ಬೆಂಗಳೂರು: ರಾಜ್ಯದಲ್ಲಿ ರೈತರು ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಬಜೆಟ್‌ನಲ್ಲಿ ಮನ್ನಾ ಮಾಡುವಂತೆ ರೈತ
ಸಂಘಟನೆಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ಜತೆಗೆ, ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಒದಗಿಸಲು ಡಾ.ಸ್ವಾಮಿನಾಥನ್ ವರದಿಯ ಅಂಶಗಳು ಹಾಗೂ ಕೃಷಿ ಬೆಲೆ ಆಯೋಗದ ಶಿಫಾರಸು ಜಾರಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
ವಿಧಾನಸೌಧದಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರು ರೈತ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ಮನವಿಗಳ ಮಹಾಪೂರವನ್ನೇ ಹರಿಸಿದ ರೈತ ನಾಯಕರು, ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತ ಸ್ಥಿತಿ ಬಾರದಂತೆ ಬಜೆಟ್‌ನಲ್ಲಿ ಕೃಷಿ, ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್, ಕೆ.ಎಸ್.ಪುಟ್ಟಣ್ಣಯ್ಯ, ಕೆ.ಟಿ.ಗಂಗಾಧರ್ ಸೇರಿದಂತೆ ಸಭೆಯಲ್ಲಿ ಮಾತನಾಡಿದ ಎಲ್ಲ ರೈತ ನಾಯಕರು ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಒತ್ತು ನೀಡಬೇಕು ಎಂದು ಪ್ರತಿ ಪಾದಿಸಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೃಷಿ , ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ. ರೈತರ ಸಂಕಷ್ಟಕ್ಕೆ ಧಾವಿಸಿದೆ. ಈ ಬಾರಿಯ ಬಜೆಟ್‌ನಲ್ಲೂ ಕೃಷಿ , ತೋಟಗಾರಿಕೆ,ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಬಳಿ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುವ ಸಂಬಂಧ ಚರ್ಚಿಸಲು ರೈತ ಸಂಘಟನೆಗಳ ಜತೆಯೂ ಪ್ರತ್ಯೇಕವಾಗಿ ಮಾತುಕತೆ ನಡೆಸಲಾಗುವುದು.
– ಸಿದ್ದರಾಮಯ್ಯ, ಸಿಎಂ