ಹುಬ್ಬಳ್ಳಿ: ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಎರಡು ದಿನಗಳ ಪ್ರಥಮ ದಕ್ಷಿಣ ವಲಯ ಬುಡೋ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಉಡುಪಿ ಜಿಲ್ಲೆ ಪ್ರಥಮ ಹಾಗೂ ಗದಗ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಪುರುಷರ ಗ್ರ್ಯಾಂಡ್ ಚಾಂಪಿಯನ್ ಆಗಿ ಉಡುಪಿಯ ಲಕ್ಷ್ಮೀಕಾಂತ (ಪ್ರಥಮ), ಹುಬ್ಬಳ್ಳಿಯ ಆನಂದ ಮರ್ಕಲ್ (ದ್ವಿತೀಯ). ಮಹಿಳೆಯರ ಗ್ರ್ಯಾಂಡ್ ಚಾಂಪಿಯನ್ನಾಗಿ ಮಂಗಳೂರಿನ ಜೋಷ್ನಾ ಎಂ.ಅಚಲ್ (ಪ್ರಥಮ), ಉಡುಪಿಯ ಸಿಂಚನಾ ಎಸ್. ರಾವ್ (ದ್ವಿತೀಯ) ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಹು-ಧಾ ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.
ಕ್ರೀಡೆಗಳಿಂದ ಏಕಾಗ್ರತೆ ಹೆಚ್ಚುವುದರಿಂದ ಅಧ್ಯಯನಕ್ಕೂ ಹೆಚ್ಚು ಪರಿಣಾಮಕಾರಿ. ಕರಾಟೆ ಉತ್ತಮ ಕ್ರೀಡೆಯಾಗಿದ್ದು, ವಿದ್ಯಾರ್ಥಿಗಳು ಕರಾಟೆ ಕಲಿಕೆಗೆ ಮುಂದಾಗಬೇಕು. ಪಾಲಕರು ತಮ್ಮ ಮಕ್ಕಳನ್ನು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಮಂಗಳೂರು, ಉಡುಪಿ, ಬೆಂಗಳೂರು, ಧಾರವಾಡ, ದಾವಣಗೆರೆ, ಕೋಲಾರ, ಹಾಸನ,ಬಳ್ಳಾರಿ, ವಿಜಯಪುರ, ಹಾವೇರಿ ಜಿಲ್ಲೆಗಳು ಹಾಗೂ ಕೇರಳ ರಾಜ್ಯ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಕರಾಟೆ ಪಟುಗಳು ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು. ಆಯೋಜಕರಾದ ದುರ್ಗಾನಂದ, ರವಿಕುಮಾರ ಉದ್ಯಾವರ, ಅಣ್ಣಪ್ಪ ಮಾರ್ಕಲ್, ರಾಜೇಂದ್ರಸಿಂಗ್, ಕರಾಟೆ ಶಿಕ್ಷಕರಾದ ಶ್ರೀಕಾಂತ ಮಲ್ಲೂರ, ರವಿ ಸೋಳಂಕೆ ಸೇರಿದಂತೆ ಇತರರು ಇದ್ದರು.