Advertisement

ಕೊಪ್ಪಳ: ಎರಡೇಟು ಬಡಿದ ವ್ಯಕ್ತಿಯ ಬೆಂಬಿಡದೇ ದ್ವೇಷ ಸಾಧಿಸುತ್ತಿದೆ ಈ ಕೋಣ.!

06:07 PM Jun 26, 2022 | Team Udayavani |

ಕೊಪ್ಪಳ: ಇಲ್ಲೊಂದು ಗ್ರಾಮದಲ್ಲಿ ಕೋಣವೊಂದಕ್ಕೆ ಎರಡೇಟು ಬಡಿದ ವ್ಯಕ್ತಿಯನ್ನು ಆ ಕೋಣವು ಬೆಂಬಿಡದೇ ಕಾಡಿ ದ್ವೇಷ ಸಾಧಿಸುತ್ತಿದೆ. ಆತನು ಏಲ್ಲೆಯೇ ಸುತ್ತಾಡಿದರೂ ಬಿಡದೇ ಓಡೋಡಿ ಹೋಗಿ ಗುದ್ದುವ ಕೆಲಸ ಮಾಡುತ್ತಿದೆ. ಇದರಿಂದ ಆತಂಕಗೊಂಡ ವ್ಯಕ್ತಿಯು ಮನೆ ಬಿಟ್ಟು ಹೊರ ಬರದ ಸ್ಥಿತಿಯು ನಿರ್ಮಾಣವಾಗಿದೆ.

Advertisement

ಹೌದು.. ಇದು ಅಚ್ಚರಿಯಾದರೂ ಸತ್ಯದ ಸಂಗತಿ. ತಾಲೂಕಿನ ಬಂಡಿ ಹರ್ಲಾಪೂರ ಗ್ರಾಮದಲ್ಲಿ ರೋಷನ್ ಎನ್ನುವ ವ್ಯಕ್ತಿಯ ಬೆನ್ನಿಗೆ ಬಿದ್ದಿರುವ ಕೋಣವು ಬೆಂಬಿಡದೇ ಕಾಡುತ್ತಿದೆ. ಇದು ಗ್ರಾಮ ದೇವತೆಯ ಪವಾಡ, ಹಾಗಾಗಿ ಕೋಣ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿದೆ. ಕೋಣಕ್ಕೆ ಕ್ಷಮೆ ಕೇಳುವಂತೆ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಕೋಣವನ್ನು ಗ್ರಾಮದ ಜನತೆ ಗ್ರಾಮದೇವತೆ ಕಂಠಿ ದುರ್ಗಮ್ಮ ದೇವಿಯ ಸಾಕು ಕೋಣವೆಂದು ಕಳೆದ 2 ವರ್ಷದ ಹಿಂದೆಯೇ ಊರಲ್ಲಿ ಬಿಡಲಾಗಿದೆ. ಊರ ಸುತ್ತ ಮುತ್ತ, ರೈತರ ಜಮೀನುಗಳಲ್ಲಿ ಮೇಯಿಕೊಂಡು ಆರಾಮವಾಗಿಯೇ ಇದ್ದ ಕೋಣಕ್ಕೆ ಕಳೆದ ವಾರ ರೋಷನ್ ಅಲಿ ಎರಡೇಟು ಬಡಿದಿದ್ದಾನೆ. ಆಗ ಸುಮ್ಮನಿದ್ದ ಕೋಣವು ಆರು ದಿನಗಳ ಬಳಿಕ ರೋಷನ್ ಅಲಿಯ ಮೇಲೆ ಹಾಯಲು ಮುಂದಾಗುತ್ತಿದೆ. ಆತನನ್ನ ಏಲ್ಲಿ ಓಡಾಡಲು ಬಿಡುತ್ತಿಲ್ಲ.

ರೋಷನ್ ಅಲಿ ಏಲ್ಲಿ ಓಡಾಡುತ್ತಾನೋ ಅಲ್ಲೆಲ್ಲಾ ಕೋಣ ಹಿಂಬಾಲಿಸುತ್ತಿದೆ. ಕೋಣ ನೋಡಿದ ಆತನು ಭಯಗೊಂಡು ದೂರ ಓಡಿ ಹೋಗುವಂತಾಗಿದೆ. ಮನೆಯಿಂದ ಆಚೆ ಬರದಂತಾಗಿದೆ. ಹಗಲು ರಾತ್ರಿ ಅವರ ಮನೆ ಮುಂಭಾಗದಲ್ಲಿಯೇ ಕಾಯುತ್ತಿರುವ ಕೋಣವು ಆತನ ಮೇಲೆ ದ್ವೇಷ ಸಾಧಿಸುತ್ತಿದೆ. ಮನೆ ಗೇಟ್‌ನ ಮುಂದೆ ನಿಂತರೂ ಕೋಣ ಸಿಟ್ಟಿಗೆದ್ದು ಗುದ್ದುತ್ತಿದೆ. ಇದರಿಂದ ಗ್ರಾಮದ ಜನರೇ ಕೋಣ ಈತನ ಮೇಲೆ ದ್ವೇಷ ಸಾಧಿಸುವುದನ್ನು ಕಣ್ಣಾರೆ ಕಂಡು ವೀಡಿಯೋ ಮಾಡಿದ್ದಾರೆ.

