Advertisement

ಕೆರೆಗೊಂದು ಕಟ್ಟೆ ಕಟ್ಟಿ, ಚೆಂದದೊಂದು ರಸ್ತೆ ಮಾಡಿ

09:55 PM Feb 13, 2020 | Sriram |

ಕುಂದಾಪುರ: ಸೂರ್ನಳ್ಳಿ ರಸ್ತೆಯಲ್ಲಿ ಮುಂದೆ ಸಾಗಿದಂತೆ ವೆಸ್ಟ್‌ಬ್ಲಾಕ್‌ ವಾರ್ಡ್‌ ಆರಂಭವಾಗುತ್ತದೆ. ಈ ರಸ್ತೆಯೇ ಒಳಚರಂಡಿ ಕಾಮಗಾರಿಯಿಂದಾಗಿ ಬರ್ಬಾದ್‌ ಆಗಿ ಹೋಗಿದೆ.

Advertisement

ಒಳಚರಂಡಿ ಇಲ್ಲ
ಈ ವಾರ್ಡ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಒಳಚರಂಡಿ ಕಾಮಗಾರಿಯಾಗಿದ್ದರೂ ಇನ್ನಷ್ಟು ಕಡೆ ಆಗಬೇಕಿದೆ. ಈಗ ಕೆಲವೆಡೆ ಫ್ಲಾಟ್‌ಗಳ ನೀರು ಚರಂಡಿ ಮೂಲಕ ಹರಿದು ಗದ್ದೆಗೆ ಹೋಗುತ್ತದೆ. ಇದರಿಂದ ಮಳೆಗಾಲದಲ್ಲಿ ಕೆಲವು ಮನೆಗೂ ಆ ಗಲೀಜು ನೀರು ನುಗ್ಗುತ್ತವೆ ಎಂಬ ಆರೋಪವಿದೆ. ಹಾಗಾಗಿ ಒಳಚರಂಡಿ ಕಾಮಗಾರಿ ಆದಷ್ಟು ಶೀಘ್ರ ಆರಂಭಿಸಬೇಕು ಎನ್ನುತ್ತಾರೆ ಇಲ್ಲಿನವರು.

ಕೆರೆಗಳಿಂದ ಆತಂಕ
ಒಂಭತ್ತುದಂಡಿಗೆಯಲ್ಲಿ ಇರುವ ಕೆರೆಗಳು ಕೂಡಾ ಪರಿಸರದ ಮನೆಯ ವರಿಗೆ ಹೆದರಿಕೆ ಹುಟ್ಟಿಸುತ್ತಿವೆ. ದಶಕಗಳ ಹಿಂದೆ ಈ ಕೆರೆಗಳ ನೀರು ಕೃಷಿ ಚಟುವಟಿಕೆಗೆ ಉಪಯೋಗವಾಗುತ್ತಿತ್ತು. ಬಾವಿ ನೀರು ಆರಿದಾಗ ಕೆರೆ ನೀರು ಕುಡಿಯಲೂ ಆಗುತ್ತಿತ್ತು. ಅನಂತರದ ದಿನಗಳಲ್ಲಿ ಕೃಷಿ ಹಿಂದೆ ಬಿತ್ತು, ಬಾವಿ ನೀರು ಧಾರಾಳವಾಯ್ತು. ಕೆರೆ ಪಾಳು ಬಿತ್ತು, ಹೂಳು ತುಂಬಿತು. ಈಗ ಕೆರೆಯ ನೀರು ಪಾಚಿಗಟ್ಟಿ ವಾಸನೆಯಿಂದಿದೆ. ಮಳೆ ನೀರು ಹನಿದಾಗ ವಾಸನೆ ಇಡೀ ಪರಿಸರವನ್ನು ರಾಚುತ್ತದೆ. ಕೆರೆನೀರು ಉಕ್ಕಿ ಹರಿದು ಪಕ್ಕದ ಗದ್ದೆಯಲ್ಲಿ ಸಂಗ್ರಹವಾದ ನೀರು ಒಂದಾಗುತ್ತದೆ. ಕೆರೆ ಪಕ್ಕದಲ್ಲಿರುವ ದಾರಿ ಕಾಣದಾಗುತ್ತದೆ. ರಾತ್ರಿಯಾಗಲೀ, ಹಗಲಾಗಲೀ ನದಿ ದಾಟಿದಂತಹ ಸಾಹಸ ಮಾಡಬೇಕಾಗುತ್ತದೆ. ಮಳೆಗಾಲದ ಮೂರ್ನಾಲ್ಕು ತಿಂಗಳು ಶಿಕ್ಷೆ ಇದ್ದದ್ದೇ. ಬೇಸಗೆಯಲ್ಲಿ ನೀರು ಕೊಳೆತ ವಾಸನೆ, ಜತೆಗೆ ಸೊಳ್ಳೆ ಕಾಟ ಎನ್ನುತ್ತಾರೆ ಇಲ್ಲಿನ ನಿವಾಸಿ ಅರುಣಾ. ಜೋಗಯ್ಯನಮನೆ ಕೆರೆ, ಬೀರಿಮನೆ ಹತ್ರದ ಕೆರೆ ಶುಚಿಯಾಗಬೇಕಿದ್ದು ದಾರಿ ಅಭಿವೃದ್ಧಿಯಾಗಬೇಕಿದೆ.

