Advertisement

ತಪ್ಪಿದ ಗಣಿನಾಡ ಗಣಿತ! : ವಿಜಯನಗರ ಜಿಲ್ಲೆಗೆ ಇಲ್ಲ ಅನುದಾನ

12:39 PM Mar 09, 2021 | Team Udayavani |

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಈಚೆಗೆ ರಚನೆಯಾಗಿರುವ ನೂತನ ವಿಜಯನಗರ ಜಿಲ್ಲೆಯ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಹೊಸ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯವಾಗಿ ಹೆಚ್ಚಿನ ಅನುದಾನ ಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಅವರು ನೂತನ ಜಿಲ್ಲೆಗೆ ಬಜೆಟ್‌ನಲ್ಲಿ 50 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ, ಈ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲದಿರುವುದು ನೂತನ ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿದೆ.

Advertisement

ಬಳ್ಳಾರಿ: ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ ಅವಿಭಜಿತ ಗಣಿನಾಡು ಬಳ್ಳಾರಿ ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿದೆ. ದಶಕದ ಬೇಡಿಕೆಯಾಗಿದ್ದ ಕೃಷಿ ಪದವಿ ಕಾಲೇಜು ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲದಿರುವುದು, ನೂತನ ವಿಜಯನಗರ ಜಿಲ್ಲೆಗೆ ಯಾವುದೇ ಅನುದಾನ ಘೋಷಿಸದಿರುವುದು ಜಿಲ್ಲೆಯ ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದ್ದು, ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಒಂದೆರಡು ಪ್ರಯೋಗಾಲಯ ಆರಂಭಿಸುವುದಾಗಿ ತಿಳಿಸಿರುವುದು ಒಂದಷ್ಟು ಸಮಾಧಾನಕರವಾಗಿದೆ.

ಕೃಷಿ ಕಾಲೇಜು ಪ್ರಸ್ತಾಪ ಇಲ್ಲ: ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪದವಿ ಕಾಲೇಜು ಆರಂಭಿಸಬೇಕೆಂಬ ಜಿಲ್ಲೆಯ ಜನರ ದಶಕದ ಬೇಡಿಕೆಗೆ ಸರ್ಕಾರದಿಂದ ಈ ಬಜೆಟ್‌ನಲ್ಲೂ ಯಾವುದೇ ಪ್ರಸ್ತಾಪವಿಲ್ಲ. ಕೃಷಿ ಪದವಿ ಕಾಲೇಜಿಗಾಗಿ ಜಿಲ್ಲೆಯ ಜನಪ್ರತಿನಿಧಿ  ಗಳು, ಬುದ್ಧಿಜೀವಿಗಳು ಹಲವು ಬಾರಿ ಸರ್ಕಾರದ ಗಮನ ಸೆಳೆದರೂ ಬಜೆಟ್‌ನಲ್ಲಿ ಘೋಷಣೆಯಾಗದಿರುವುದು ಜಿಲ್ಲೆಯಜನರಲ್ಲಿ ಬೇಸರ ಮೂಡಿಸಿದೆ. ಇನ್ನು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಿಸಲು ಕ್ರಮಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಹಿಂದೆಯೇ ಸಮತೋಲನ ಜಲಾಶಯ ನಿರ್ಮಿಸಲು ಡಿಪಿಆರ್‌ ಸಿದ್ಧಪಡಿಸುವಂತೆ ಅನುದಾನ ನೀಡಿ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿತ್ತು. ಡಿಪಿಆರ್‌ ಸಿದ್ಧವಾಗಿದೆಯೇ, ಅನುದಾನ ಬಿಡುಗಡೆಯಾಗಿದೆಯೇ ಎಂಬುದು ಸ್ಪಷ್ಟತೆ ಇಲ್ಲ. ಇದೀಗ ಮತ್ತೂಮ್ಮೆ ಕ್ರಮ ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಸಮತೋಲನ ಜಲಾಶಯ ನಿರ್ಮಿಸುವ ಬೇಡಿಕೆ ಕಳೆದ ಮೂರು ದಶಕಗಳಿಂದ ಇದ್ದರೂ, ಗಂಭೀರವಾಗಿ ಪರಿಗಣಿಸದ ರಾಜ್ಯ ಸರ್ಕಾರ, ಇನ್ನೂ ಕ್ರಮ ಕೈಗೊಳ್ಳುವುದರಲ್ಲೇ ಕಾಲ ಕಳೆಯುತ್ತಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

