Advertisement

Budget Session: ಸವಾಲುಗಳ ಮಧ್ಯೆ ದೇಶದ ಆರ್ಥಿಕತೆ ಸದೃಢ: ನಿರ್ಮಲಾ

12:21 AM Jul 23, 2024 | Team Udayavani |

ಹೊಸದಿಲ್ಲಿ: ರಷ್ಯಾ-ಉಕ್ರೇನ್‌ ನಡುವಿನ ಯುದ್ಧ ಸೇರಿ ಜಗತ್ತಿನ ಹಲವು ರಾಜಕೀಯ ತಲ್ಲಣಗಳ ಹೊರತಾಗಿಯೂ ದೇಶದ ಅರ್ಥ ವ್ಯವಸ್ಥೆ ಸ್ಥಿರ ಹಾಗೂ ಸದೃಢವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಕೋವಿಡ್‌ ಬಳಿಕದ‌ ವರ್ಷಗಳಲ್ಲಿ ಅರ್ಥವ್ಯವಸ್ಥೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ ಎಂದು ಹೇಳಿದ್ದಾರೆ.

Advertisement

ಬಜೆಟ್‌ ಅಧಿವೇಶನದ ಮೊದಲ ದಿನವಾದ ಸೋಮ ವಾರ ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದರು. ಇತ್ತೀಚಿನ ವರ್ಷಗಳಲ್ಲಿ ಕಳೆದ ಒಂದು ದಶಕವು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖವಾದದ್ದು. ಹಲವು ಜಾಗತಿಕ ಸವಾಲುಗಳ ಹೊರತಾಗಿಯೂ ದೇಶ ಉತ್ತಮ ಪ್ರಗತಿ ದಾಖಲಿಸಿದೆ ಎಂದರು.

10 ವರ್ಷದ ಅವಧಿಯಲ್ಲಿ ಸಾಧಿಸಲಾಗಿರುವ ಆರ್ಥಿಕ ಕ್ಷೇತ್ರದ ಬೆಳವಣಿಗೆಯಿಂದಾಗಿ ಕೆಳ ಹಂತದ ಅರ್ಥ ವ್ಯವಸ್ಥೆಯಿಂದ ಮಧ್ಯಮ ಹಂತದ ಅರ್ಥ ವ್ಯವಸ್ಥೆಯಾಗಿ ದೇಶ ಅಭಿವೃದ್ಧಿಯಾಗಿದೆ ಎಂದರು.

ಆರ್ಥಿಕಾಭಿವೃದ್ಧಿ ಪ್ರಮಾಣ ಶೇ.8ಕ್ಕಿಂತ ಕಡಿಮೆ: ಪ್ರಸಕ್ತ ವಿತ್ತೀಯ ವರ್ಷದಲ್ಲಿ ಆರ್ಥಿಕ ಪ್ರಗತಿ ಶೇ.6.5ರಿಂದ ಶೇ.7ರ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಉಕ್ರೇನ್‌- ರಷ್ಯಾ ನಡುವಿನ ಯುದ್ಧ ಸೇರಿದಂತೆ ಜಗತ್ತಿನ ರಾಜಕೀಯ ಸ್ಥಿತ್ಯಂತರಗಳು ಇದಕ್ಕೆ ಕಾರಣ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಕಳೆದ ವಿತ್ತೀಯ ವರ್ಷದಲ್ಲಿ ಆರ್ಥಿಕಾಭಿವೃದ್ಧಿ ಶೇ.8ರ ಪ್ರಮಾಣದಲ್ಲಿ ರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆರ್‌ಬಿಐ, ಐಎಂಎಫ್, ಎಡಿಬಿ ಕೂಡ ದೇಶದ ಆರ್ಥಿಕಾಭಿವೃದ್ಧಿಯ ನಿರೀಕ್ಷೆಯನ್ನು ಶೇ.7ಕ್ಕೆ ಮಿತಿಗೊಳಿಸಿದ್ದವು.

