Advertisement

ದೀಪಾವಳಿಗೆ ಎಮ್ಮೆ ಗಳ ಮೆರವಣಿಗೆ

12:26 PM Oct 29, 2019 | Suhan S |

ಗದಗ: ಬೆಳಕಿನ ಹಬ್ಬ ದೀಪಾವಳಿಗೆ ಜನರು ಮನೆಯಂಗಳವನ್ನು ಹಸಿರು ತೋರಣಗಳಿಂದ ಶೃಂಗರಿಸಿ, ಸಿಹಿ ತಿಂಡಿಗಳನ್ನು ತಯಾರಿಸುವುದು ಸಾಮಾನ್ಯ. ಆದರೆ, ಪ್ರತಿವರ್ಷದಂತೆ ಈ ಬಾರಿಯೂ ಬಲಿಪಾಡ್ಯಮಿ ಅಂಗವಾಗಿ ಅ. 29ರಂದು ಸಂಜೆ ನಗರದಲ್ಲಿ ಗೌಳಿ ಸಮಾಜದಿಂದ ಎಮ್ಮೆಗಳ ಮೆರವಣಿಗೆಗೆ ಸಿದ್ಧತೆ ನಡೆದಿದೆ.

Advertisement

ಗೌಳಿ ಸಮಾಜದ ಜನರಿಗೆ ಎಮ್ಮೆಗಳ ಪಾಲನೆಯೇ ಕುಲವೃತ್ತಿಯಾಗಿದ್ದು, ಹಾಲು ಮಾರಾಟವೇ ಆದಾಯದ ಮೂಲವಾಗಿದೆ. ಹೀಗಾಗಿ ಬೆಳಕಿನ ಹಬ್ಬ ದೀಪಾವಳಿಯಂದು ನಗರದಲ್ಲಿ ಎಮ್ಮೆಗಳ ವಿಶೇಷ ಮೆರವಣಿಗೆ ನಡೆಯಲಿದೆ. ಎಮ್ಮೆಗಳನ್ನು ಶುಭ್ರವಾಗಿ ತೊಳೆದು ಸ್ವಚ್ಛಗೊಳಿಸಲಾಗುತ್ತದೆ. ಬಳಿಕ ವಿವಿಧ ಬಣ್ಣಗಳಿಂದ ಎಮ್ಮೆಗಳ ಮೈಮೇಲೆ ಚಿತ್ತಾರ ಬಿಡಿಸಲಾಗುತ್ತದೆ. ಕೊರಳಿಗೆ ಕವಡೆ ಸರ, ಹಿತ್ತಾಳೆ ಸರ, ಗಂಟೆ ಹಾಗೂ ಕಾಲಿಗೆ ಗೆಜ್ಜೆಗಳನ್ನು ಕಟ್ಟಲಾಗುತ್ತದೆ. ಕೋಡುಗಳನ್ನು ನವಿಲು ಗರಿ ಕಟ್ಟಿ, ನವ ವಧುವಿನಂತೆ ಶೃಂಗಾರಗೊಂಡ ಎಮ್ಮೆಗಳು ನೋಡಗರ ಮನ ಸೆಳೆಯುತ್ತವೆ