ಮೆಣಸಿನಕಾಯಿ ಮಾರುಕಟ್ಟೆ: ಬಳ್ಳಾರಿ ನಗರ ಹೊರವಲಯದ ಆಲದಹಳ್ಳಿ ಬಳಿ ಅತ್ಯಾಧುನಿಕ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಆದರೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿ ಅಂದಿನ ಜಿಲ್ಲಾಉಸ್ತುವಾರಿ ಸಚಿವರಾಗಿದ್ದ ಸಂತೋಷ್‌ಲಾಡ್‌ ಅವರು, ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಆರಂಭಿಸಿದ್ದರು. ಜಿಲ್ಲೆಯ ಮೆಣಸಿನಕಾಯಿ ಬೆಳೆಯುವ ರೈತರು ಯಾರೊಬ್ಬರೂ ಅಲ್ಲಿಗೆ ಹೋಗಲಿಲ್ಲ.ಮುಖ್ಯವಾಗಿ ಅಲ್ಲಿಗೆ ಖರೀದಿದಾರರೇ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು ಬ್ಯಾಡಗಿ ಮಾರುಕಟ್ಟೆಯನ್ನೇ ನೆಚ್ಚಿಕೊಂಡಿದ್ದು, ಅಲ್ಲಿಗೆ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿದರೂ ಮುಖ್ಯವಾಗಿ ಖರೀದಿದಾರರು ಬರಬೇಕು. ಹೀಗಾಗಿ ಪ್ರತ್ಯೇಕ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸುವುದು ಒಂದಷ್ಟು ಸಮಾಧಾನ ಮೂಡಿಸಿದರೂ, ಅದನ್ನು ರೈತರು ಎಷ್ಟರ ಮಟ್ಟಿಗೆ ಬಳಸಿಕೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.

ತುರ್ತು ಚಿಕಿತ್ಸಾ ವಿಭಾಗ: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಡಿ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಈಗಾಗಲೇ ತುರ್ತು ಚಿಕಿತ್ಸಾ ವಿಭಾಗ (ಟ್ರಾಮಾ ಕೇರ್‌ ಸೆಂಟರ್‌) ಇದೆ. ಇದನ್ನು ಕೋವಿಡ್‌ ಸಂದರ್ಭದಲ್ಲಿ ಕೋವಿಡ್‌ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲಾಗಿದೆ.ಇದೀಗ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಪುನಃ ತುರ್ತು ಚಿಕಿತ್ಸಾ ವಿಭಾಗ ಆರಂಭಿಸುವುದಾಗಿ ಘೋಷಿಸಿದೆ. ಈ ಕುರಿತು ವಿಮ್ಸ್‌ ನಿರ್ದೇಶಕ ಗಂಗಾಧರಗೌಡರನ್ನು ಸಂಪರ್ಕಿಸಿದಾಗ ಕೇಂದ್ರ ಸರ್ಕಾರದ ಅನುದಾನದಲ್ಲಿ ಟ್ರಾಮಾಕೇರ್‌ ಸೆಂಟರ್‌ ಕಟ್ಟಡವನ್ನು ನಿರ್ಮಿಸಲಾಗಿದೆ. ರಾಜ್ಯ ಸರ್ಕಾರದಿಂದ ಅದನ್ನು ನಿರ್ವಹಣೆ ಮಾಡಲಾಗುತ್ತದೆ ಎಂದವರು ಸ್ಪಷ್ಟಪಡಿಸಿದರು.

Advertisement

ಪ್ರಯೋಗಾಲಯ ಸ್ಥಾಪನೆ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಬಳ್ಳಾರಿಯಲ್ಲಿ ನವಜಾತ ಶಿಶುಗಳಲ್ಲಿ ಅನುವಂಶೀಯಮೆಟಾಬಾಲಿಕ್‌ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚಲು 10 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿ-ಬೆಂಗಳೂರಿನಲ್ಲಿ ಪ್ರಯೋಗಾಲಯ ಆರಂಭಿಸುವುದಾಗಿ ಘೋಷಿಸಿರುವುದುಒಂದಷ್ಟು ಸಮಾಧಾನ ಮೂಡಿಸಿದೆ. ಅನುವಂಶೀಯ ಕಾಯಿಲೆ(ಜನೆಟಿಕ್‌ ಡಿಜಾರ್ಡರ್‌) ಯಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ಈ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚಿದಲ್ಲಿ ಚಿಕಿತ್ಸೆ ನೀಡಲುಸಾಧ್ಯವಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್‌. ಎಲ್‌. ಜನಾರ್ದನ್‌ ತಿಳಿಸಿದ್ದಾರೆ. ಇನ್ನು ಬಳ್ಳಾರಿ-ಹುಬ್ಬಳ್ಳಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಪ್ರಾರಂಭಿಸುವುದಾಗಿ ಬಜೆಟ್‌ ನಲ್ಲಿ ಘೋಷಣೆಯಾಗಿದೆ.

ಬೂದಿಗುಡ್ಡಕ್ಕೆ 2 ಕೋಟಿ: ತಾಲೂಕಿನ ಸಂಗನಕಲ್ಲು ನವಶಿಲಾಯುಗದಿಂದ ಕಬ್ಬಿಣಯುಗದ ಐತಿಹಾಸಿಕ ವಸ್ತುಗಳ ಸಂರಕ್ಷಣೆಗೆ 5 ಕೋಟಿ ರೂ. ಮತ್ತು ಕುಡತಿನಿ ಬಳಿಯ ಆಶ್‌ ಮೌಂಡ್‌ (ಬೂದಿ ದಿಪ್ಪ) ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಂಪಿಗೂ ಆದ್ಯತೆ ದೊರೆಯಬಹುದಾಗಿದೆ. ಇನ್ನು ಕಲ್ಯಾಣ ಕರ್ನಾಟಕ್ಕೆ ಅಭಿವೃದ್ಧಿ ಮಂಡಳಿಗೆ ಹಿಂದಿನಂತೆ ಈ ಬಾರಿಯೂ 1500 ಕೋಟಿ ರೂ. ಅನುದಾನ ಘೋಷಿಸಿರುವುದು ಅಲ್ಪಮಟ್ಟಿಗೆ ಸಮಾಧಾನ ಮೂಡಿಸಿದೆ.

ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ ನಿರಾಶಾದಾಯಕವಾಗಿದೆ. ಬಜೆಟ್‌ನಲ್ಲಿ ಅನುದಾನವೇ ಇಲ್ಲ. ಬರೀ ಘೋಷಣೆಗಳು ಮಾತ್ರ ಇವೆ. ಜಿಎಸ್‌ಟಿ ಮೇಲೆ ಸಾಲ ಮಾಡಿರುವ ರಾಜ್ಯಸರ್ಕಾರಕ್ಕೆ ಆದಾಯವೇ ಇಲ್ಲ. ಆರ್ಥಿಕತೆ ಅಸಮತೋಲನವಾಗಿದೆ. ಬಜೆಟ್‌ನಲ್ಲಿ ರೈತರ ಸಾಲ, ಬಡ್ಡಿ ಮನ್ನಾ ಬಗ್ಗೆ ಪ್ರಸ್ತಾಪವೇ ಇಲ್ಲ. ಇಂಧನ ಬೆಲೆಯಲ್ಲಿ ಯಾವುದೇ ಕ್ರಮವಿಲ್ಲ. ಉಪಚುನಾವಣೆಇರುವುದರಿಂದ ಜನರ ಕಣ್ಣೊರೆಸುವ ಬಜೆಟ್‌ ಆಗಿದೆ. ಆರೋಗ್ಯ, ಶಿಕ್ಷಣಇಲಾಖೆಗೆ ಅನುದಾನ ಕಡಿಮೆ ಮಾಡಿ,ಅಭಿವೃದ್ಧಿ ಹೇಗೆ? ಯಾವುದಕ್ಕೆ ಎಷ್ಟು ಖರ್ಚು ಮಾಡಲಿದ್ದಾರೆ? ಹೇಗೆ ಖರ್ಚು ಮಾಡಲಿದ್ದಾರೆ ಎಂಬುದಕ್ಕೆ ಸ್ಪಷ್ಟತೆಯೇ ಇಲ್ಲ. ನಿರಾಶಾದಾಯಕ ಬಜೆಟ್‌. ಜಿ.ಎಸ್‌.ಮಹ್ಮದ್‌ ರಫೀಕ್‌, ಬಿ.ವಿ. ಶಿವಯೋಗಿ, ಕಾಂಗ್ರೆಸ್‌ ನಗರ ಮತ್ತು ಗ್ರಾಮೀಣ ಜಿಲ್ಲಾಧ್ಯಕ್ಷರು, ಬಳ್ಳಾರಿ.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಬಳ್ಳಾರಿ ಜಿಲ್ಲೆಗೆ ಏನೂ ನೀಡದೆ, ಬಳ್ಳಾರಿ ಜಿಲ್ಲೆಯನ್ನು ಮರೆತೇ ಹೋಗಿದೆ ಎನಿಸುತ್ತದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ 7 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮುಖ್ಯವಾಗಿ ಬಜೆಟ್‌ನಿಂದ ಉದ್ಯೋಗ ಸೃಷ್ಟಿಯಾಗಬೇಕು. ಅದಕ್ಕಾಗಿ ಹಣ ಖರ್ಚು ಮಾಡಿ ಮೂಲಸೌಲಭ್ಯ

ಕಲ್ಪಿಸಿದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಬಂದು ಉದ್ಯೋಗ ಸೃಷ್ಟಿಯಾಗಲಿದೆ. ಕೋವಿಡ್‌ನಿಂದ ಆದಾಯದ ಸಂಪನ್ಮೂಲಗಳು ಕಡಿತವಾದರೂ,  ಖಾಸಗಿ ಸಹಭಾಗಿತ್ವದಲ್ಲಾದರೂ ಕೈಗಾರಿಕೆಗಳಿಗೆಆದ್ಯತೆ ನೀಡಬೇಕು. ಬಜೆಟ್‌ನಲ್ಲಿ ಅದಕ್ಕೆ ಯಾವುದೇ ಆಸ್ಪದವಿಲ್ಲ. ಬಳ್ಳಾರಿಯನ್ನು ಸ್ಮಾರ್ಟ್‌ ಸಿಟಿಗೆ ಶಿಫಾರಸ್ಸು ಮಾಡುವಂತೆ ಸಲ್ಲಿಸಿದ್ದ ಮನವಿ ಪರಿಗಣಿಸಿಯೇ ಇಲ್ಲ. –ಡಾ| ರಮೇಶ್‌ ಗೋಪಾಲ್‌, ಉದ್ಯಮಿಗಳು, ಬಳ್ಳಾರಿ

 

-ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next