Advertisement

Budget: 5,318 ಕೋಟಿ ರೂ. ಪೂರಕ ಅಂದಾಜು ಮಂಡನೆ

11:15 PM Dec 16, 2024 | Team Udayavani |

ಬೆಳಗಾವಿ: ಪ್ರಸಕ್ತ ಸಾಲಿಗೆ 3.46 ಲಕ್ಷ ಕೋಟಿ ರೂ.ಗಳ ಬಜೆಟ್‌ ಮಂಡಿಸಿದ್ದ ರಾಜ್ಯ ಸರಕಾರ ಸೋಮವಾರ ವಿಧಾನಸಭೆಯಲ್ಲಿ ಪೂರಕ ಅಂದಾಜುಗಳ ಎರಡನೇ ಕಂತನ್ನು ಮಂಡಿಸಿದ್ದು, ಹೆಚ್ಚುವರಿಯಾಗಿ 5,317.83 ಕೋಟಿ ರೂ. ಬಳಕೆಗೆ ಅವಕಾಶ ಮಾಡಿಕೊಂಡಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ 2024-25ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತನ್ನು ಮಂಡಿಸಿದರು. ಇದರಲ್ಲಿ ಸಂಚಿತ ನಿಧಿಯಿಂದ 3,012.88 ಕೋಟಿ ರೂ. ಹಾಗೂ ಕೇಂದ್ರ ಸಹಾಯಕ್ಕೆ ಸಂಬಂಧಿಸಿದ 1,199.94 ಕೋಟಿ ರೂ. ಸಹ ಸೇರಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಿರ್ವಹಣೆಗೆ ಹೆಚ್ಚುವರಿಯಾಗಿ 7.42 ಕೋಟಿ ರೂ.ಗಳನ್ನು ಪೂರಕ ಅಂದಾಜಿನಲ್ಲಿ ಮೀಸಲಿಟ್ಟಿದ್ದು, ಬೆಳಗಾವಿಯಲ್ಲಿ ಡಿ. 26 ಮತ್ತು 27ರಂದು ನಡೆಯಲಿರುವ ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವಕ್ಕೆ ಹೆಚ್ಚುವರಿಯಾಗಿ 8 ಕೋಟಿ ರೂ. ಒದಗಿಸಿದೆ.

ಶಾಸಕರ ವಾಹನ ಖರೀದಿಗೆ 2 ಕೋಟಿ ರೂ. ಮುಂಗಡ ಮಂಜೂರು ಹಾಗೂ ವಿಧಾನಪರಿಷತ್‌ ಸದಸ್ಯರಿಗೆ ಮೋಟಾರು ವಾಹನ ಖರೀದಿಗೆ 5.40 ಕೋಟಿ ರೂ., ವಿಧಾನಸಭೆ ಉಪಚುನಾವಣೆಗಳ ಇತರ ವೆಚ್ಚಕ್ಕಾಗಿ ಮುಖ್ಯ ಚುನಾವಣಾಧಿಕಾರಿಗೆ ಹೆಚ್ಚುವರಿಯಾಗಿ 2.11 ಕೋಟಿ ರೂ. ಮತ್ತು ವಿಧಾನಸಭಾ ಸದಸ್ಯರ ವೈದ್ಯಕೀಯ ವೆಚ್ಚ ಮರುಪಾವತಿಗೆ 1.25 ಕೋಟಿ ರೂ., ಮಾಜಿ ಸದಸ್ಯರ ವೈದ್ಯಕೀಯ ವೆಚ್ಚ ಮರುಪಾವತಿಗೆ 3 ಕೋಟಿ ರೂ., ಮೇಲ್ಮನೆ ಸದಸ್ಯರ ಸಾಮಾನ್ಯ ವೆಚ್ಚಕ್ಕೆ 23 ಲಕ್ಷ ರೂ., ಸದಸ್ಯರ ಆಪ್ತ ಸಹಾಯಕರ ವೇತನ ಪಾವತಿಸಲು 92 ಲಕ್ಷ ರೂ.ಗಳನ್ನು ಒದಗಿಸಿದೆ.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಪಾಲು
ಕೇಂದ್ರ ಪುರಸ್ಕೃತ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನಕ್ಕೆ ಅನುಗುಣವಾಗಿ ರಾಜ್ಯದ ಪಾಲಿನ 2.46 ಕೋಟಿ ರೂ. ಹೆಚ್ಚುವರಿ ಸಹಾಯಧನ. ಅದೇ ರೀತಿ ಪರಿಶಿಷ್ಟ ಜಾತಿ ಉಪಯೋಜನೆಯಡಿ 55.33 ಲಕ್ಷ ರೂ. ಹಾಗೂ ಗಿರಿಜನ ಉಪಯೋಜನೆಯಡಿ 22.67 ಲಕ್ಷ ರೂ.ಗಳನ್ನು ಹೆಚ್ಚುವರಿ ಸಹಾಯಧನಕ್ಕೆ ಮೀಸಲಿಟ್ಟಿದೆ.

