Advertisement

ಬಜೆಟ್‌ ಮಂಡನೆ ತಪ್ಪಲ್ಲ, ವೈಯಕ್ತಿಕ ಪ್ರತಿಷ್ಠೆ ಅಡ್ಡಿಯಾಗದಿರಲಿ

10:38 AM Jun 18, 2018 | Harsha Rao |

2 ಪಕ್ಷಗಳ ನಡುವಿನ ಹಗ್ಗಜಗ್ಗಾಟದಂತೆ ಇದು ಕಾಣಿಸುತ್ತಿಲ್ಲ. ಇಬ್ಬರು ನಾಯಕರ ರಾಜಕೀಯ ಪ್ರತಿಷ್ಠೆಯಂತೆ ವೇದ್ಯವಾಗುತ್ತಿದೆ. ತಾವು ಮಂಡಿಸಿದ ಯೋಜನೆಗಳನ್ನು ರದ್ದು ಮಾಡಬಹುದು ಎಂಬುದು ಸಿದ್ದರಾಮಯ್ಯನವರ ಆತಂಕ.

Advertisement

ರಾಜ್ಯದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಂತ ಹಂತಕ್ಕೂ ಸವಾಲುಗಳು ಎದುರಾಗುತ್ತಲೇ ಇವೆ. ಗಮನಿಸಬೇಕಾದ ಸಂಗತಿಯೆಂದರೆ, ಇವ್ಯಾವುವೂ ಬಾಹ್ಯ ಸವಾಲುಗಳಲ್ಲ. ಮಿತ್ರ ಪಕ್ಷಗಳ ನಡುವೆ ಹಾಗೂ ಪಕ್ಷದೊಳಗೇ ಹುಟ್ಟಿಕೊಂಡ ಸಮಸ್ಯೆಗಳು. ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಲ್ಲೇ ಮೀನಾಮೇಷ ಎಣಿಸುತ್ತ ತಿಂಗಳು ಕಳೆದು ಹೋಯಿತು. ಆಡಳಿತ ಹಳಿಯೇರತೊಡಗಿದೆ ಎಂದುಕೊಳ್ಳುವಷ್ಟರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಮಧ್ಯೆ ಬಜೆಟ್‌ ಮಂಡನೆ ವಿಚಾರವಾಗಿ ಹಗ್ಗಜಗ್ಗಾಟ ಆರಂಭವಾಗಿದೆ. ಉಭಯ ಪಕ್ಷಗಳ ನಡುವೆ ಸಮನ್ವಯ ಏರ್ಪಡುವ ದೃಷ್ಟಿಯಿಂದ ರಚಿಸಲಾದ ಸಮನ್ವಯ ಸಮಿತಿಯ ಸಭೆಯಲ್ಲೇ ಬಜೆಟ್‌ ಮಂಡಿಸಬೇಕೇ, ಬೇಡವೇ ಎಂಬ ವಿಚಾರಕ್ಕೆ ಬಿಸಿಬಿಸಿ ಚರ್ಚೆ ನಡೆದಿದೆ. ಸಭೆ ಮುಗಿದರೂ ಆ ವಿಷಯ ಮಾತ್ರ ಇತ್ಯರ್ಥವಾಗಿಲ್ಲ ಎಂಬುದಕ್ಕೆ ಆ ನಂತರ ಉಭಯ ನಾಯಕರು ಬಹಿರಂಗವಾಗಿ ನೀಡಿದ ಹೇಳಿಕೆಗಳೇ ಸಾಕ್ಷಿಗಳಾಗಿವೆ. ಸಿಎಂ ಕುಮಾರಸ್ವಾಮಿ ತಾವು ಬಜೆಟ್‌ ಮಂಡಿಸಿಯೇ ಸಿದ್ಧ, ಈಗಾಗಲೇ ಅಧಿಕಾರಿಗಳಿಗೆ ಸಿದ್ಧತೆ ಆರಂಭಿಸು ವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಬಜೆಟ್‌ ಅಗತ್ಯವಿಲ್ಲ, ಪೂರಕ ಅಂದಾಜು ಗಳಲ್ಲಿ ಹೊಸ ಕಾರ್ಯಕ್ರಮ ಸೇರಿಸಿದರೆ ಸಾಕು ಎಂದಿದ್ದಾರೆ.

ಇದು ಎರಡು ಪಕ್ಷಗಳ ನಡುವಿನ ಹಗ್ಗಜಗ್ಗಾಟದಂತೆ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ. ಇಬ್ಬರು ನಾಯಕರ ರಾಜಕೀಯ ಪ್ರತಿಷ್ಠೆಯಂತೆ ವೇದ್ಯವಾಗುತ್ತಿದೆ. ತಾವು ಮಂಡಿಸಿದ ಬಜೆಟ್‌ನ ಯೋಜನೆಗಳನ್ನು ಹೊಸ ಬಜೆಟ್‌ನಲ್ಲಿ ಮುಖ್ಯಮಂತ್ರಿ ರದ್ದು ಮಾಡಬಹುದು ಅಥವಾ ಮಾರ್ಪಾಡು ಮಾಡಬಹುದು ಎಂಬುದು ಸಿದ್ದರಾಮಯ್ಯನವರ ಆತಂಕ. ತಮ್ಮ ನಿಲುವನ್ನು ವ್ಯಕ್ತಪಡಿಸಲು ಸಮನ್ವಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ಅವರು ಬಳಸಿಕೊಂಡಿದ್ದಾರೆ. ತಾವು ಮುಖ್ಯಮಂತ್ರಿಯಾಗಿ, ಹಣಕಾಸು ಖಾತೆಯನ್ನೂ ಇಟ್ಟುಕೊಂಡ ಮೇಲೆ ಬಜೆಟ್‌ ಮಂಡಿಸದೇ ಹೋದರೆ ರಾಜಕೀಯವಾಗಿ ಹೆಗ್ಗಳಿಕೆ ಗಳಿಸಲು ಹೇಗೆ ಸಾಧ್ಯ? ತಮ್ಮ ಚಿಂತನೆಯ ಯೋಜನೆಗಳ ಪ್ರಕಟಣೆಗೆ ಬಜೆಟ್‌ ಬೇಕು ಎಂಬುದು ಕುಮಾರಸ್ವಾಮಿಯವರ ವಾದ. 

