Advertisement

ದೇವಸ್ಥಾನ ಬದಲು ಶಾಲೆ ನಿರ್ಮಿಸಿ

05:07 PM Jun 20, 2018 | Team Udayavani |

ಬೆಳಗಾವಿ: ಗ್ರಾಮಗಳಲ್ಲಿ ದೇವಸ್ಥಾನ ಕಟ್ಟುವ ಬದಲು ಒಳ್ಳೆಯ ಶಾಲೆಗಳನ್ನು ಕಟ್ಟುವಂತೆ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಒತ್ತಾಯಿಸಬೇಕು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಸಲಹೆ ನೀಡಿದರು.

Advertisement

ನಗರದಲ್ಲಿ ಮಂಗಳವಾರ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಶಿಕ್ಷಣ ಇಲಾಖೆಯ ಸರಕಾರಿ ಶಾಲೆಗಳ ಸ್ಥಿತಿ,ಗತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳು ಬಹುತೇಕ ಬೀಳುವ ಸ್ಥಿತಿಯಲ್ಲಿವೆ. ಗ್ರಾಮಗಳಿಗೆ ಜನಪ್ರತಿನಿಧಿಗಳು ಭೇಟಿ ನೀಡಿದಾಗ ಜನರು ಅವರನ್ನು ಶಾಲೆಗಳಿಗೆ ಕರೆದುಕೊಂಡು ಹೋಗುವ ಬದಲು ದೇವಸ್ಥಾನಗಳ ಪ್ರದಕ್ಷಿಣೆ ಹಾಕಿಸುತ್ತಾರೆ. ಆದರೆ ಶಾಲೆಗಳನ್ನು ಯಾರೂ ತೋರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಖಾಸಗಿ ವಲಯದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳಿವೆ. ಆದರೆ ಸರಕಾರ ಇನ್ನಿಲ್ಲದ ಕಟ್ಟಳೆಗಳನ್ನು ಹಾಕುತ್ತದೆ. ಇದರಿಂದ ಖಾಸಗಿ ಶಾಲೆಗಳು ಸಿರಿವಂತರ ಮಕ್ಕಳಿಗೆ. ಸರಕಾರಿ ಶಾಲೆಗಳು ಬಡವರು, ಶೋಷಿತರು, ದುರ್ಬಲ ವರ್ಗದವರ ಮಕ್ಕಳಿಗೆ ಸೀಮಿತ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಇದರ ಬಗ್ಗೆ ಸರಕಾರಗಳು ಗಮನಹರಿಸಬೇಕು ಎಂದು ಹೇಳಿದರು.

ನಮ್ಮ ಕಾಲದಲ್ಲಿ ಶೇ. 45ರಷ್ಟು ಅಂಕಗಳು ಸಾಕಾಗಿದ್ದವು. ಆದರೆ ಈಗ ಶೇ.90 ಅಂಕಗಳನ್ನು ಗಳಿಸಿದರೂ ಅವರನ್ನು ಅಸ್ಪೃಶ್ಯರಂತೆ ನೋಡುತ್ತಾರೆ. ಹೀಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ವಿಶೇಷವಾಗಿ ಇಂಗ್ಲೀಷ ಹಾಗೂ ವಿಜ್ಞಾನ ಶಿಕ್ಷಕರ ಕೊರತೆ ಇದೆ. ಇದರ ಬಗ್ಗೆ ಗಮನಹರಿಸಬೇಕಾದ ಅಗಗ್ಯವಿದೆ ಎಂದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ದಶಕಗಳೇ ಕಳೆದರೂ ಜಾತಿ, ಧರ್ಮಗಳ ನಡುವಿನ ಭಿನ್ನಮತದಿಂದ ಮುಂದೆ ಬರಲು ಸಾಧ್ಯವಾಗಿಲ್ಲ. ಬೇರೆ ದೇಶಗಳು ಸ್ವಾತಂತ್ರ್ಯ  ಸಿಕ್ಕ 50 ವರ್ಷಗಳಲ್ಲಿ ಸಾಕಷ್ಟು ಮುಂದುವರೆದಿವೆ. ಭಾರತ ದೇಶ ಮಾತ್ರ ಹಿಂದೆ ಉಳಿದಿದೆ ಎಂದರು.

Advertisement

ಸರ್ವ ಶಿಕ್ಷಣ ಅಭಿಯಾನದಲ್ಲಿ ಮೊದಲು ಸರಕಾರಿ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದರು. ಆದರೆ ಕಳೆದ ಹತ್ತು ವರ್ಷದಿಂದ ಶಾಸಕ, ಸಚಿವರ ಅನುದಾನದಲ್ಲಿ ಸರಕಾರಿ ಶಾಲೆಗಳನ್ನು ಪ್ರಗತಿಯತ್ತ ಕೊಂಡೊಯ್ಯಲಾಗಿದೆ ಎಂದರು. ಯಮಕನಮರಡಿ ಕ್ಷೇತ್ರದ ಬಹುತೇಕ ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಹೆಚ್ಚಿನ ಕೊಠಡಿಗಳು, ಗ್ರಂಥಾಲಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ವಿವಿಧ ಶಾಲೆಗಳ ಶಿಕ್ಷಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸತೀಶ ಜಾರಕಿಹೊಳಿ, ಮುಂದಿನ ಸಲ ತಮ್ಮ ಶಾಸಕರ ಅನುದಾನ ಪ್ರತಿಶತ 80ರಷ್ಟು ಯಮಕನಮರಡಿ ಸರಕಾರಿ ಶಾಲೆಗಳ ಕಟ್ಟಡ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶಾಲೆಯ ಮುಖ್ಯೋಧ್ಯಾಯರು ತಮ್ಮ ಶಾಲೆಗಳ ಸಮಸ್ಯೆಗಳ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಬೇಕು. ವಾರದಲ್ಲಿ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಸದಸ್ಯ ಮಹಾದೇವಿ ರೊಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next