Advertisement

ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಬಿಡುಗಡೆಯಾಗಿರುವ ಕೇಂದ್ರ ಸರಕಾರದ ಪಾಲಿನ ಅನುದಾನಕ್ಕೆ ಅನುಗುಣವಾಗಿ ರಾಜ್ಯದ ಪಾಲಿನ ಅನುದಾನ ಬಿಡುಗಡೆಗೊಳಿಸಲು ಹೆಚ್ಚುವರಿಯಾಗಿ 13.56 ಕೋಟಿ ರೂ., ಸರಕಾರಿ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಾಧಾರಿತ ಸಿಬಂದಿಯ ವೇತನ ಪಾವತಿಗಾಗಿ 72 ಲಕ್ಷ ರೂ., ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ ಎನ್‌ ಸಿಡಿಸಿಯಿಂದ ಪಡೆಯಲಾದ ಸಾಲಕ್ಕೆ ಅಸಲು ಮತ್ತು ಬಡ್ಡಿ ಮೊತ್ತ ಮರುಪಾವತಿಗೆ ಕೊರತೆಯಾಗಿರುವ 7.45 ಕೋಟಿ ರೂ., ಹಾಲು ಉತ್ಪಾದಕರಿಗೆ ಉತ್ತೇಜನ ಯೋಜನೆಯಡಿ 2024ರ ಆಗಸ್ಟ್ ನಿಂದ 2025ರ ಫೆಬ್ರವರಿ ವರೆಗೆ ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಪಾವತಿಸಲು 200 ಕೋಟಿ ರೂ. ನೀಡಲಾಗಿದೆ.

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಗಾಗಿ ಪರಿಶಿಷ್ಟ ಜಾತಿ ಉಪಯೋಜನೆಯಡಿ 3.33 ಕೋಟಿ ರೂ., ಗಿರಿಜನ ಉಪಯೋಜನೆಯಡಿ 5.33 ಕೋಟಿ ರೂ., ಮೀನುಗಾರರ ಕಲ್ಯಾಣ ಯೋಜನೆಗೆ ಕೊರತೆಯಾಗಿರುವ ರಾಜ್ಯದ ಪಾಲಿನ 3.94 ಕೋಟಿ ರೂ. ಹಾಗೂ ಫಲಾನುಭವಿಗಳಲ್ಲದ ಮೂಲಸೌಕರ್ಯ ಸಂಬಂಧಿಸಿದ ಕಾರ್ಯಗಳಿಗೆ ಕೊರತೆಯಾಗಿದ್ದ 6.67 ಕೋಟಿ ರೂ.ಗಳನ್ನು ಸರಿದೂಗಿಸಲು ಒಟ್ಟಾರೆ 19.28 ಕೋಟಿ ರೂ. ನಿಗದಿಪಡಿಸಿದೆ.

