Advertisement

ಶ್ರೇಷ್ಠ ತಾಂತ್ರಿಕ ಬೆಂಬಲ ವ್ಯವಸ್ಥೆಯನ್ನು ರೂಪಿಸಿ: ಬಾಷ್ ಸಂಸ್ಥೆಗೆ ಸಿಎಂ ಸಲಹೆ

06:57 PM Jun 30, 2022 | Team Udayavani |

ಬೆಂಗಳೂರು: ಹೊಸ ಆಯಾಮ, ಸಂಶೋಧನೆಗಳ ಮೂಲಕ ಬೆಂಗಳೂರಿನಲ್ಲಿ ಶ್ರೇಷ್ಠ ತಾಂತ್ರಿಕ ಬೆಂಬಲ ವ್ಯವಸ್ಥೆಯನ್ನು ರೂಪಿಸುವಂತೆ ಬಾಷ್ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

Advertisement

ಅವರು ಗುರುವಾರ ಆಡುಗೋಡಿಯಲ್ಲಿ ನಿರ್ಮಿಸಿರುವ ಬಾಷ್ ಸ್ಮಾರ್ಟ್ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕಾರ್ಯಕ್ರಮ ವರ್ಚುಯಲ್ ಆಗಿ ಉದ್ಘಾಟನೆ ಮಾಡಿದರು.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿಯವರು ಶಿಕ್ಷಣ, ಆರೋಗ್ಯ, ಉತ್ಪಾದನೆ, ಸಂಶೋಧನೆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮುಂದಿನ 25 ವರ್ಷಗಳು ಬಹಳ ಪ್ರಮುಖವಾಗಿದ್ದು, ಅದನ್ನು ಅಮೃತ ಕಾಲ ಎಂದು ಕರೆಯಲಾಗಿದೆ. ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ, ಸಮೃದ್ಧತೆ, ಜನರ ಜೀವನಮಟ್ಟ ಸುಧಾರಣೆ, ಉತ್ತಮ ಪರಿಸರ , ಪರಿಸರ ಮತ್ತು ಉದ್ಯಮಗಳ ಸಂಯೋಜನೆಗೆ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ತನ್ನ ಛಾಪನ್ನು ಮೂಡಿಸಿರುವ ಬಾಷ್ ಸಂಸ್ಥೆ ಮೇಲ್ಪಂಕ್ತಿ ಹಾಕಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಬಾಷ್ ಸಂಸ್ಥೆ ಒಂದು ಸಂಸ್ಕೃತಿಯಾಗಿ ಬೆಳೆದಿದೆ
ಬಾಷ್ ಕಂಪನಿ ಯುವ ಇಂಜಿನಿಯರ್ಸ್‍ಗಳ ಕನಸಿನ ಸಂಸ್ಥೆಯಾಗಿದೆ. ನಾನು ಇಂಜಿನಿಯರ್ ಕಾಲೇಜಿನಲ್ಲಿದ್ದಾಗ ಟಾಟಾ ಮೋಟರ್ಸ್, ಬಾಷ್ ನಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದೆ. ಇದು ಕೇವಲ ಉತ್ಪಾದನಾ ಅಥವಾ ಸಾಫ್ಟ್‍ವೇರ್ ಕಂಪನಿಯಲ್ಲ, ಬಾಷ್ ಒಂದು ಸಂಸ್ಕøತಿಯಾಗಿ ಬೆಳೆದಿದೆ. ಬದ್ಧತೆ, ಸಮರ್ಪಣೆ, ಪರಿಶ್ರಮಗಳಿಂದ ಇದು ಸಾಧ್ಯವಾಗಿದೆ. ಬಾಷ್ ಸಂಸ್ಥೆಯ 100 ವರ್ಷಗಳು ತನ್ನ ಸಾಧನೆಯನ್ನು ತಾನೇ ಹೇಳುತ್ತದೆ. ಸ್ವಾತಂತ್ರ್ಯದ ಮುಂಚೆಯೇ ಭಾರತವನ್ನು ಆಧುನಿಕ ಆರ್ಥಿಕ ಕೇಂದ್ರವಾಗಿ ಗುರುತಿಸಿ, ಭಾರತಕ್ಕೆ ಪ್ರವೇಶಿಸಿದರು. ಆರ್ಥಿಕ ಸ್ವಾವಲಂಬನೆಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಲು ಕಾರಣವಾಯಿತು. ವಿಶ್ವ ಎರಡು ಮಹಾಯುದ್ಧಗಳನ್ನು ಕಂಡಿದೆ. ಬಾಷ್ ಎರಡೂ ಯುದ್ಧಗಳ ನಡುವೆಯೂ ಬೆಳೆದಿದೆ. ಮಹಾಯುದ್ಧಗಳು ಹೊಸ ತಂತ್ರಜ್ಞಾನ, ಹೊಸ ಉತ್ಪನ್ನಗಳಿಗೆ ನಾಂದಿಯಾಯಿತು. ಬಾಷ್ ನಲ್ಲಿನ ವಿನ್ಯಾಸಗಳ ನಿಖರತೆಯನ್ನು ಅವುಗಳ ಉತ್ತಮ ಉತ್ಪನ್ನಗಳು ನಿರೂಪಿಸುತ್ತವೆ. ಬಾಷ್ ತನ್ನ ಸದೃಢ ಸಾಧನೆಗಳಿಂದ ವಿಶ್ವದಲ್ಲಿ ಖ್ಯಾತಿ ಪಡೆದಿದೆ ಎಂದರು.

ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ
ಬೆಂಗಳೂರು ತನ್ನ ಪರಿಶ್ರಮದಿಂದ ತಾಂತ್ರಿಕ ಹಬ್ ಆಗಿದೆ. ಹಿಂದಿನಿಂದಿಲೂ ರಾಜ್ಯ ಹಾಗೂ ಕೇಂದ್ರ ಪಿಎಸ್‍ಯುಗಳ ತಾಂತ್ರಿಕತೆ, ಸಂಶೋಧನೆಗಳು, ಬೆಂಗಳೂರು ನಗರವನ್ನು ಐಟಿಬಿಟಿ ನಗರವಾಗಲು ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿವೆ. ಜೆನಿಟಿಕ್ಸ್ ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ 400 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. 400 ಫಾರ್ಚೂನ್ ಕಂಪನಿಗಳು ಇಲ್ಲಿವೆ. ಏರೋಸ್ಪೇಸ್, ನವೀಕರೀಸಬಹುದಾದ ಇಂಧನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೆಮಿಕಂಡಕ್ಟರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೈಡ್ರೋಜನ್ ಇಂಧನದ ಉತ್ಪಾದನೆಗೆ ಒತ್ತು ನೀಡಲಾಗಿದ್ದು, ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದರು.

Advertisement

ಬಾಷ್ ಸಂಸ್ಥೆಯ ಯೋಜನೆಗಳಿಗೆ ರಾಜ್ಯ ಸರ್ಕಾರ ಹೆಗಲಿಗೆ ಹೆಗಲು ನೀಡಲಿದೆ. ಬಾಷ್ ಸಂಸ್ಥೆಯ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಸಲಹೆ ನೀಡಿದರು. ಬಾಷ್‍ನ ಸ್ಮಾರ್ಟ್ ಕ್ಯಾಂಪಸ್ ಪರಿಸರ ಸ್ನೇಹಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next