Advertisement
ಬಸವರಡ್ಡಿ ಅವರದು ಮೂಲತಃ ಕೃಷಿ ಕುಟುಂಬ. ಕೂಡು ಕುಟುಂಬದಲ್ಲಿ 40 ಎಕರೆ ಕೃಷಿ ಜಮೀನನ್ನೂ ಹೊಂದಿದ್ದಾರೆ.ಹೀಗಾಗಿ ಅವರಿಗೆ ಚಿಕ್ಕಂದಿನಿಂದಲೇ ಕೃಷಿ ಜ್ಞಾನ ಬಳುವಳಿಯಾಗಿ ಬಂದಿತ್ತು. ತಂದೆ-ತಾಯಿ, ಸೋದರತ್ತೆ ಅವರು ನಡೆಸಿಕೊಂಡು ಬಂದಿದ್ದ ಹೈನುಗಾರಿಕೆಗೆ ಕೈಜೋಡಿಸಿ ಪಡೆದ ಅನುಭವ ಕೂಡ ಅವರೊಂದಿಗಿತ್ತು. ಈ ಹಿನ್ನೆಲೆಯೊಂದಿಗೆ ಹೈನುಗಾರಿಕೆ ಆರಂಭಿಸುವಾಗ ಅವರು ಹಾಕಿದ್ದು 7.50 ಲಕ್ಷ ರೂ. ಬಂಡವಾಳ. ಹರ್ಯಾಣದ ಮುರ್ರಾ ತಳಿಗಳ ಬಗ್ಗೆ ತಿಳಿವಳಿಕೆ ಹೊಂದಿದ್ದ ಅವರು 2009ರಲ್ಲಿ ಹಾಕಿ 20 ಮುರ್ರಾ ಎಮ್ಮೆಗಳೊಂದಿಗೆ ಹೈನೋದ್ಯಮ ಆರಂಭಿಸಿದರು. ಇದೀಗ ಅವುಗಳ ಸಂಖ್ಯೆ 120ಕ್ಕೆ ಏರಿದ್ದು, ಹಾಕಿದ ಬಂಡವಾಳ ವಾಪಸು ಬಂದಿದ್ದು, ಹೈನುಗಾರಿಕೆ ಲಾಭದಾಯಕ ಉದ್ದಿಮೆ ಎನಿಸಿದೆ.
ಈ ಎಮ್ಮೆಗಳ ಹಾಲನ್ನು ಅವರು ಡೈರಿಗೆ ಹಾಕುವುದಿಲ್ಲ. ತಾವೇ ಸ್ವತಃ ಶ್ರೀಪದ್ಮಾ ಮಿಲ್ಕ್ ಸೆಂಟರ್ ತೆರೆದಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಲೀಟರ್‌ಗೆ 80 ರೂ.ಗಳಷ್ಟಿದೆ. ಆದರೆ ರೆಡ್ಡಿ ಅವರು ಪ್ರತಿ ಲೀಟರ್‌ಗೆ 60 ರೂ.ನಂತೆ, ಉಳಿದ ಹಾಲಿನಿಂದ ಕೆನೆ ಮೊಸರು ತಯಾರಿಸಿ ಕೆ.ಜಿಗೆ 70 ರೂ. ನಂತೆ ಮಾರಾಟ ಮಾಡುತ್ತಾರೆ.
Related Articles
ಮುರ್ರಾ ಎಮ್ಮೆಗಳನ್ನು ನೋಡಿಕೊಳ್ಳಲು ಉತ್ತರ ಪ್ರದೇಶದಿಂದಲೇ ನಾಲ್ವರು ಯುವಕರನ್ನು ಕರೆ ತಂದಿದ್ದಾರೆ. ಅವರಿಗೆ ತಿಂಗಳಿಗೆ 12 ಸಾವಿರ ರೂ. ಸಂಬಳ ಹಾಗೂ ಊಟದ ವ್ಯವಸ್ಥೆ ಮಾಡಿದ್ದಾರೆ. ಹಾಲು ಹಿಂಡುವುದು, ಸಗಣಿ ಚೆಲ್ಲುವುದು, ಎಮ್ಮೆಗಳಿಗೆ ನೀರು, ಮೇವು ಹಾಕುವುದು ಸೇರಿದಂತೆ ಕೊಟ್ಟಿಗೆಯ ಎಲ್ಲ ಜವಾಬ್ದಾರಿಯನ್ನೂ ಅವರು ನಿಭಾಯಿಸುತ್ತಾರೆ.