ನಾಗಮಂಗಲ ಗಲಭೆ ಸಂತ್ರಸ್ತರಿಗೆ ಪರಿಹಾರ
2024ರ ಸೆ. 11ರಂದು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭ ನಡೆದ ಕೋಮುಗಲಭೆಯಲ್ಲಿ ಹಾನಿಗೊಳಗಾಗಿ ಸಂತ್ರಸ್ತರಾದ ಕಟ್ಟಡ ಮಾಲಕರಿಗೆ ಹಾಗೂ ಬಾಡಿಗೆದಾರರಿಗೆ ಪರಿಹಾರ ಒದಗಿಸಲು 2.66 ಕೋಟಿ ರೂ. ಮೀಸಲಿಟ್ಟಿದ್ದು, 2025ರ ಫೆಬ್ರವರಿ 14-17 ರವರೆಗೆ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿರುವ ಭಾರತ್‌ ಟೆಕÕ… 2025ರ ಕಾರ್ಯಕ್ರಮದಲ್ಲಿ ರಾಜ್ಯವು ಭಾಗವಹಿಸಲು ಹೆಚ್ಚುವರಿಯಾಗಿ 2 ಕೋಟಿ ರೂ. ಹಾಗೂ 87ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಆಚರಣೆಗೆ 15 ಕೋಟಿ ರೂ. ಕೊಟ್ಟಿದ್ದ ಸರಕಾರ ಇದೀಗ ಹೆಚ್ಚುವರಿಯಾಗಿ 5 ಕೋಟಿ ರೂ.ಗಳನ್ನು ಕೊಟ್ಟಿದೆ.