ಅಲ್ಲದೇ, ಕಳೆದ ಕೆಲವು ದಿನಗಳ ಹಿಂದೆ ದೇವರಾಜ, ಅನೀಲ್ ಎನ್ನುವವರೂ ಸಹ ಕೋಣಕ್ಕೆ ಎರಡೇಟು ಹೊಡೆದಿದ್ದರು. ಆದರೆ ಕೋಣ ಅವರಿಗೆ ಏನೂ ಮಾಡುತ್ತಿಲ್ಲ. ಅಲ್ಲದೇ, ಇನ್ನುಳಿದಂತೆ ಊರಿನ ಯಾವುದೇ ವ್ಯಕ್ತಿಗಳ ಮೇಲೆಯೂ ಕೋಣ ದಾಳಿ ಮಾಡುತ್ತಿಲ್ಲ. ರೋಷನ್ ಅಲಿಯ ಮೇಲೆ ಮಾತ್ರ ಎರಗಿ ಬರುತ್ತಿದೆ.

Advertisement

ಕೋಣ ರೊಚ್ಚಿಗೆದ್ದಿರುವುದಕ್ಕೆ ಗ್ರಾಮದ ದೇವಿಯೇ ಪವಾಡ ಇದಾಗಿದೆ. ನೀನು ಮೊದಲು ದೇವಿಗೆ ಕ್ಷಮೆ ಕೇಳು ಎಂದು ಜನತೆ ರೋಷನ್ ಅಲಿಗೆ ಮನವಿ ಮಾಡಿದ್ದಾರೆ. ಇದರಿಂದ ಆತನೂ ಕೋಣಕ್ಕೆ ಅಕ್ಕಿ, ಬೆಲ್ಲ ಸೇರಿ ಇತರೆ ಪದಾರ್ಥ ಇಟ್ಟು, ಕ್ಷಮೆ ಕೇಳಿದ್ದಾನೆ. ಆದರೂ ಅದು ಎರಗಿ ಬರುತ್ತಿದೆ. ಇದರಿಂದ ಆತನಿಗೆ ದಿಕ್ಕೇ ತಿಳಿಯದಂತಾಗಿದೆ. ಇದೆಲ್ಲವನ್ನು ಅವಲೋಕಿಸಿದ ಜನತೆ ಕೋಣಕ್ಕೆ ಯಾರೂ ಹೊಡೆಯಬಾರದು ಎಂದು ಗ್ರಾಮಸ್ಥರಿಗೆ ಕಟ್ಟಾಜ್ಞೆ ಮಾಡಿದ್ದಾರೆ.

ನಮ್ಮೂರಿನಲ್ಲಿ ಕೋಣಕ್ಕೆ ಈ ಹಿಂದೆ ಹಲವರು ಹೊಡೆದಿದ್ದಾರೆ. ಆದರೆ ಆಗ ಆ ಕೋಣ ಯಾರಿಗೂ ಏನೂ ಮಾಡಿಲ್ಲ. ರೋಷನ್ ಅಲಿಯನ್ನು ಕಂಡರೆ ಆ ಕೋಣವು ಮುನ್ನುಗ್ಗಿ ಗುದ್ದಲು ಹೋಗುತ್ತಿದೆ. ಇದನ್ನು ನೋಡಿ ನಮಗೂ ಆಶ್ಚರ್ಯವಾಗುತ್ತಿದೆ. ಆತನಿಗೆ ದೇವಿಗೆ ಕ್ಷಮೆ ಕೇಳಿ ಎಂದೂ ಹೇಳಿದ್ದೇವೆ. ಆದರೂ ಅದು ಬಿಡುತ್ತಿಲ್ಲ. ಅಲ್ಲದೇ ಯಾರೂ ಕೋಣಕ್ಕೆ ಹೊಡೆಯಬಾರದು ಎಂದು ಸೂಚನೆಯನ್ನು ಕೊಟ್ಟಿದ್ದೇವೆ.-ಹೇಮಣ್ಣ, ಗ್ರಾಮಸ್ಥ

ಕಳೆದ ವಾರವಷ್ಟೇ ಕೋಣಕ್ಕೆ ಎರಡೇಟು ಹೊಡೆದಿದ್ದೆ. ನಾಲ್ಕೈದು ದಿನ ಸುಮ್ಮನಿದ್ದ ಅದು ಈಗ ನನ್ನನ್ನು ಬೆನ್ನಟ್ಟಿ ಬರುತ್ತಿದೆ. ಏಲ್ಲಿ ಹೋದರೂ ಗುದ್ದಲು ಮುಂದಾಗುತ್ತಿದೆ. ಮನೆಯ ಮುಂದೆಯೂ ಬಂದು ನಿಲ್ಲುತ್ತೆ.

ಇದರಿಂದಾಗಿ ಮನೆಯಿಂದ ಹೊರಗೆ ಹೋಗದಂತಾಗಿದೆ. ತಪ್ಪಾಯ್ತು ಎಂದು ದೇವಿಯ ಬಳಿಯೂ ಕ್ಷಮೆ ಕೇಳಿದ್ದೇನೆ. ಕೋಣಕ್ಕು ಅಕ್ಕಿ, ಬೆಲ್ಲ ಇಟ್ಟಿದ್ದೇನೆ. ಆದರೂ ನನ್ನ ಬೆಂಬಿಡದೇ ಹಿಂಬಾಲಿಸಿ ಗುದ್ದಲು ಯತ್ನಿಸುತ್ತಿದೆ.-ರೋಷನ್ ಅಲಿ, ಕೋಣ ಹೊಡೆದ ವ್ಯಕ್ತಿ

Advertisement

Udayavani is now on Telegram. Click here to join our channel and stay updated with the latest news.

Next