Advertisement

Budget; ಮಧ್ಯಮ ವರ್ಗದ ಬೇಡಿಕೆ ಈಡೇರೀತೇ ?

12:59 AM Feb 01, 2024 | Team Udayavani |

ಬದಲಾಗುತ್ತಿರುವ ಜೀವನಶೈಲಿ ಹಾಗೂ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ ಮೇಲೆ ಮಧ್ಯಮ ವರ್ಗದವರು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಮಗೆ ಕೇಂದ್ರ ಸರಕಾರ ಸಹಾಯ ಮಾಡಲಿದೆ ಎಂಬ ವಿಶ್ವಾಸದಲ್ಲಿರುವ ಅವರು ಕೆಲವು ತೆರಿಗೆ ವಿನಾಯಿತಿಗಳನ್ನು ಬಯಸುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

Advertisement

1. ಆದಾಯ ತೆರಿಗೆ ಮಿತಿ
ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂಬ ಆಗ್ರಹ ಕಳೆದ ವರ್ಷವೇ ಇತ್ತು. ಆದರೆ ಅದಕ್ಕೆ ಕೇಂದ್ರ ಸರಕಾರ ಕಳೆದ ಬಾರಿ ಸ್ಪಂದಿಸಿರಲಿಲ್ಲ. ಈ ಬಾರಿಯಾದರೂ ಆದಾಯ ತೆರಿಗೆ ಮಿತಿ ಹೆಚ್ಚಳ ಆದೀತು ಎಂಬ ನಿರೀಕ್ಷೆ ಮಧ್ಯಮ ವರ್ಗದಲ್ಲಿದೆ.

2. ಸೆಕ್ಷನ್‌ 80 ಸಿ ಮಿತಿಯಲ್ಲಿ ಹೆಚ್ಚಳ
ಸೆಕ್ಷನ್‌ 80 ಸಿ ಅಡಿಯಲ್ಲಿ ಹೂಡಿಕೆ ಕಡಿತಗಳಿಗೆ ಪ್ರಸ್ತುತ ಇರುವ ಮಿತಿ 1.5 ಲಕ್ಷ ರೂಪಾಯಿ. ಕಳೆದ ಒಂದು ದಶಕದಿಂದ ಇದರಲ್ಲಿ ಬದಲಾವಣೆ ಆಗಿಲ್ಲ. ಈ ಬಾರಿಯಾದರೂ ಮಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಮಧ್ಯಮ ವರ್ಗದ್ದು. ಮಿತಿಯನ್ನು ಹೆಚ್ಚಿಸಿದರೆ ಹೆಚ್ಚಿನ ತೆರಿಗೆ ಉಳಿತಾಯ ಮತ್ತು ಹೆಚ್ಚಿನ ಹೂಡಿಕೆಗಳಿಗೆ ಅನುಕೂಲವಾಗಲಿದೆ. ಮಿತಿಯನ್ನು ಕನಿಷ್ಠ 2.25 ಲ.ರೂ.ಗೆ ಹೆಚ್ಚಿಸಬೇಕು ಎಂಬ ಆಗ್ರಹವೂ ಇದೆ.

3. ಮನೆ ಖರೀದಿದಾರರಿಗೆ ಪರಿಹಾರ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಸಿ ಯ ಪ್ರಸ್ತುತ ನಿಬಂಧನೆಗಳ ಪ್ರಕಾರ, ವಸತಿ ಮನೆಗಾಗಿ ತೆಗೆದುಕೊಂಡ ಗೃಹ ಸಾಲದ ಅಸಲು ಮೊತ್ತವನ್ನು ಮರುಪಾವತಿಸಲು ನಿಮ್ಮ ತೆರಿಗೆಗೆ ಒಳಪಡುವ ಆದಾಯದಿಂದ 1.5 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಇದು ಬಹಳ ಕಡಿಮೆ ಎಂಬ ಅಭಿಪ್ರಾಯವಿದೆ. ಸೆಕ್ಷನ್‌ 80 ಸಿ ಮಿತಿ ಹೆಚ್ಚಳವಾದರೆ ಗೃಹಸಾಲಗಾರರಿಗೆ ತುಂಬಾ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಮಧ್ಯಮ ವರ್ಗದ್ದಾಗಿದೆ. ಸದ್ಯ ಇರುವ 1. 5 ಲ.ರೂ. ಮಿತಿಯಲ್ಲಿ ಎಲ್‌ಐಸಿ ಪ್ರೀಮಿಯಂ, ಮಕ್ಕಳ ಬೋಧನಾ ಶುಲ್ಕಗಳು, ಭವಿಷ್ಯ ನಿಧಿ, ಇಪಿಎಫ್ ದೇಣಿಗೆ, ನಿರುಖು ಠೇವಣಿ ಇತ್ಯಾದಿಗಳೂ ಸೇರುತ್ತಿವೆ. ಆದ್ದರಿಂದ ದೊಡ್ಡ ಗೃಹ ಸಾಲಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಬಜೆಟ್‌ನಲ್ಲಿ ಗೃಹ ಸಾಲಗಳ ಮರುಪಾವತಿಗೆ ಪ್ರತ್ಯೇಕ ಕಡಿತವನ್ನು ಒದಗಿಸಬೇಕು. ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಗೃಹ ಸಾಲದ ಮೇಲಿನ ಬಡ್ಡಿಗೆ 2019ರಲ್ಲಿ ಪ್ರತ್ಯೇಕ ಕಡಿತವನ್ನು ಪರಿಚಯಿಸಿದ ಸೆಕ್ಷನ್‌ 80 ಇಇಎಯಿಂದ ಹೆಚ್ಚುವರಿ ವಿನಾಯಿತಿಗೆ ಅವಕಾಶ ಮಾಡಿಕೊಡಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