ಯಾವುದಕ್ಕೆ ಎಷ್ಟು ಪೂರಕ ಬಜೆಟ್‌?
-ರಾಜ್ಯದ 5ನೇ ಹಣಕಾಸು ಆಯೋಗದ ಕಾರ್ಯಾವಧಿಯನ್ನು 2025ರ ಫೆಬ್ರವರಿ ವರೆಗೆ ವಿಸ್ತರಿಸಿರುವುದರಿಂದ ಹೆಚ್ಚುವರಿಯಾಗಿ 1.41 ಕೋಟಿ ರೂ. ನಿರ್ವಹಣೆ ವೆಚ್ಚ.
-ಮತದಾರರ ಭಾವಚಿತ್ರ ಗುರುತಿನ ಚೀಟಿ ನೀಡಿಕೆಯ ಸಾಮಾನ್ಯ ವೆಚ್ಚಕ್ಕಾಗಿ 66 ಲಕ್ಷ ರೂ.
-ಕರ್ನಾಟಕ ಲೋಕಸೇವಾ ಆಯೋಗ ಸಚಿವಾಲಯದ ಪರೀಕ್ಷಾ ವೆಚ್ಚಕ್ಕಾಗಿ 1.25 ಕೋಟಿ ರೂ.
-ಸಚಿವಾಲಯ ಸಾಮಾನ್ಯ ವೆಚ್ಚಕ್ಕಾಗಿ 2.10 ಕೋಟಿ ರೂ., ಯಂತ್ರೋಪಕರಣ, ಸಾಧನ ಸಾಮಗ್ರಿ ವೆಚ್ಚಕ್ಕೆ 31 ಲಕ್ಷ ರೂ.
-ಹೊಸದಿಲ್ಲಿಯ ಕರ್ನಾಟಕ ಭವನ ನಿವಾಸಿ ಆಯುಕ್ತರ ಕಚೇರಿಯ ಸಾಮಾನ್ಯ ವೆಚ್ಚಕ್ಕೆ 10 ಲಕ್ಷ ರೂ.
-ಲೋಕಾಯುಕ್ತ ಕಚೇರಿಯ ಪ್ರಯಾಣ ವೆಚ್ಚಕ್ಕೆ 10 ಲಕ್ಷ ರೂ., ಕಚೇರಿಯ ಸಾಮಾನ್ಯ ವೆಚ್ಚಕ್ಕೆ 70 ಲಕ್ಷ ರೂ., ಸಾರಿಗೆ ವೆಚ್ಚಕ್ಕೆ 45 ಲಕ್ಷ ರೂ., ಹೆಲಿಕಾಪ್ಟರ್‌ ಸೇವಾ ಪ್ರಚಾಲನೆಯ ನಿರ್ವಹಣೆ ವೆಚ್ಚಕ್ಕೆ 4.50 ಕೋಟಿ ರೂ., ಉಪಲೋಕಾಯುಕ್ತರ ವಾಹನ ಖರೀದಿಗೆ 29.76 ಲಕ್ಷ ರೂ.,
– 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವಿಸ್ತರಣೆ ಮತ್ತು ಆಧುನೀಕರಣಕ್ಕೆ ರಾಜ್ಯದ ಪಾಲಿನ 24.74 ಕೋಟಿ ರೂ.
-ಕಟ್ಟಡರಹಿತ ಠಾಣೆ, ಪೊಲೀಸ್‌ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು 5 ಕೋಟಿ ರೂ.
-ಗ್ರಾಮ ಪಂಚಾಯತ್‌ ಖಾತರೀಕರಣ ಯೋಜನೆಯಡಿ ಸಾಲದ ಮೇಲಿನ ಬಡ್ಡಿ ಮತ್ತು ಗ್ಯಾರಂಟಿ ಕಮಿಷನ್‌ ಪಾವತಿಗೆ 400 ಕೋಟಿ ರೂ.
– ಅರಣ್ಯೀಕರಣ ಕಾಮಗಾರಿಗೆ 3.22 ಕೋಟಿ ರೂ., ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಯಿಂದ ಸಂಚಯವಾಗಿರುವ ಅನುದಾನದಲ್ಲಿ ಅರಣ್ಯೀಕರಣ ಕಾಮಗಾರಿಗೆ 150 ಕೋಟಿ ರೂ. ಹಾಗೂ ರೈಲ್ವೇ ಬ್ಯಾರಿಕೇಡ್‌ ಕಾಮಗಾರಿಗೆ 150 ಕೋಟಿ ರೂ.
– ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ನಿರ್ವಹಣೆಗಾಗಿ 25 ಕೋಟಿ ರೂ.
– ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಎಂ ವಿಶೇಷ ಅನುದಾನಕ್ಕಾಗಿ 70 ಕೋಟಿ ರೂ., ತುಮಕೂರಿನ ಗೆದ್ದಲಹಳ್ಳಿಯ ಅಂಕಿತಾ ವಿದ್ಯಾಸಂಸ್ಥೆಯ ಕಾರ್ಯನಿರತ ಮಹಿಳಾ ಹಾಸ್ಟೆಲ್‌ ನಿರ್ಮಾಣಕ್ಕೆ 2 ಕೋಟಿ ರೂ.
-ಹೊಸದಾಗಿ 50 ಮೌಲಾನಾ ಆಜಾದ್‌ ಶಾಲೆಗಳ ನಿರ್ವಹಣೆಗೆ 8.12 ಕೋಟಿ ರೂ.
– ಅಂಗನವಾಡಿ ಕಾರ್ಯಕರ್ತರ ನೂತನ ಪಿಂಚಣಿ ವ್ಯವಸ್ಥೆಗೆ 94 ಲಕ್ಷ ರೂ.
– ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ 3 ಕೋಟಿ ರೂ., ಮಿನಿ ಒಲಿಪಿಂಕÕ…ಗೆ 1 ಕೋಟಿ ರೂ.
– ಆಶ್ರಯ ಬಸವ ವಸತಿ ಯೋಜನೆಯ ಬಾಕಿ ಬಿಲ್‌ ಪಾವತಿ, ಫಲಾನುಭವಿಗಳ ವಂತಿಗೆ ಸೇರಿ 134 ಕೋಟಿ ರೂ.
-ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ ಮತ್ತು ಸೇತುವೆಗಳ ಮುಂದುವರಿದ ದುರಸ್ತಿ ಕಾಮಗಾರಿಗಳ ಬಾಕಿ ಬಿಲ್‌ ಪಾವತಿಗೆ 200 ಕೋಟಿ ರೂ.
– 2024ರ ಮೈಸೂರು ದಸರಾ ಹಬ್ಬದ ಆಚರಣೆಗೆ 19.11 ಕೋಟಿ ರೂ. ಕರ್ನಾಟಕ ರಾಜ್ಯೋತ್ಸವ ಹಾಗೂ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭಕ್ಕೆ 5 ಕೋಟಿ ರೂ.
– ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಬಸವ ಕಲಾಸಂಗ್ರಹಾಲಯ ನಿರ್ಮಾಣಕ್ಕೆ 2.50 ಕೋಟಿ ರೂ.
– ಹೈಕೋರ್ಟ್‌ ಯಂತ್ರೋಪಕರಣಗಳ ನಿರ್ವಹಣೆಗಾಗಿ 50 ಲಕ್ಷ ರೂ., ಪ್ಯಾನಲ್‌ ಅಡ್ವೊಕೇಟ್‌ ಗೌರವ ಧನ ಪಾವತಿಗೆ 50 ಲಕ್ಷ ರೂ.

Advertisement

Udayavani is now on Telegram. Click here to join our channel and stay updated with the latest news.

Next