Advertisement

ಎಮ್ಮೆ, ಹಸುಗಳಿಗೂ ಬಂತು “ಆಧಾರ್‌’ನಂಬರ್‌; ಜನವರಿ 1ರಿಂದಲೇ ಆರಂಭ

03:45 AM Jan 05, 2017 | |

ನವದೆಹಲಿ: ದೇಶವಾಸಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಆಧಾರ್‌ಯೋಜನೆಯನ್ನು ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಅಂತಹುದೇ ಕಾರ್ಯಕ್ರಮವನ್ನು ಪ್ರಾಣಿಗಳಿಗೂ ವಿಸ್ತರಿಸಿದೆ. ದೇಶದಲ್ಲಿರುವ 8.8 ಕೋಟಿ ಗೋವು ಹಾಗೂ ಎಮ್ಮೆಗಳಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒಂದು ವರ್ಷದೊಳಗೆ ನೀಡುವ ಅಭಿಯಾನವನ್ನು ಹೊಸ ವರ್ಷದ ಮೊದಲ ದಿನದಿಂದಲೇ ಆರಂಭಿಸಿದೆ. ಈಗಾಗಲೇ 1 ಲಕ್ಷ ತಂತ್ರಜ್ಞರು 50 ಸಾವಿರ ಟ್ಯಾಬ್ಲೆಟ್‌ಗಳನ್ನು ಹಿಡಿದು ಹಳ್ಳಿಗಳತ್ತ ಮುಖ ಮಾಡಿದ್ದಾರೆ.

Advertisement

ಈ ಯೋಜನೆಯಡಿ ಪಾಲಿಯುರೇಥೇನ್‌ ಟ್ಯಾಗ್‌ ಅನ್ನು ರಾಸುಗಳ ಕಿವಿಯೊಳಕ್ಕೆ ಸಿಲುಕಿಸಲಾಗುತ್ತದೆ. ದೀರ್ಘ‌ಕಾಲ ಬಾಳಿಕೆ ಬರುವ ಈ ಟ್ಯಾಗ್‌ ಅನ್ನು ವಿರೂಪಗೊಳಿಸಲು ಆಗುವುದಿಲ್ಲ. ಒಂದು ಟ್ಯಾಗ್‌ಗೆ 8 ರೂ. ವೆಚ್ಚವಾಗುತ್ತದೆ. 8 ಗ್ರಾಂ ತೂಕವಿರುವ ಈ ಟ್ಯಾಗ್‌ ಅಳವಡಿಕೆ ವೇಳೆ ಪ್ರಾಣಿಗಳಿಗೆ ತೀರಾ ಅತ್ಯಲ್ಪ ತೊಂದರೆಯಾಗುವಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಮ್ಮೆ ರಾಸುವಿನ ಕಿವಿಯೊಳಕ್ಕೆ ಟ್ಯಾಗ್‌ ತೂರಿಸಿದ ಬಳಿಕ, ಅದರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಟ್ಯಾಬ್‌ ಮೂಲಕ ಆನ್‌ಲೈನ್‌ ಡೇಟಾಬೇಸ್‌ನಲ್ಲಿ ನಮೂದಿಸಲಾಗುತ್ತದೆ. ಜತೆಗೆ ರಾಸುಗಳ ಮಾಲೀಕರಿಗೆ ರಾಸುವಿನ ವಿಶಿಷ್ಟ ಗುರುತಿನ ಸಂಖ್ಯೆವುಳ್ಳ ಪ್ರಾಣಿ ಆರೋಗ್ಯ ಕಾರ್ಡ್‌ ವಿತರಿಸಲಾಗುತ್ತದೆ. ಅದರಲ್ಲಿ ಮಾಲೀಕನ ಹೆಸರು, ರಾಸುಗಳಿಗೆ ಕಾಲಕಾಲಕ್ಕೆ ಚುಚ್ಚುಮದ್ದು ಕೊಡಿಸಿದ ಮಾಹಿತಿ, ಸಂತಾನ ವಿವರ ಮತ್ತಿತರ ವಿವರವಳು ಇರಲಿವೆ.

ಟ್ಯಾಗ್‌, ಟ್ಯಾಗ್‌ ಅಳವಡಿಕೆಗೆ ಬೇಕಾದ ಸಾಧನ, ಟ್ಯಾಬ್ಲೆಟ್‌ ಹಾಗೂ ಆರೋಗ್ಯ ಕಾರ್ಡ್‌ಗಳನ್ನು 148 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ಖರೀದಿಸಿದೆ. ದೇಶದಲ್ಲಿ 4.1 ಕೋಟಿ ಎಮ್ಮೆ ಹಾಗೂ 4.7 ಕೋಟಿ ಗೋವುಗಳು ಇವೆ. ಈ ಪೈಕಿ ಅತಿ ಹೆಚ್ಚು ಎಂದರೆ 1.6 ಕೋಟಿ ರಾಸುಗಳು ಉತ್ತರಪ್ರದೇಶವೊಂದರಲ್ಲೇ ಇವೆ.

ಏಕೆ ಈ ಯೋಜನೆ?
ಇದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆ. ರಾಸುಗಳಿಗೆ ಟ್ಯಾಗ್‌ ಅಳವಡಿಸಿ, ಅವುಗಳ ಮೇಲೆ ನಿಗಾ ಇಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಕಾಲಕಾಲಕ್ಕೆ ರಾಸುಗಳಿಗೆ ಚುಚ್ಚುಮದ್ದು ದೊರೆಯುತ್ತಿದೆಯೇ ಎಂಬುದರ ಮಾಹಿತಿ ಸಿಗುತ್ತದೆ. ಅಲ್ಲದೆ ಉತ್ತಮ ಸಂತಾನಕ್ರಿಯೆ, ಹಾಲು ಉತ್ಪಾದನೆ ಹೆಚ್ಚಳದ ಮೂಲಕ 2022ರ ವೇಳೆಗೆ ಡೈರಿ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next