4. 80ಡಿ ಕಡಿತ ಮಿತಿ ಹೆಚ್ಚಳ
ವೈದ್ಯಕೀಯ ವಿಮಾ ಪ್ರೀಮಿಯಂಗಳಿಗೆ ಸೆಕ್ಷನ್‌ 80 ಡಿ ಅಡಿಯಲ್ಲಿ ಕಡಿತ ಮಿತಿಯನ್ನು ವ್ಯಕ್ತಿಗಳಿಗೆ 25,000 ರೂಪಾಯಿಯಿಂದ 50,000 ರೂಪಾಯಿಗೆ ಮತ್ತು ಹಿರಿಯ ನಾಗರಿಕರಿಗೆ 50,000 ರೂಪಾಯಿಯಿಂದ 75,000 ರೂಪಾಯಿಗೆ ಹೆಚ್ಚಿಸಬೇಕು. ಹೊಸ ತೆರಿಗೆ ವ್ಯವಸ್ಥೆಗೆ ಸೆಕ್ಷನ್‌ 80 ಡಿ ಪ್ರಯೋಜನಗಳನ್ನು ವಿಸ್ತರಿಸುವುದರಿಂದ ಆರೋಗ್ಯ ರಕ್ಷಣೆಗೆ ಸಮಾನ ಅವಕಾಶವನ್ನು ಉತ್ತೇಜಿಸಿದಂತಾದೀತು ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.
5. ಸ್ಟಾಂಡರ್ಡ್‌ ಡಿಡಕ್ಷನ್‌ ಮಿತಿ

Advertisement

50 ಸಾ.ರೂ.ಯಿಂದ 1 ಲಕ್ಷಕ್ಕೆ ಏರಿಕೆ ?
ಸ್ಟಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು 50 ಸಾ.ರೂ.ಯಿಂದ 1 ಲಕ್ಷ ರೂ.ಗೆ ಏರಿಸುವ ನಿರೀಕ್ಷೆಯಿದೆ. ಕೋವಿಡ್‌ ಮತ್ತು ಹಣದುಬ್ಬರ ಏರಿಕೆಯ ಪರಿಣಾಮಗಳನ್ನು ಎದುರಿಸಲು ಸ್ಟಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ಏರಿಸುವ ಅಗತ್ಯವಿದೆ ಎಂದು ದೇಶದ ಪ್ರಮುಖ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಸಾಮಾನ್ಯವಾಗಿ ಮಧ್ಯಾಂತರ ಬಜೆಟ್‌ಗಳಲ್ಲಿ ತೆರಿಗೆ ಸಂಬಂಧಿಸಿ ಪ್ರಮುಖ ಸುಧಾರಣೆಗಳು ಅಥವಾ ಹೊಸ ಘೋಷಣೆ ಮಾಡುವುದಿಲ್ಲ. ಆ ನಿಟ್ಟಿನಲ್ಲಿ ಯೋಚಿಸಿದರೆ ತೆರಿಗೆ ಸಂಬಂಧಿಸಿ ಮಹತ್ತರ ಬದಲಾವಣೆ ಸಾಧ್ಯತೆ ಕಡಿಮೆ. ಆದರೂ ತೆರಿಗೆದಾರರನ್ನು ಹೊಸ ತೆರಿಗೆ ಪದ್ಧತಿಗೆ ಸೇರುವಂತೆ ಉತ್ತೇಜಿಸಲು ಪ್ರಮಾಣಿತ ಕಡಿತ ಅಥವಾ ವಿನಾಯಿತಿ ಮಿತಿಗಳೊಂದಿಗೆ ಕೆಲವು ಕ್ರಮಗಳನ್ನು ನಿರೀಕ್ಷಿಸಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next