ಸೇಡಂ: ಪಟ್ಟಣದ ಮುಖ್ಯ ರಸ್ತೆ ಮತ್ತು ಸಿನಿಮಾ ರಸ್ತೆಗಳ ಕಾಮಗಾರಿಗಳು ಅವೈಜ್ಞಾನಿಕತೆಯಿಂದ ಕೂಡಿದ್ದು, ಕೇವಲ ಹೆಸರಿಗೆ ಮಾತ್ರ ಎನ್ನುವಂತೆ ನಿರ್ಮಿಸಲಾಗುತ್ತಿದೆ.
ಕೋಟ್ಯಂತರ ರೂ. ವ್ಯಯಿಸಿ ಮುಖ್ಯ ರಸ್ತೆ ನಿರ್ಮಿಸಲಾಗುತ್ತಿದೆ. ಪೊಲೀಸ್ ಠಾಣೆಯಿಂದ ಪ್ರವಾಸಿ ಮಂದಿರ ಮತ್ತು ರೈಲ್ವೆ ನಿಲ್ದಾಣದಿಂದ ಚೌರಸ್ತಾ, ತ್ರಿವೇಣಿ ಲಾಡ್ಜ್ದಿಂದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ವರೆಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವ ಜನರ ಬೇಡಿಕೆಗೆ ಕೆಲ ತಿಂಗಳ ಹಿಂದೆ ಚಾಲನೆ ದೊರೆತಿತ್ತು.
ಗುತ್ತಿಗೆದಾರರ ಅಚಾತುರ್ಯವೋ ಅಥವಾ ಅಧಿಕಾರಿಗಳ ಜಾಣ ಕುರುಡುತನವೋ ಗೊತ್ತಿಲ್ಲ. ಇಡೀ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದು, ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಆದರೆ ರಸ್ತೆ ಮಧ್ಯೆ ಬರುವ ವಿದ್ಯುತ್ ಕಂಬ, ಬಿಡಿ ಟೆಂಟ್‌ಗೆ ಹಾಕುವ ಹಗ್ಗವನ್ನು ತೆರವುಗೊಳಿಸಿಲ್ಲ.
ಬಿರು ಬೇಸಿಗೆಯಾಗಿದ್ದರಿಂದ ಸಿಮೆಂಟ್‌ಗೆ ಸರಿಯಾಗಿ ನೀರುಣಿಸದೇ ಇದ್ದಲ್ಲಿ ಭವಿಷ್ಯದಲ್ಲಿ ಬಿರುಕು ಬಿಡುವ ಸಂಭವವಿದ್ದರೂ ನೀರುಣಿಸುವ ಕಾರ್ಯ ಅಸಮರ್ಪಕವಾಗಿದೆ ಎನ್ನುವುದು ಸಾರ್ವಜನಿಕರ ದೂರಾಗಿದೆ. ಸರಸ್ವತಿ ಟಾಕೀಸ್ ರಸ್ತೆಯೂ ಕಳಪೆ ಮಟ್ಟದಿಂದ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಮಧ್ಯದ ಕಂಬಗಳನ್ನು ತೆರವುಗೊಳಿಸುತ್ತಿಲ್ಲ.
ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಕಾಮಗಾರಿ ಜೊತೆ ಜೊತೆಗೆ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಎಚ್ಚರಿಕೆವಹಿಸಬೇಕಾದ ಗುತ್ತಿಗೆದಾರರು ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಕಾಮಗಾರಿ ಪ್ರಗತಿಯಲ್ಲಿರುವ ಕುರಿತು ಎಚ್ಚರಿಕೆ ಫಲಕ ಅಥವಾ ಪರ್ಯಾಯ ಮಾರ್ಗದ ಸೂಚಿಯನ್ನು ಬಳಸಿಲ್ಲ.
ಟ್ರಾಫಿಕ್ ಕಿರಿಕಿರಿ: ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಚಾತುರ್ಯಕ್ಕೆ ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುವ ಅನೇಕ ವಾಹನಗಳು, ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಪರ್ಯಾಯ ಮಾರ್ಗದ ಸೂಚಿ ಇಲ್ಲದ ಪರಿಣಾಮ ಪರದಾಡುವಂತಾಗಿದೆ.