವ ಮೂಲಕ ಕನಸು ನನಸಾಗಲಿದೆ.
ಶರಣಬಸಪ್ಪಗೌಡ ದರ್ಶನಾಪುರ, ಶಾಸಕ