ಅಪಾಯಕಾರಿ ಚರಂಡಿ
ಚಿಕ್ಕಮ್ಮ ದೇವಸ್ಥಾನಕ್ಕಿಂತ ಮುಂದೆ ರಸ್ತೆ ಬದಿ ಇರುವ ಚರಂಡಿ ತೀರಾ ಅಪಾಯಕಾರಿಯಾಗಿದೆ. ತೆರೆದ, ಭಾರೀ ಗಾತ್ರದ ಸ್ಥಳೀಯವಾಗಿ ತೋಡು ಎಂದು ಕರೆಯಲ್ಪಡುವ ಮಳೆಗಾಲದ ನೀರು ಹರಿಯಲು ಮಾಡಿದ ಈ ವ್ಯವಸ್ಥೆಯಲ್ಲಿ ಕೆಲವು ಮನೆಯವರು ತ್ಯಾಜ್ಯ ನೀರು ಬಿಡುತ್ತಾರೆ. ರಸ್ತೆಯ ಅಂಚು ಚರಂಡಿಯ ಅಂಚು ಒಂದೇ ಆದ ಕಾರಣ ಇಲ್ಲಿ ಆದ ಅನಾಹುತಗಳಿಗೆ ಲೆಕ್ಕವಿಲ್ಲ. ಇದಕ್ಕೆ ಚಿಕ್ಕಮ್ಮ ದೇವಸ್ಥಾನಕ್ಕಿಂತ ಮೊದಲೇ ಆರಂಭವಾಗುವಂತೆ ಸ್ಲಾಬ್‌ ಹಾಕಬೇಕಿದೆ. ದೇವಸ್ಥಾನದ ನಂತರವಂತೂ ಗಾತ್ರ ಹಿರಿದಾದ ಕಾರಣ ಇದಕ್ಕೆ ವೃದ್ಧರು, ಬೈಕ್‌ ಸವಾರರು, ಸೈಕಲ್‌ ಸವಾರರು ಆಗಾಗ ಬಿದ್ದ ಉದಾಹರಣೆಗಳಿವೆ. ಶಾಲಾ ಮಕ್ಕಳನ್ನು ಕಳುಹಿಸಲು ಭಯಪಡುತ್ತಾರೆ. ಬೇಸಗೆಯಾದರೆ ಸವಾರರಿಗೆ ಭಯ, ಮಳೆಗಾಲವಾದರೆ ಮಕ್ಕಳನ್ನು ಕಳುಹಿಸಲು ಭಯ ಎಂಬ ಸ್ಥಿತಿ ಇದೆ. ಇದಕ್ಕೆ ಸ್ಲಾಬ್‌ ಅಳವಡಿಸಿ ಮುಚ್ಚಿದರೆ ರಸ್ತೆಯೂ ಅಗಲವಾಗಲಿದೆ. ತ್ಯಾಜ್ಯ ನೀರು ನಿಂತು ಸುತ್ತಲಿನ ಮನೆಯವರಿಗೆ ಸೊಳ್ಳೆ ಕಡಿಯುವುದು ತಪ್ಪುತ್ತದೆ. ವಾಸನೆಯೂ ಬರುವುದಿಲ್ಲ. ಇದು ಸುಮಾರು 20 ವರ್ಷದಿಂದ ನಾವಿಡುತ್ತಿರುವ ಬೇಡಿಕೆ, ಇನ್ನೂ ಈಡೇರಿಲ್ಲ ಎನ್ನುತ್ತಾರೆ ಇಲ್ಲಿನ ಜನ.

ಕಾಮಗಾರಿ
ಈಚೆಗೆ ಚರ್ಚ್‌ರೋಡ್‌ ಬಳಿ 4 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್‌ ಅಳವಡಿಸಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಇಂಪೀರಿಯಲ್‌ ಫ್ಲಾಟ್‌ ಬಳಿ 1.5 ಲಕ್ಷ ರೂ. ವೆಚ್ಚದಲ್ಲಿ ಜಲ್ಲಿಕಲ್ಲಿನ ಮಿಶ್ರಣ ಹಾಕಿ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ. ಮದ್ದುಗುಡ್ಡೆ ಒಂಬತ್ತುದಂಡಿಗೆ ರಸ್ತೆಗೆ ಕಾಂಕ್ರಿಟೀಕರಣ ಆಗಬೇಕಿದೆ. ಕೆಲವು ವಿವಿಧ ಕಡೆ ದಾರಿದೀಪಗಳನ್ನು ಅಳವಡಿಸಬೇಕಿದೆ.

