Advertisement

ಸಹಕಾರಿ ವಲಯದಲ್ಲಿ ಸಂಘಟಿತ ಮಾರುಕಟ್ಟೆ ನಿರ್ಮಿಸಿ

04:34 PM Jun 27, 2021 | Girisha |

ಸಿಂದಗಿ: ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ ಮೂಲಕ ಸಹಕಾರಿ ವಲಯದಲ್ಲಿ ಸಂಘಟಿತ ಮಾರುಕಟ್ಟೆ ನಿರ್ಮಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ ಹೇಳಿದರು.

Advertisement

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ಚನ್ನವೀರ ಶಿವಾಚಾರ್ಯರ ರೈತ ಉತ್ಪಾದಕರ ಕಂಪನಿಗೆ ಭೇಟಿ ನೀಡಿ ಕಂಪನಿಯ ಕಾರ್ಯ ಚಟುವಟಿಕೆ ಪರಿಶೀಲಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಮೂಲಕ ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು.

ಇಂದಿನ ಪರಿಸ್ಥಿತಿಯಲ್ಲಿ ರೈತ ತಾನು ಬೆಳೆದ ಬೆಳೆಗೆ ಶೇ.40 ರಷ್ಟು ಹಣ ಪಡೆದರೆ ಮಧ್ಯವರ್ತಿ ಶೇ.60 ರಷ್ಟು ಹಣ ಪಡೆಯುತ್ತಾನೆ. ಇಂಥ ಮಾರುಕಟ್ಟೆಯ ಪರಿಸ್ಥಿತಿಯಲ್ಲಿ ರೈತನ ಶ್ರಮ ವ್ಯರ್ಥವಾಗುತ್ತಿದೆ. ಇದನ್ನು ಮನಗಂಡ ಸರಕಾರ ರೈತ ಉತ್ಪಾದಕರ ಕಂಪನಿ (ಎಫ್‌ಪಿಓ)ಗಳನ್ನು ಪ್ರಾರಂಭಿಸಲು ಮುಂದಾಗಿದೆ. ತಾಲೂಕಿಗೆ 5 ರೈತ ಉತ್ಪಾದಕರ ಕಂಪನಿ (ಎಫ್‌ಪಿಓ)ಗಳು ಸ್ಥಾಪನೆ ಮಾಡಲು ಅವಕಾಶ ಸಿಕ್ಕಿರುವುದನ್ನು ರೈತರು ಸದುಪಯೋಗ ಪಡೆಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ರಾಜ್ಯದಲ್ಲಿ ಒಟ್ಟು 10 ಸಾವಿರ ಎಫ್‌ ಪಿಓಗಳನ್ನು ಸ್ಥಾಪಿಸಲು ಒಂದು ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಆದ್ದರಿಂದ ಈ ಭಾಗದ ರೈತರು ಎಫ್‌ ಪಿಓಗಳ ಬಗ್ಗೆ ತಿಳಿದುಕೊಂಡು ಸದಸ್ಯರಾಗುವುದು ಅತ್ಯವಶ್ಯಕ ಎಂದು ಹೇಳಿದರು. ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಹಾದೇವ ಅಂಬಲಿ ಮಾತನಾಡಿ, ರೈತ ಉತ್ಪಾದಕರ ಸಂಸ್ಥೆಯು ರೈತ-ಗ್ರಾಹಕ ಸಂಬಂಧ ಬೆಸೆಯುವ ಕೆಲಸ ಮಾಡುತ್ತದೆ.

ಈ ವಹಿವಾಟಿನಲ್ಲಿ ಮಧ್ಯವರ್ತಿಯ ವ್ಯವಹಾರಕ್ಕೆ ಆಸ್ಪದವಿಲ್ಲ. ಒಂದಷ್ಟು ರೈತ ಸದಸ್ಯರು ಕಾನೂನಾತ್ಮಕವಾಗಿ ತಮ್ಮದೇ ಕಂಪನಿ ಸ್ಥಾಪಿಸಿಕೊಳ್ಳಬಹುದು ಎಂದು ಹೇಳಿದರು. ತಾಲೂಕಿನಲ್ಲಿ ಪ್ರತಿ ಹಳ್ಳಿಯಲ್ಲಿರುವ ಆಸಕ್ತ ರೈತರು ಗುಂಪು ರಚನೆ ಮಾಡಬೇಕು. ಹೋಬಳಿ ಮಟ್ಟದಲ್ಲಿ ರೈತ ಉತ್ಪಾದಕರ ಸಂಸ್ಥೆ ರಚನೆಯಾಗುತ್ತದೆ. ತಾಲೂಕಿನ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಂಚಾಲಕ ಮುತ್ತು ಶಾಬಾದಿ, ಹಿರಿಯ ಮುಖಂಡ ಚಂದ್ರಶೇಖರ ನಾಗೂರ, ಶ್ರೀಶೈಲ ಕಕ್ಕಳಮೇಲಿ, ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಕಂಪನಿಯ ತಾಂತ್ರಿಕ ಮಾರ್ಗದರ್ಶನದ ತಂಡದ ಅಧ್ಯಕ್ಷ ಬಿ.ಪಿ. ಹುಲಸಗುಂದ, ವ್ಯವಹಾರಿಕ ಅಭಿವೃದ್ಧಿಯ ತಂಡದ ಅಧ್ಯಕ್ಷ ಸುಭಾಶ ಜಾಲವಾದಿ, ಸಾಮಾಜಿಕ ಸಂಪರ್ಕ ತಂಡದ ಅಧ್ಯಕ್ಷ ಗಂಗಾಧರ ಪವಾರ, ಹಣಕಾಸಿನ ನಿರ್ವಹಣೆ ತಂಡದ ಅಧ್ಯಕ್ಷ ರೇವಣಸಿದ್ದಪ್ಪ ಬಡಾನೂರ, ನಿರ್ದೇಶಕರಾದ ಶೈಲಜಾ ಸ್ಥಾವರಮಠ, ರಮೇಶ ಪೂಜಾರ, ಶಂಕರಲಿಂಗ ನಿಗಡಿ, ಮಲ್ಲಣ್ಣ ಅಂಬಲಿ, ನಿಂಗಪ್ಪ ಭಾವಿಕಟ್ಟಿ, ಸಿಇಓ ನಿವೇದಿತಾ ಹಿರೇಮಠ ವರ್ತಕರಾದ ಬಿ.ಎಚ್‌. ಬಿರಾದಾರ ಇದ್ದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next