Advertisement
ಗೋರಕ್ಷಣಾ ವಿಧೇಯಕ 2017ನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಡಾ| ಸುಬ್ರಹ್ಮಣ್ಯನ್ ಸ್ವಾಮಿ ಶುಕ್ರವಾರ ಮೇಲ್ಮನೆಯಲ್ಲಿ ಮಂಡಿಸಿದರು. ಸದಸ್ಯರ ಖಾಸಗಿ ಮಸೂದೆಯಾಗಿರುವ ಅದರಲ್ಲಿ ಭಾರತದ್ದೇ ಆಗಿರುವ ಗೋವುಗಳ ವಧೆ ಮಾಡಿದರೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ಇದೆ. ಆದರೆ ಕೇಂದ್ರ ಸರಕಾರ ವಿಧೇಯಕ ಹಿಂಪಡೆಯುವಂತೆ ಒತ್ತಾಯಿಸಿದ್ದರಿಂದ ಡಾ| ಸ್ವಾಮಿ ಅದನ್ನು ಹಿಂಪಡೆದುಕೊಂಡರು. ಆದರೂ ಈ ಮಸೂದೆಯ ಮೇಲೆ ಬರೋಬ್ಬರಿ 2 ಗಂಟೆ ಚರ್ಚೆ ನಡೆಯಿತು. ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದವೂ ನಡೆಯಿತು. ಎಸ್‌ಪಿ ಸಂಸದ ಜಾವೇದ್ ಅಲಿ ಖಾನ್ ಮಾತನಾಡಿ, ಗೋವನ್ನು ಕೂಡಲೇ ರಾಷ್ಟ್ರ ಪ್ರಾಣಿಯನ್ನಾಗಿ ಘೋಷಣೆ ಮಾಡಬೇಕು. ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರಮುಖ ವಿಚಾರದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತ ಗೋಮಾಂಸ ಬಳಕೆ ಮಾಡುವ ರಾಷ್ಟ್ರಗಳ ಜತೆಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ವೈಎಸ್‌ಆರ್ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ವಿ.ವಿಜಯಸಾಯಿ ರೆಡ್ಡಿ ಇತರ ಹಿಂದುಳಿದ ವರ್ಗದವರಿಗಾಗಿ ಶಾಸಕಾಂಗ, ಶಿಕ್ಷಣ ಸಂಸ್ಥೆಗಳಲ್ಲಿ, ಸರಕಾರಿ ಉದ್ಯೋಗಗಳಲ್ಲಿ ಅವರ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಮತ್ತು ಇತರ ಹಿರಿಯ ನ್ಯಾಯಮೂರ್ತಿಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಕೇಂದ್ರ ಸರಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಕಾನೂನು ಖಾತೆ ಸಹಾಯಕ ಸಚಿವ ಪಿ.ಪಿ.ಚೌಧರಿ ಹೇಳಿದ್ದಾರೆ. ಈ ಬೆಳವಣಿಗೆಯಿಂದ ನ್ಯಾಯಾಂಗದ ಮೇಲೆ ಯಾವುದೇ ಋಣಾತ್ಮಕ ಪ್ರಭಾವ ಬೀರಿಲ್ಲ ಎಂದಿದ್ದಾರೆ.