Advertisement

ಕೆರೆಯೇ ಆತಂಕಕಾರಿ
ಮನೆ ಪಕ್ಕದಲ್ಲಿಯೇ ಕೆರೆ ಇದ್ದು ಬೇಸಗೆಯಲ್ಲಿ ನೀರು ನಿಂತು ಸೊಳ್ಳೆ ಕಾಟ, ಮಳೆಗಾಲ ದಲ್ಲಿ ಕೆರೆ ನೀರು ಗದ್ದೆ ನೀರು ಒಂದಾಗಿ ದಾರಿ ಕಾಣದೇ ಮನೆಯಿಂದ ಹೊರಬರುವುದೇ ಆತಂಕ ಮೂಡಿಸುತ್ತದೆ.
-ಜಯ, ಒಂಭತ್ತುದಂಡಿಗೆ

ತೋಡಿಗೆ ಸ್ಲಾಬ್‌ ಅಳವಡಿಸಿ ಅನೇಕ ಮನೆಗಳನ್ನು ಹಾದು ಹೋಗುವ ತೋಡಿಗೆ ಸ್ಲಾಬ್‌ ಅಳವಡಿಸ ಬೇಕು. ಇದು ತೀರಾ ಅಪಾಯಕಾರಿಯಾಗಿದ್ದು ಚರಂಡಿಯಲ್ಲಿ ನೀರು ನಿಂತು ಕ್ರಿಮಿಕೀಟ ಉತ್ಪತ್ತಿಯಾಗಿ ಅನಾರೋಗ್ಯಬಾಧೆ ಆಗುವುದಕ್ಕೂ ಸ್ಲಾಬ್‌ ಅಳವಡಿಸಿದರೆ ಮುಕ್ತಿ ಸಿಗಲಿದೆ.
-ಸುಜಾತಾ, ಒಂಭತ್ತುದಂಡಿಗೆ

ದಾರಿಗಳ ಬೇಡಿಕೆಯಿದೆ
ಚರ್ಚ್‌ರೋಡ್‌ ಹಾಗೂ ಒಂಬತ್ತುದಂಡಿಗೆ ಯನ್ನು ಸಂಪರ್ಕಿಸುವ ಸುಮಾರು 25 ಮನೆಗಳಿಗೆ ತುರ್ತಾಗಿ ಅವಶ್ಯವಿರುವ ರಸ್ತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದು. ಹಲವಾರು ವರ್ಷಗಳಿಂದ ಕೆಲವು ರಸ್ತೆಗಳ ಬೇಡಿಕೆಯಿದ್ದು ಅನುದಾನ ಬಿಡುಗಡೆಯಾದ ಕೂಡಲೇ ಮೊದಲು ಮಾಡಬೇಕಾದ ಒಂದಷ್ಟು ಕೆಲಸಗಳಿವೆ. ಮದ್ದುಗುಡ್ಡೆ ಮೇಸ್ತರ ಮನೆ ಸಮೀಪ ತೋಡಿಗೆ ಚಪ್ಪಡಿ ಹಾಕಿ ರಸ್ತೆ ಮಾಡುವ ಕೆಲಸ ಕೂಡಾ ಆಗಬೇಕಿದೆ. ವಾರ್ಡ್‌ ಅಭಿವೃದ್ಧಿಗೆ ಸಾಕಷ್ಟು ಕೆಲಸ ಕಾರ್ಯಗಳಾಗಬೇಕಿದ್ದು ಸಾರ್ವಜನಿಕರ ಬೇಡಿಕೆ ಪಡೆಯಲಾಗಿದೆ.
-ಅಶ್ವಿ‌ನಿ ಪ್ರದೀಪ್‌, ಸದಸ್ಯರು, ಪುರಸಭೆ

ಆಗಬೇಕಾದ್ದೇನು?
-ಚರಂಡಿಗೆ ಸ್ಲಾಬ್‌ ಅಳವಡಿಸಬೇಕು.
-ಕೆರೆ ಶುಚಿ, ತಡೆಗೋಡೆ ಕಟ್ಟಿ ರಸ್ತೆ ಮಾಡಬೇಕು.
-ರಸ್ತೆ ಅಭಿವೃದ್ಧಿಗೊಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next