ಎಮ್ಮೆಗಳಿಗೆ ಆಹಾರಕ್ಕಾಗಿ ಒಂದೂವರೆ ಎಕರೆ ಪ್ರದೇಶದಲ್ಲಿ ಹಾತಿ ಗ್ರಾಸ್ ಎನ್ನುವ ಹುಲ್ಲು ಬೆಳೆಸಿದ್ದಾರೆ. ಕರ್ನಾಟಕ ಕೃಷಿ ವಿವಿಯಿಂದ ಈ ಹುಲ್ಲನ್ನು ತಂದು ಇಲ್ಲಿ ಬೆಳೆಯಲಾಗಿದೆ. ಅಲ್ಲದೇ ಒಣ ಮೇವು, ಹೊಟ್ಟು ಸೇರಿದಂತೆ ಪೌಷ್ಟಿಕಾಂಶವಿರುವ ಹಿಟ್ಟುಗಳನ್ನು ನೀಡಲಾಗುತ್ತಿದೆ.
Advertisement
ಎರೆಹುಳು ಗೊಬ್ಬರ ಎಮ್ಮೆಗಳಿಂದ ಲಭ್ಯವಾಗುವ ಸಗಣಿ ಹಾಗೂ ಮೂತ್ರವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಇದರಿಂದ ಎರೆಹುಳು ಗೊಬ್ಬರ ತಯಾರಿಸಲಾಗುತ್ತಿದ್ದು, ಇದಕ್ಕಾಗಿ ಐದು ಗೊಬ್ಬರ ತಯಾರಿಕೆ ಘಟಕಗಳನ್ನು ನಿರ್ಮಿಸಿದ್ದಾರೆ. ತಿಂಗಳಿಗೆ 45 ಕ್ವಿಂಟಲ್ ಗೊಬ್ಬರವನ್ನು ಉತ್ಪಾದಿಸುತ್ತಾರೆ. ಸಾವಿರ ರೂ.ಗೆ ಕ್ವಿಂಟಾಲ್‌ನಂತೆ ಗೊಬ್ಬರ ಮಾರಾಟ ಮಾಡುತ್ತಾರೆ. ಸಂತಾನಾಭಿವೃದ್ಧಿಗಾಗಿ ಮುರ್ರಾ ಕೋಣವೊಂದನ್ನು ಕಟ್ಟಿದ್ದಾರೆ. ನೈಸರ್ಗಿಕ ಕ್ರಿಯೆಯಿಂದ ಸಂತಾನೋತ್ಪತ್ತಿ ಮಾಡಿಸುತ್ತಾರೆ. ಅಗತ್ಯ ಬಿದ್ದರೆ ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಾರೆ. ಎಮ್ಮೆಗಳಿಗೆ ಕಾಯಿಲೆಗಳು ಕಾಣಿಸಿಕೊಂಡರೆ ಹರಿಯಾಣದ ಪಶು ವೈದ್ಯರನ್ನೂ ಸಂಪರ್ಕಿಸಿ ಅಗತ್ಯ ಔಷಧೋಪಚಾರ ನೀಡುತ್ತಾರೆ.
ಕೊಟ್ಟಿಗೆಯಲ್ಲಿ ಎಮ್ಮೆಗಳ ಸಂಖ್ಯೆ ಹೆಚ್ಚಾಯಿತು ಎಂದೆನಿಸಿದರೆ ಅವುಗಳನ್ನು ಮುಧೋಳ ಹಾಗೂ ಜಮಖಂಡಿ ದನಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹಾಲು ನೀಡುವ ಮುರ್ರಾ ಎಮ್ಮೆಗಳಿಗೆ ಮಾರುಕಟ್ಟೆಯಲ್ಲಿ 70 ಸಾವಿರದಿಂದ 1 ಲಕ್ಷಗಳವರೆಗೂ ಬೆಲೆ ಇದೆ. ಅವುಗಳ ಬೆಳವಣಿಗೆ ಮೇಲೆ ದರ ನಿಗದಿಯಾಗುತ್ತದೆ ಎನ್ನುತ್ತಾರೆ ರಡ್ಡಿ. – ಪ್ರಹ್ಲಾದಗೌಡ ಬಿ. ಗೊಲ್ಲಗೌಡರ