ಹಳೆ ಸರ್ಕಾರ ಬಜೆಟ್‌ ಮಂಡಿಸಿ ಒಂದೆರಡು ತಿಂಗಳಲ್ಲೇ ಚುನಾವಣೆ ನಡೆದು, ಹೊಸ ಸರ್ಕಾರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮತ್ತೆ ಬಜೆಟ್‌ ಮಂಡಿಸುವುದು ಸಾಮಾನ್ಯ ಸಂಪ್ರದಾಯ. ಚುನಾವಣೆ ಹೊತ್ತಲ್ಲಿ ಎರಡು, ಮೂರು ತಿಂಗಳ ಅವಧಿಗೆ ಲೇಖಾನುದಾನ ಅಥವಾ ಮಿನಿ ಬಜೆಟ್‌ ಮಂಡಿಸಲಾಗುತ್ತದೆ. ಬಳಿಕ ಹೊಸ ಸರ್ಕಾರ ಉಳಿದ ಒಂಭತ್ತು, ಹತ್ತು ತಿಂಗಳಿಗೆ ಪೂರ್ಣ ಬಜೆಟ್‌ ಮಂಡಿಸುತ್ತದೆ. ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಬಜೆಟ್‌ ಮಂಡಿಸಿ ಚುನಾವಣೆ ಎದುರಿಸಿದ್ದರು. ಬಳಿಕ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಹೊಸದಾಗಿ ಬಜೆಟ್‌ ಮಂಡಿಸಿತ್ತು. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡಿಸುತ್ತೇನೆ ಎಂಬುದರಲ್ಲಿ ವಿಶೇಷವೇನಿಲ್ಲ, ಸಹಜವೇ. ಇದು ತಪ್ಪೂ ಅಲ್ಲ. ಅವರು ಬಜೆಟ್‌ ಮಂಡಿಸಲಿ. ಮುಖ್ಯಮಂತ್ರಿಗೆ ಇಷ್ಟಾದರೂ ಹೆಗ್ಗಳಿಕೆ ಇಲ್ಲದಿದ್ದರೆ, ಈ ರಾಜಕೀಯ ವ್ಯವಸ್ಥೆಯಲ್ಲಿ ಏನೂ ಅಲ್ಲ ಎನಿಸಿಕೊಳ್ಳುತ್ತಾರೆ. ಎಷ್ಟೇ ಸಾರಿ ಬಜೆಟ್‌ ಮಂಡಿಸಿದರೂ, ಇಲಾಖಾವಾರು ಹಂಚಿಕೆ ಗಳನ್ನು ಉಲ್ಟಾ ಮಾಡಲಾಗದು. ಶೂನ್ಯಗೊಳಿಸಲೂ ಸಾಧ್ಯವಿಲ್ಲ.  ಈ ವಿಷಯವನ್ನೇ ಮಾಜಿ ಮುಖ್ಯಮಂತ್ರಿ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಸರಿಯಲ್ಲ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಬಾರಿ ಆಡಳಿತದಲ್ಲಿದ್ದ ಪಕ್ಷ ಮಿತ್ರಪಕ್ಷವಾಗಿ ಸರ್ಕಾರದಲ್ಲಿ ಕೈಜೋಡಿಸಿದೆ. ಇದು ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಪರಸ್ಪರ ಹೊಂದಾಣಿಕೆ ಅತ್ಯಗತ್ಯ. ಹಾಗಾಗಿ ಕಾಂಗ್ರೆಸ್‌ ಸರ್ಕಾರ ಹಿಂದೆ ಘೋಷಣೆ ಮಾಡಿದ್ದನ್ನು ಮುಂದು ವರಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕೈಗೊಳ್ಳುವುದು ಸೂಕ್ತ. ಇಲ್ಲದಿದ್ದರೆ, ಮತ್ತೆ ಸಂಘರ್ಷಕ್ಕೆ ದಾರಿಯಾದೀತು. ನಿತ್ಯವೂ ಗುದ್ದಾಟದ್ದೇ ಸುದ್ದಿಯಾದರೆ ಅದು ಸರ್ಕಾರಕ್ಕೆ ಭೂಷಣವಲ್ಲ. ಆಡಳಿತರೂಢ ನಾಯಕರು ಇದಕ್ಕೆ ಆಸ್ಪದ ಮಾಡಿಕೊಡುವುದೂ ಸರಿಯಲ್ಲ. ಜನರು ನಿರೀಕ್ಷೆ ಮಾಡುವುದು ಕಲಹವಿಲ್ಲದೆ ಸುಗಮವಾಗಿ ನಡೆಯುವ ಸರ್ಕಾರವನ್ನು ಎಂಬುದನ್ನು ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next