ಕೊಪ್ಪಳ: ತುಂಗಭದ್ರಾ ಜಲಾಶಯ ನಿರ್ಮಿಸುವುದು ಸೇರಿದಂತೆ ಬೋರ್ಡ್ ರದ್ದು ಮಾಡಿ ರೈತರ ಹಿತ ಕಾಯಬೇಕೆಂದು ಒತ್ತಾಯಿಸಿ ಸಿಂಧನೂರು ಭಾಗದ ರೈತರು ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದ ಬಳಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ವಿಷಯವಾಗಿ ಸಣ್ಣ ಗಲಾಟೆಯಾದ್ರೂ ದೊಡ್ಡ ಮಟ್ಟದ ಸುದ್ದಿಯಾಗುತ್ತದೆ. ಅಲ್ಲದೇ ತಮಿಳುನಾಡು ಚಿಕ್ಕ ಅರ್ಜಿ ಹಾಕಿದರೂ ದೊಡ್ಡ ಮಟ್ಟದ ರೈತರ ಹೋರಾಟ ನಡೆಯುತ್ತದೆ. ಆದರೆ ತುಂಗಭದ್ರಾ ವಿಷಯದಲ್ಲಿ ರೈತರಿಗೆ ದೊಡ್ಡ ಮಟ್ಟದ ಅನ್ಯಾಯ ನಡೆದರೂ ಸರ್ಕಾರ ಇತ್ತ ತಿರುಗಿ ನೋಡಲ್ಲ. ಮಾಧ್ಯಮಗಳೂ ತುಂಗಭದ್ರಾ ಡ್ಯಾಂ ವಿಷಯದ ಬಗ್ಗೆ ಕಾಳಜಿ ವಹಿಸಲ್ಲ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಗುಡುಗಿದರು.
ದೃಶ್ಯ ಮಾಧ್ಯಮದವರಿಗೆ ಬೆಂಗಳೂರು, ಮೈಸೂರು, ಬೆಳಗಾವಿ ಸುದ್ದಿಗಳನ್ನು ಬಿಟ್ರೆ ಉಳಿದ ಜಿಲ್ಲೆಗಳಲ್ಲಿ ಸುದ್ದಿಗಳನ್ನೇ ಮಾಡಲ್ಲ. ಕೊಪ್ಪಳದಂಥ ಜಿಲ್ಲೆಗಳಲ್ಲಿ ನೀರಿಗಾಗಿ ಜನ ಸತ್ತರೂ ಸುದ್ದಿ ಆಗೋದೇ ಇಲ್ಲ. ನಮ್ಮ ಭಾಗದ ಜನರು ಎಲ್ಲವನ್ನೂ ಸಹಿಸುವ ಭಾವನೆ ತರವಲ್ಲ. ಕಳ್ಳರು ಇರೋದೆ ಕಳ್ಳತನ ಮಾಡೋಕೆ, ಕಳ್ಳರನ್ನು ನಿಯಂತ್ರಿಸಲು ಈ ಭಾಗದ ಯುವಕರು ಮುಂದಾಗಬೇಕು. ತುಂಗಭದ್ರಾ ಬೋರ್ಡ್ ರದ್ದು ಮಾಡಬೇಕು. ಕುತಂತ್ರದ ಲೆಕ್ಕದ ಬಗ್ಗೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು ಎಂದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಬೋರ್ಡ್ ರದ್ದು ಮಾಡಬಹುದಿತ್ತು. ಆದರೆ ಅಂದಿನ ಸರ್ಕಾರ ಅದನ್ನು ಗಮನಿಸಲಿಲ್ಲ. ನಾವೂ ಈಗ ಎಚ್ಚೆತ್ತುಕೊಂಡಿದ್ದೇವೆ. ಈ ಹಿಂದೆಯೇ ಬೋರ್ಡ್‌ನ ಅಧಿಕಾರಿಗಳನ್ನು ಬದಲಾಯಿಸುವ ಅವಕಾಶವನ್ನು ಕೈ ಚೆಲ್ಲಿದ್ದೇವೆ.
ಕಾರ್ಮಿಕರಿಗೆ, ಹಮಾಲರಿಗೆ, ಲಾರಿ ಚಾಲಕರಿಗೆ ಕೆಲಸ ಇಲ್ಲದಂತಾಗಿದೆ. ರೈತ ಬೆಳೆದರೆ ಎಲ್ಲರಿಗೂ ಕೆಲಸ ದೊರೆಯಲಿದೆ. ಇಂತಹ ಹೋರಾಟಗಳಿಂದ ಸರಕಾರಕ್ಕೆ, ಅಧಿಕಾರಿಗಳಿಗೆ ಭಯ ಬರುತ್ತೆ. ಪಕ್ಷಗಳ ರೈತರಾಗಬೇಡಿ ಪ್ರತಿಯೊಬ್ಬರೂ ರೈತರ ಹಿತ ಕಾಯಲು ಮುಂದಾಗಿ ಎಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಯಿತು. ಶೀಘ್ರ ಐಸಿಸಿ ಸಭೆ ನಡೆಸಿ ಅ ಧಿಕಾರಿಗಳು ಸರಿಯಾದ ಲೆಕ್ಕ ಕೊಡಬೇಕು. ಒಂದು ತಿಂಗಳಲ್ಲಿ ನವಲಿ ಸಮಾಂತರ ಜಲಾಶಯ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಬೇಕು.
ಬೋರ್ಡ್ ಅಧ್ಯಕ್ಷರು, ಕಾರ್ಯದರ್ಶಿ ತಿಂಗಳೊಳಗೆ ಬದಲಾಗಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ರಾಜಶೇಖರ ಹಿಟ್ನಾಳ, ಬಾದರ್ಲಿ ಬಸನಗೌಡ, ಬೋಸರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.