ಎಲ್ಲೆಲ್ಲಿ ಎಮ್ಮೆಗಳ ಮೆರವಣಿಗೆ?: ಸ್ಥಳೀಯ ರೆಹಮತ್‌ ನಗರ, ಆಶ್ರಯ ಕಾಲೋನಿ, ಜವಳಗಲ್ಲಿ, ಖಾನತೋಟ, ಗಂಗಾಪೂರ ಪೇಟೆ, ಕುಷ್ಟಗಿ ಚಾಳ, ಗ್ರೀನ್‌ ಮಾರ್ಕೆಟ್‌, ರಾಜೀವ ಗಾಂಧಿ ನಗರ ಸೇರಿದಂತೆ ಇನ್ನಿತರೆ ಭಾಗದಲ್ಲಿರುವ ಗೌಳಿ ಸಮಾಜದ ಜನರು ಮಧ್ಯಾಹ್ನದ ವೇಳೆ ನಗರದ ಜೋಡು ಮಾರುತಿ ದೇವಸ್ಥಾನಕ್ಕೆ ಬಂದು ಸೇರುತ್ತಾರೆ. ಬಳಿಕ ಸಂಜೆ 4 ಗಂಟೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ಎಮ್ಮೆಗಳ ಬೃಹತ್‌ ಮೆರವಣಿಗೆ ಆರಂಭವಾಗುತ್ತದೆ. ಬಳಿಕ ಹಾತಲಗೇರಿ ನಾಕಾದ ಮಹಾಲಕ್ಷೀ ದೇವಸ್ಥಾನದಲ್ಲಿರುವ ಗೌಳಿ ಸಮಾಜದ ಗದ್ದಿಗೆ ಬಳಿ ಆಗಮಿಸಿ ಸಮಾಜದ ಹಿರಿಯ ಗದ್ದುಗೆಗೆ ತೆಂಗಿನಕಾಯಿ ಹಾಗೂ ಕರ್ಪೂರ ಅರ್ಪಿಸಲಾಗುತ್ತದೆ. ನಂತರ ಮೈಲಾರಲಿಂಗೇಶ್ವರ ದೇವಸ್ಥಾನ, ಕೆಸಿ ರಾಣಿ ರಸ್ತೆ ಮಾರ್ಗವಾಗಿ ತೋಂಟದಾರ್ಯ ಮಠ ಸೇರಿದಂತೆ ಇನ್ನಿತರೆ ದೇವಸ್ಥಾನಗಳಿಗೆ ಮೆರವಣಿಗೆಯಲ್ಲಿ ತೆರಳುವ ಸಮಾಜದ ಪ್ರಮುಖರು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಎಮ್ಮೆಗಳಿಂದ ದೀಡ್‌ ನಮಸ್ಕಾರ: ಜೋಡು ಮಾರುತಿ ದೇವಸ್ಥಾನದಿಂದ ಮಧ್ಯಾಹ್ನ ಆರಂಭಗೊಳ್ಳುವ ನೂರಾರು ಎಮ್ಮೆಗಳ ಬೃಹತ್‌ ಮೆರವಣಿಗೆ, ನಗರದ ಹೊರವಲಯದಲ್ಲಿ ಗೌಳಿ ಸಮಾಜದ ಕುಲದೇವತೆಯನ್ನು ಪ್ರತಿಷ್ಠಾಪಿಸಿ ಸಮಾಜದ ಹಿರಿಯರು ಲಕ್ಷೀ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಎಮ್ಮೆಗಳನ್ನು ಯಾವುದೇ ರೋಗರುಜಿನಗಳು ಕಾಡದಿರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ವೇಳೆ ನೂರಾರು ಎಮ್ಮೆಗಳಿಂದ ದೀಡ್‌ ನಮಸ್ಕಾರ ಹಾಕಿಸುವುದು ಈ ಮೆರವಣಿಗೆ ವಿಶೇಷ.

ನಗರದಲ್ಲಿ 200ಕ್ಕೂ ಹೆಚ್ಚು ಗೌಳಿ ಕುಟುಂಬಗಳಿದ್ದು, 800ಕ್ಕೂ ಹೆಚ್ಚು ಎಮ್ಮೆಗಳನ್ನು ಸಾಕಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಬಲಿಪಾಡ್ಯಮಿ ದಿನದ ಮೆರವಣಿಗೆಯಲ್ಲಿ ನೂರಾರು ಎಮ್ಮೆಗಳು ಪಾಲ್ಗೋಳುತ್ತವೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಎಮ್ಮೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿರುತ್ತದೆ.-ಅಂಭಾಜಿರಾವ್‌ ದಹಿಂಡೆ, ಗೌಳಿ ಸಮಾಜದ ಪ್ರಮುಖ

Advertisement

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next