ಮಂಗಳೂರು: ವಿಧಾನ ಮಂಡಲ ಜಂಟಿ ಅಧಿವೇಶನ ಫೆ. 12ರಿಂದ ಪ್ರಾರಂಭವಾಗಲಿದ್ದು, ಮೊದಲ ದಿನ ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆ. 16ರಂದು ಬಜೆಟ್ ಮಂಡನೆಯ ನಿರೀಕ್ಷೆ ಇದೆ. ಫೆ. 23ರ ವರೆಗೆ ನಡೆಯಲಿದೆ ಅಧಿವೇಶನ ನಡೆಯಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣ ಬಳಿಕ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.
ಬಜೆಟ್ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಫೆ. 9ರಂದು ಬೆಂಗಳೂರಿನ ಐಐಎಂನಲ್ಲಿ ಶಾಸಕರಿಗೆ ಹಾಗೂ ಪತ್ರಕರ್ತರಿಗೆ ಒಂದು ದಿನದ ವಿಶೇಷ ತರಬೇತಿ ಆಯೋಜಿಸಲಾಗಿದೆ. ಶಾಸಕರಿಗೆ ಬಜೆಟ್ ಅಧಿವೇಶನದ ಸ್ವರೂಪ, ಚರ್ಚೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಬಜೆಟ್ ಅಧಿವೇಶನದ ವರದಿಗಾರಿಕೆ ಬಗ್ಗೆ ಪತ್ರಕರ್ತರಿಗೆ ವಿಶೇಷ ತರಬೇತಿ ಏರ್ಪಡಿಸಲಾಗಿದೆ ಎಂದರು.
ಬೆಳಗ್ಗೆ 9ಕ್ಕೇ ಕಲಾಪ?
ವಿಧಾನ ಮಂಡಲ ಕಲಾಪವನ್ನು ಬೆಳಗ್ಗೆ 10ರಿಂದ 11 ಗಂಟೆ ನಡುವೆ ಆರಂಭಿಸುವ ಬದಲು ಅದಕ್ಕೆ ನಿರ್ದಿಷ್ಟ ಸಮಯದ ಚೌಕಟ್ಟು ವಿಧಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಶಾಸಕರು ಬೆಳಗ್ಗೆ 8 ಗಂಟೆಗೆ ಕಲಾಪಕ್ಕೆ ಸಿದ್ಧವಾಗಿರುತ್ತಾರೆ. ಆದರೆ ಕಲಾಪ ಆರಂಭಕ್ಕೆ ನಿಗದಿತ ಸಮಯದ ಚೌಕಟ್ಟು ಇಲ್ಲದೇ ಇರುವುದು ಹಲವು ರೀತಿಯ ಸಮಸ್ಯೆಗೆ ಕಾರಣವಾಗಿದೆ. ಬೆಳಗ್ಗೆ 9 ಗಂಟೆಗೇ ಕಲಾಪ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು.
ಕಲಾಪದಲ್ಲಿ ಭಾಗವಹಿಸಲು ಶಾಸಕರಿಗೆ ಉತ್ಸಾಹ ಮೂಡಿಸಲು ದಿನಕ್ಕೊಂದು ಉಪಹಾರ ಮೆನುವಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗ್ಗೆ 8ರಿಂದ 9ರ ವರೆಗೆ ಶಾಸಕರಿಗೆ ವಿಧಾನಸೌಧದಲ್ಲೇ ಉಪಹಾರ ವ್ಯವಸ್ಥೆ ಇರುತ್ತದೆ. ಬಳಿಕ ಅಧಿವೇಶನ ಆರಂಭವಾಗುವುದರಿಂದ ಶಾಸಕರು ಗೈರುಹಾಜರಾಗುವುದನ್ನೂ ಕಡಿಮೆ ಮಾಡಬಹುದು ಎಂದರು.