Advertisement

ಕಂದಾಯ ಭೂಮಿ ಒತ್ತುವರಿ ಮಾಡಿ ಮನೆ ನಿರ್ಮಾಣ

03:42 PM Mar 12, 2022 | Team Udayavani |

ಆರಕಲಗೂಡು: ಕಂದಾಯ ಭೂಮಿಯಲ್ಲಿ ಅಕ್ರಮ ವಾಗಿ ಮನೆ ನಿರ್ಮಿಸುತ್ತಿರುವವರು ಕೂಡಲೇ ತೆರವು ಗೊಳಿಸದಿದ್ದರೆ ಭೂ ಕಬಳಿಕೆ ಕಾಯಿದೆ ಅಡಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇ ಕಾಗುತ್ತದೆ ಎಂದು ತಹಶೀಲ್ದಾರ ಶ್ರೀನಿವಾಸ ಅಕ್ರಮ ಮನೆ ನಿರ್ಮಿಸಿಕೊಂಡಿರುವವರಿಗೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ವಾರ್ಡ್‌ ನಂ 2ರಲ್ಲಿರುವ ಐತಿಹಾಸಿಕ ಪಾಳೇಗಾರರ ಕಾಲದ ಭತೇರಿ (ಕೋಟೆ ರಕ್ಷಣೆಯ ಕಂದಕ) ಸ್ಥಳವು ಈಗಿನ ಬ್ರಾಹ್ಮಣರ ನಾಲ್ಕು ಮೂಲೆಯಲ್ಲಿರುವ ಸುಮಾರು 120 ಅಡಿ ಅಗಲ ಉದ್ದ ಸುಮಾರು 10 ಎಕರೆಗೂ ಹೆಚ್ಚು ಸ್ಥಳ ಹೊಂದಿದೆ. ಐತಿಹಾಸಿಕ ಪಾಳೇಗಾರ ಕೃಷ್ಣಪ್ಪ ನಾಯಕ ತನ್ನ ಕೋಟೆ ಯೊಳಗೆ ವೈರಿಪಡೆ ಬರದಂತೆ ಕಂದಕ ನಿರ್ಮಿಸಿ, ಅವುಗಳಲ್ಲಿ ಮೊಸಳೆ ಸಾಕಿ ತನ್ನ ಕೋಟೆಯೊಳಗೆ ಅತಿಕ್ರಮ ಣಕಾರರು ಬರದಂತೆ ರಕ್ಷಣೆ ಮಾಡಿಕೊಂಡಿದ್ದರು. ಈ ಕೋಟೆಯ ನಾಲ್ಕು ಮೂಲೆಯಲ್ಲೂ ಸೈನಿಕರು ನಿಲ್ಲುವ ಎತ್ತರವಾದ ಭತೇರಿಗಳನ್ನ ನಿರ್ಮಿಸಿದರು. ಇವುಗಳ ಪಳವಳಿಕೆಗಳು ಈಗಲೂ ಉಳಿದಿವೆ.

ಕೋಟೆ ಕೊಳ್ಳೆ ಹೊಡೆದ ಮೇಲೆ ಬಾಗಿಲಿಗೆ ಬೀಗ: ದಿನೇ ದಿನೇ ಕಳೆದಂತೆ ಬಲಾಡ್ಯರು ಇವುಗಳ ಒತ್ತುವರಿ ಮಾಡಿಕೊಳ್ಳುವ ಮೂಲಕ ಪಪಂ ಹಾಗೂ ಕಂದಾಯ ಇಲಾಖೆಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು, ಶೇ.75ರಷ್ಟು ಭೂ ಕಬಳಿಕೆ ನಡೆಸಿದ್ದಾರೆ. ಇನ್ನು ಉಳಿದಿದ್ದ ಮಲ್ಲಿಪಟ್ಟಣ ಹಾಗೂ ಕೋಟಿಹಿಂದಲಕೊಪ್ಪಲು ಸಂಪರ್ಕ ರಸ್ತೆಯಲ್ಲಿ ಬರುವ ಸರ್ವೆ ನಂ. 182, 181, 324, ಖಾಸಗಿ ವ್ಯಕ್ತಿಗಳಿಗೆ ಈಗಾಗಲೇ ಖಾತೆ ಮಾಡಲಾಗಿದೆ. ಇದನ್ನ ಮನಗಂಡು ಇತ್ತೀಚಿನ ಕೆಲ ತಿಂಗಳಿನಿಂದ ಇನ್ನುಳಿದಿದ್ದ ಸರ್ಕಾರಿ ರಸ್ತೆಯಲ್ಲಿ ನಿವೇಶನ ರಹಿತರು ಅಕ್ರಮವಾಗಿ ರಾತ್ರೋರಾತ್ರಿ, ಶೆಡ್ಡು ಹಾಗೂ ಸೀಮೆಂಟ್‌ ಇಟ್ಟಿಗೆಯ ಮೂಲಕ ಮನೆ ನಿರ್ಮಿಸಿ ಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಕಂದಾಯ ಇಲಾಖೆಗೆ ಹಲವಾರು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ದೂರು ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ತಾಲೂಕು ಆಡಳಿತ ವಿಫ‌ಲವಾಗಿದೆ.

