ವಿಧಾನಪರಿಷತ್ತು: ಅಗತ್ಯ ವಸ್ತುಗಳ ಬೆಲೆ ದುಬಾರಿ ಆಗುತ್ತಿದೆ. ಬಡವರ ಬದುಕು ಕಷ್ಟವಾಗಿದೆ. ಇದರ ಬಗ್ಗೆ ಬಜೆಟ್‌ನಲ್ಲಿ ಏನನ್ನೂ ಹೇಳಿಲ್ಲ. ಇದೊಂದು ಬಡವರ ವಿರೋಧಿ, ಜನರ ವಿರೋಧಿ ಬಜೆಟ್ ಎಂದು ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿಯವರು ಮಂಡಿಸಿದ 2023-24ನೇ ಸಾಲಿನ ಬಜೆಟ್ ಮೇಲೆ ಭಾಷಣ ಮಾಡುವಾಗ “ಎಲ್ಲವೂ ದುಬಾರಿ’ ಎಂಬ ಶೀರ್ಷಿಕೆಯಡಿ ಫೆ.21ರಂದು “ಉದಯವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಸದನದಲ್ಲಿ ಪ್ರದರ್ಶಿಸಿದ ಹರಿಪ್ರಸಾದ್, ಬೆಲೆ ಏರಿಕೆ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
“ಬಡವರ ಬೆನ್ನು ಮುರಿಯುವ ಬೆಲೆ ಏರಿಕೆಯನ್ನು ನೂರು ದಿನಗಳಲ್ಲಿ ನಿಯಂತ್ರಿಸುತ್ತೇನೆ’ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಅಂತಹ ಯಾವ ಕ್ರಮವೂ ಆಗಿಲ್ಲ. ಡೀಸೆಲ್, ಅಡುಗೆ ಅನಿಲ ದರ ನಿರಂತರವಾಗಿ ಏರುತ್ತಲೇ ಇದೆ. ಇದರ ಜತೆಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಹಾಲು, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇದರ ಬಗ್ಗೆ ರಾಜ್ಯದ ಬಜೆಟ್‌ನಲ್ಲಿ ಏನನ್ನೂ ಹೇಳಲಾಗಿಲ್ಲ. ಹಾಗಾಗಿ, ಇದೊಂದು ಬಡವರ ವಿರೋಧಿ ಬಜೆಟ್ ಎಂದು ಆರೋಪಿಸಿದರು.
ರೈತರ ಆತ್ಮಹತ್ಯೆ ಡಬಲ್ ಆಗಿದೆ: ರೈತರ ಆದಾಯ ಡಬಲ್ ಮಾಡುತ್ತೇನೆಂದು ಪ್ರಧಾನಿ ಮೋದಿ ಘೋಷಿಸಿದ್ದರು. ಈ ಡಬಲ್ ಇಂಜಿನ್ ಸರ್ಕಾರದಲ್ಲಿ ರೈತರ ಆದಾಯ ಡಬಲ್ ಆಗಿಲ್ಲ. ಬದಲಿಗೆ ರೈತರ ಆತ್ಮಹತ್ಯೆ ಡಬಲ್ ಆಗಿದೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಕೃಷಿ ಸಮ್ಮಾನ್ ಯೋಜನೆಯಡಿ 10 ಲಕ್ಷ ರೈತರಿಗೆ ನೆರವು ನೀಡಲಾಗಿದೆ. ವಿಷ ಸೇವಿಸಿದ ರೈತನಿಗೆ ಕುಡುಕ ಎಂದು ಹೇಳಿದ್ದ ನಿಮ್ಮ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದರು.
Related Articles
ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿತ್ತು. ರೈತರ ಮೇಲೆ ಗೋಲಿಬಾರ್ ಮಾಡಿದ ರೈತರನ್ನು ಗೂಂಡಾಗಳು ಎಂದು ಹೇಳಿದ್ದ ಸರ್ಕಾರ ನಿಮ್ಮದು. ರೈತರ ಸಾಲ ಮನ್ನಾ ಮಾಡಿದರೆ ಪ್ರಯೋಜವಿಲ್ಲ ಎಂದು ನಿಮ್ಮ ಪಕ್ಷದ ಸಂಸದರೊಬ್ಬರು ಹೇಳಿದ್ದಾರೆ. ನಿಮಗೆ ನಾಚಿಕೆ ಆಗಬೇಕು ಎಂದು ಹರಿಪ್ರಸಾದ್ ತಿರುಗೇಟು ನೀಡಿದರು.