ಗಡಿ ತಂಟೆ ಇದ್ದರೂ ಚೀನ ಹೂಡಿಕೆಗೆ ಆದ್ಯತೆ: ಚೀನ ಜತೆಗೆ ಗಡಿ ತಂಟೆ ಇದ್ದರೂ, ಆ ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಆದ್ಯತೆ ನೀಡಲು ಸರಕಾರ ಮುಂದಾಗಿದೆ. ದೇಶದಲ್ಲಿ ಸ್ಥಳೀಯ ಮಟ್ಟದಲ್ಲಿ ಕೈಗಾರಿಕ ಉತ್ಪಾದನೆಗೆ ಇದು ನೆರವಾಗಲಿದೆ. ಚೀನದಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹರಿದುಬಂದರೆ ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ. ಅದರ ಮೂಲಕ ಜಗತ್ತಿನಲ್ಲಿ ಭಾರತದಿಂದ ಹೆಚ್ಚು ವಸ್ತುಗಳು ಪೂರೈಕೆಯಾಗುತ್ತದೆ ಎಂದು ಕೇಂದ್ರ ಸರಕಾರ ಲೆಕ್ಕ ಹಾಕಿದೆ.

Advertisement

2 ವರ್ಷಗಳಲ್ಲಿ ಆಹಾರ ವಸ್ತುಗಳು ತುಟ್ಟಿ: ಹೆಚ್ಚಿದ ಮಳೆ, ಅಣೆಕಟ್ಟುಗಳಲ್ಲಿ ಕಡಿಮೆ ನೀರಿನ ಸಂಗ್ರಹ, ಬೆಳೆ ಹಾನಿಯಿಂದಾಗಿ ಆಹಾರ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಆಹಾರ ಹಣದುಬ್ಬರ 2021- 22ನೇ ಸಾಲಿನಲ್ಲಿ ಶೇ.3.8 ಇದ್ದದ್ದು 2022-23ನೇ ಸಾಲಿಗೆ ಶೇ.6.6, 2023-24ನೇ ಸಾಲಿನಲ್ಲಿ ಶೇ.7.5ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಹೇಳಿದ್ದೇನು?
ಆರ್ಥಿಕತೆಗೆ ಖಾಸಗಿ ಕ್ಷೇತ್ರದ ಕೊಡುಗೆ ಮಹತ್ವದ್ದು. ಹೀಗಾಗಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ.

ಅರ್ಥ ವ್ಯವಸ್ಥೆಯ ಬೆನ್ನೆಲುಬಾಗಿರುವ ಸಣ್ಣ, ಅತೀಸಣ್ಣ ಮತ್ತು ಮಧ್ಯಮ ಕ್ಷೇತ್ರದ ಉದ್ದಿಮೆ ವಲಯದ ವಿಸ್ತರಣೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ.

ಉದ್ದಿಮೆ ಮತ್ತು ಆಹಾರ ಕ್ಷೇತ್ರಕ್ಕೆ ಪ್ರಧಾನ ಭೂಮಿಕೆಯಾಗಿರುವ ಕೃಷಿ ಕ್ಷೇತ್ರಕ್ಕೆ ಒತ್ತು ನೀಡಬೇಕು. ಕ್ಷೇತ್ರಕ್ಕೆ ಅಡ್ಡಿಯಾಗಿರುವ ಅಂಶಗಳನ್ನು ನಿವಾರಣೆ ಮಾಡಬೇಕು.ಶಿಕ್ಷಣ ಮತ್ತು ಉದ್ಯೋಗದ ಅಂತರ ನಿವಾರಣೆ ಆಗಬೇಕು. ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.

ಕಂಪೆನಿಗಳಿಗೆ ಲಾಭ ಹೆಚ್ಚಾಗಿದ್ದರೂ ನೇಮಕ ಪ್ರಮಾಣ ಕಡಿಮೆ: ಕೇಂದ್ರ
ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಖಾಸಗಿ ರಂಗದ ಪಾತ್ರ ಪ್ರಧಾನವಾದದ್ದು ಎಂದು ಹೇಳುವ ಜತೆಗೆ ಸರಕಾರ, ಕಂಪನಿಗಳಲ್ಲಿ ನೇಮಕ ಪ್ರಮಾಣ ನಿರೀಕ್ಷೆಗೆ ತಕ್ಕಂತೆ ನಡೆಯುತ್ತಿಲ್ಲ.