ಎಚ್ಚೆತ್ತ ತಾಲೂಕು ಆಡಳಿತ: ಶುಕ್ರವಾರ ತಹಶೀಲ್ದಾರ್‌ ಶ್ರೀನಿವಾಸ ಮಾಧ್ಯಮದವರೊಂದಿಗೆ ಸ್ಥಳ ಪರಿಶೀಲಿಸಲು ತೆರಳಿ ಸ್ಥಳ ಮಹಜರು ಮಾಡಿದಾಗ, ಅಲ್ಲಿ ನಿರ್ಮಾಣವಾಗಿರುವ ಯಾವುದೇ ಮನೆಗಳಿಗೂ ದಾಖಲಾತಿ ಇಲ್ಲದೆ ಅಕ್ರಮವಾಗಿ ಕಂದಾಯ ಇಲಾಖಾ ಜಾಗದಲ್ಲಿ ಮನೆ ನಿರ್ಮಿಸುತ್ತಿರುವುದು ತಿಳಿದು ಬಂದಿತು. ತಹಶೀಲ್ದಾರ್‌ ಅವರು ಸ್ಥಳದಲ್ಲಿದ್ದ ಕಂದಾಯ ಪರಿ ವೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗೆ ಈ ಕೂಡಲೇ ಕ್ರಮ ಜರುಗಿಸಿ ಇವುಗಳಿಗೆ ನೋಟಿಸ್‌ ನೀಡಿ ತೆರವುಗೊಳಿಸುವಂತೆ ಆದೇಶಿಸಿದರು.

ಅಕ್ರಮ ಖಾತೆ ರದ್ದು ಮಾಡಿ: ಸರ್ವೆ ನಂ 181, 182, ಹಾಗೂ 324 ಮತ್ತು ಇನ್ನು ಇತರೆಯ ಸರ್ವೆ ನಂಬರ್‌ ಗಳ ದಾಖಲಾತಿ ಕಂದಾಯ ಇಲಾಖಾ ಅಧಿಕಾರಿಗಳೇ ಸೃಷ್ಟಿಸಿ, ಉಳ್ಳವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಗಣೇಶ ಮೂರ್ತಿ, ಸತ್ಯನಾರಾಯಣ, ನವೀನ ಎಂಬುವವರ ಹೆಸರುಗಳಲ್ಲಿ ಖಾತೆ ಸೃಷ್ಟಿಸಿ, ಅವರುಗಳಿಗೆ ಹಕ್ಕನ್ನ ನೀಡಲಾಗಿದೆ. ಈ ಎಲ್ಲ ಅಕ್ರಮ ಖಾತೆ ರದ್ದುಗೊಳಿಸಿ, ನಂತರ ನಾವು ಸ್ವಯಂ ಪ್ರೇರಿತರಾಗಿ ಖಾಲಿ ಮಾಡಿಕೊಡುತ್ತೇವೆ ಎಂದು ಮಂಜುಳ, ಮೂರ್ತಿ, ವಿಜಯ, ಆಶಾ, ಶೀಲಾ ಆಕ್ರೋಶ ವ್ಯಕ್ತಪಡಿಸಿದರು.

