ಬೆಂಗಳೂರು: ಬಜೆಟ್‌ನಲ್ಲಿ ಭವಿಷ್ಯದ ಯೋಜನೆಗಳ ಕುರಿತು ಹೇಳುವ ಬದಲು, ಹಿಂದಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ದ್ವೇಷಿಸುವ ರಾಜಕೀಯ ಪ್ರೇರಿತ ರಿವರ್ಸ್ ಗೇರ್ ಬಜೆಟ್ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಪ್ರತಿಯೊಂದಕ್ಕೂ 2013ಕ್ಕೆ ಹೋಲಿಕೆ ಮಾಡಿದ್ದಾರೆ. ಅದನ್ನು ನೋಡಿದರೆ ಅವರು ಹೆಚ್ಚು ಸಾಲ ಮಾಡಿದ್ದಾರೆ. ರಾಜ್ಯಪಾಲರ ಭಾಷಣ ಮತ್ತು ಬಜೆಟ್ ವ್ಯತ್ಯಾಸ ನೋಡಿದರೆ, ಇದೊಂದು ಸುಳ್ಳು ಹೇಳುವ ಸರ್ಕಾರ ಅಂತ ಗೊತ್ತಾಗಿದೆ. ಬಜೆಟ್‌ನಲ್ಲಿಯೂ ಕೂಡ ದ್ವೇಷದ ರಾಜಕಾರಣ ಮಾಡಿದ್ದಾರೆ. ನಮ್ಮ ಯೋಜನೆಗಳ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ.
ಈ ಬಜೆಟ್ ನೋಡಿದರೆ ಟೀಕೆ ಮಾಡುವುದಕ್ಕೆ ಹೆಚ್ಚಿನ ಸ್ಥಾನ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ 6 ತಿಂಗಳು ಕಳೆದಿದೆ. ಈ ವರ್ಷ ಸುಮಾರು 25 ಸಾವಿರ ಕೋಟಿ ರೂ. ಮಾತ್ರ ಹೆಚ್ಚಿಗೆ ಬೇಕಾಗುತ್ತದೆ. ತೆರಿಗೆ ಹೆಚ್ಚಳ ಮಾಡುವ ಅಗತ್ಯವಿರಲಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳ ಜಾರಿಯ ಹೆಸರಲ್ಲಿ ಈ ಬಜೆಟ್ ಸಾಮಾನ್ಯರ ಮೇಲೆ ದೊಡ್ಡ ಹೊರೆ ಹೊರೆಸಿದೆ. ನಮ್ಮದು 77 ಸಾವಿರ ಕೋಟಿ ರೂ. ಸಾಲ ಇದ್ದದ್ದು, ಈಗ 88 ಸಾವಿರ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ. ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ. ಮಾಡಿದ್ದಾರೆ. ನಾವು ಹೆಚ್ಚುವರಿ ಬಜೆಟ್ ಮಾಡಿದ್ದೆವು. ಇವರು ಕೊರತೆ ಬಜೆಟ್ ಮಾಡಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಪಿಡಬ್ಲುಡಿ, ನೀರಾವರಿ, ಯೋಜನೆಗಳಿಗೆ ಅನುದಾನ ಪ್ರಮಾಣ ಕಡಿಮೆ ಮಾಡಿದ್ದಾರೆ. ಹೆಚ್ಚಿನ ಅನುದಾನ ನೀಡದೆ ಅಭಿವೃದ್ಧಿ ಹೇಗೆ ಆಗುತ್ತದೆ? ಎಂದು ಪ್ರಶ್ನಿಸಿದರು.
ಹೊಸ ಭರವಸೆ ನೀಡದಿರುವ, ದುಡಿಯುವ ವರ್ಗ, ಪರಿಶಿಷ್ಟ ಜನರಿಗೆ ಯಾವುದೇ ಅನುಕೂಲಕರವಲ್ಲದ ಬಜೆಟ್ ಇದಾಗಿದೆ ಎಂದು ಬಸವರಾಜ ಬೊಮ್ಮಾಯಿ ದೂರಿದರು.