ಉದ್ಯೋಗಿಗಳಿಗೆ ಹೆಚ್ಚಿನ ವೇತನ ನೀಡಲಾಗುತ್ತಿಲ್ಲ ಎಂದು ಪರೋಕ್ಷವಾಗಿ ಅತೃಪ್ತಿ ವ್ಯಕ್ತಪಡಿಸಿದೆ. ಆರ್ಥಿಕ ಸಮೀಕ್ಷೆ ಯಲ್ಲಿ ಸರಕಾರ ಈ ಅಂಶದ ಬಗ್ಗೆ ಬೆಟ್ಟು ಮಾಡಿದೆ. ಕೋವಿಡ್‌ ಅನಂತರದ ವರ್ಷಗಳಲ್ಲಿ ಕಂಪೆನಿಗಳು ಪ್ರತೀ ವರ್ಷ ಹೊಂದುವ ಲಾಭದ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. 2019-20ರಿಂದ 2020-23ನೇ ಸಾಲಿನ ನಡುವಿನಲ್ಲಿ 33,000 ಕಂಪೆನಿಗಳಿಗೆ ಸಿಗುವ ಆದಾಯ 4 ಪಟ್ಟು ಹೆಚ್ಚಾಗಿದೆ. ಆದರೆ ಕಂಪೆನಿಗಳ ಹಿತದೃಷ್ಟಿಯಿಂದ ಮತ್ತು ಅರ್ಥ ವ್ಯವಸ್ಥೆ ಅಭಿವೃದ್ಧಿಗಾಗಿ ಹೆಚ್ಚಿನ ಉದ್ಯೋಗಸೃಷ್ಟಿ ಆಗಬೇಕಾಗಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.

ದೇಶಿ ಆಟಿಕೆ ಕ್ಷೇತ್ರಕ್ಕೆ ಒತ್ತು, ಚೀನ ಅವಲಂಬನೆ ಇಳಿಕೆ
ದೇಶಿಯ ಆಟಿಕೆ ಕ್ಷೇತ್ರದ ಉದ್ದಿಮೆ ಹೆಚ್ಚಿಸುವ ನಿಟ್ಟಿನಲ್ಲಿ ಚೀನದಿಂದ ಪೂರೈಕೆಯಾಗುವ ಆಟಿಕೆಗಳ ಮೇಲೆ ಹೆಚ್ಚಿನ ಪ್ರಮಾಣದ ಸುಂಕ ವಿಧಿಸಲಾಗುತ್ತಿದೆ. ಇದರಿಂದಾಗಿ ದೇಶಿಯ ಆಟಿಕೆ ಉತ್ಪಾದನೆ ಹೆಚ್ಚಾಗಲು ನೆರವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದರಿಂದಾಗಿ ದೇಶಿಯ ಆಟಿಕೆಗಳ ರಫ್ತು ಕೂಡ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಆರ್ಥಿಕ ಸಮೀಕ್ಷಾ ವರದಿಯು ದೇಶದ ಆರ್ಥಿಕತೆಯ ಸದೃಢತೆಯನ್ನು ಬಿಂಬಿಸಿದೆ. ಜತೆಗೆ ವಿಕಸಿತ ಭಾರತದೆಡೆಗೆ ಸಾಗುತ್ತಿರುವ ನಮಗೆ ಯಾವ್ಯಾವ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕು ಎಂಬ ಅರಿವನ್ನು ನೀಡಿದೆ.
-ನರೇಂದ್ರ ಮೋದಿ, ಪ್ರಧಾನಿ

ದೇಶದ ಆರ್ಥಿಕತೆ ಅನಿಶ್ಚಿತತೆ ಎದುರಿಸುತ್ತಿದೆ. ಗಿಗ್‌ ಕೆಲಸಗಾರರು, ಅಸಂಘಟಿತ ವಲಯದ ಕಾರ್ಮಿಕರ ರಕ್ಷಣೆ, ದಿನದ ಕನಿಷ್ಠ ವೇತನ 400 ರೂ.ಗೆ ಏರಿಕೆ, ತೆರಿಗೆ ಭಯೋತ್ಪಾದನೆಗೆ ಕಡಿವಾಣವೇ ಇಂದಿನ ಅಗತ್ಯ.
-ಜೈರಾಂ ರಮೇಶ್‌, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next