Advertisement

ಅಕ್ರಮ ಮನೆಗಳಿಗೆ ವಿದ್ಯುತ್‌ ಸಂಪರ್ಕ: ಚೆಸ್ಕಾಂ ಅಧಿಕಾರಿಗಳು ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡ ಬೇಕಾದರೆ ಸ್ಥಳಿಯ ಸಂಸ್ಥೆಯ ಎನ್‌ಒಸಿ ಪಡೆಯದೆ ವಿದ್ಯುತ್‌ ಸಂಪರ್ಕ ನೀಡುವುದಿಲ್ಲ. ಹಾಗೂ ಸಂಬಂಧಿ ಸಿದ ಸ್ಥಳಕ್ಕೆ ಸೂಕ್ತ ದಾಖಲಾತಿ ಒದಗಿಸ ಬೇಕಾಗುತ್ತದೆ. ಆದರೆ, ಈ ಎಲ್ಲ ನಿಯಮ ಗಾಳಿಗೆ ತೂರಿ ವಿದ್ಯುತ ಸಂಪರ್ಕ ಕಲ್ಪಿಸಲಾಗಿದೆ. ಇದರ ಹಿಂದ ಬಲಾಡ್ಯರು ಇರುವ ಸಂಶಯ ಸಾರ್ವಜನಿಕರಲ್ಲಿ ದಟ್ಟವಾಗಿದೆ.

ಅಧಿಕಾರಿಗಳು ಯೂ ಟರ್ನ್: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸುತ್ತಿರುವುದನ್ನ ಕಂಡ ತಹಸಿಲ್ದಾರ ಜೆಸಿಬಿ ಮೂಲಕ ಅಕ್ರಮ ಕಟ್ಟಡಗಳ ತೆರವಿಗೆ ಮುಂದಾದರು. ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳು ತಡೆದು ಪ್ರತಿಭಟಿಸಿದರು. ನಂತರ ಜೆಸಿಬಿಯನ್ನ ಹಿಂತಿರುಗಿಸಿಕೊಂಡ ಅಧಿಕಾರಿಗಳು ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿ ಸ್ಥಳದಿಂದ ಕಾಲ್ಕಿತ್ತರು.

7 ದಿನಗಳ ಗಡುವು : ಈ ಸ್ಥಳವು ಸರ್ಕಾರಿ ಆಸ್ತಿಯಾಗಿದ್ದು, ಇದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಇತ್ತೀಚೆಗೆ ನಿರ್ಮಿಸಿರುವ ಕಟ್ಟಡಗಳು ಹಾಗೂ ನಿರ್ಮಾಣವಾಗುತ್ತಿರುವ ಕಟ್ಟಡ ತೆರವುಗೊಳಿಸಬೇಕು. ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವವ ವಿರುದ್ಧ ಭೂ ಕಬಳಿಕೆ ಕಾಯಿದೆಯಡಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು. ಈಗಾಗಲೇ ಮನೆ ನಿರ್ಮಿಸಿಕೊಂಡು ವಾಸವಿರುವ ಮನೆಗಳಿಗೆ ನೋಟಿಸ್‌ ನೀಡಿ 7ದಿನದಲ್ಲಿ ಖಾಲಿ ಮಾಡಿದಿದ್ದರೆ, ತಾಲೂಕು ಆಡಳಿತವೇ ಕಾನೂನು ಕ್ರಮ ಜರುಗಿಸಲು ಮುಂದಾಗಲಿದೆ ಎಂದರು.

ನಿವಾಸಿಗಳ ಬೇಡಿಕೆ ಏನು? : ನಮ್ಮ ಕುಟುಂಬಗಳು ಕಡುಬಡತನದಿಂದ ಜೀವನ ನಡೆಸುತಿದ್ದೇವೆ. ನಮಗೆ ಸ್ವಂತ ಮನೆಯಾಗಲಿ, ನಿವೇಶನವಾಗಲಿ ಇಲ್ಲ. ಬಾಡಿಗೆ ಮನೆ ಮಾಡಲು ಆರ್ಥಿಕವಾಗಿ ಸ್ಥಿತಿವಂತರಲ್ಲ. ಸರ್ಕಾರಿ ಜಾಗದಲ್ಲಿ ಇತರರು, ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ರಮ -ಸಕ್ರಮದಡಿ ಜಾಗ ಸಿಗಲಿದೆ ಎಂದು ತಿಳಿಯಿತು.ಹಾಗಾಗಿ ಇಲ್ಲಿ ಮನೆ ನಿರ್ಮಿಸಿಕೊಂಡಿದ್ದೇನೆ. ಈಗ ಅಧಿಕಾರಿಗಳು ತೆರವುಗೊಳಿಸಿದರೆ ಇಲ್ಲಿನ ನಿವಾಸಿಗಳ ಬದುಕು ಬೀದಿಗೆ ಬೀಳುತ್ತದೆ. ಅಧಿಕಾರಿಗಳು ನಮಗೆ ಆಶ್ರಯ ಮನೆ ನೀಡಬೇಕು ಎಂದು ನಿವಾಸಿ ಮಂಜುಳಾ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next