ಕೃಷಿ ಕ್ಷೇತ್ರಗಳಿಗೆ 1.52 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ ಮುಖ್ಯವಾಗಿ ಸುಸ್ಥಿರ ಕೃಷಿ, ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಆ ಮೂಲಕ ಉತ್ಪಾದನೆಗೆ ಒತ್ತು ನೀಡಲಾಗಿದೆ. ಮುಂದಿನ 2 ವರ್ಷಗಳಲ್ಲಿ 10 ಕೋಟಿ ರೈತರನ್ನು ನೈಸರ್ಗಿಕ ಕೃಷಿಗೆ “ಶಿಫ್ಟ್’ ಮಾಡುವ ಗುರಿಯನ್ನು ಹೊಂದಿದೆ. ಇದು ಸ್ವಾಗತಾರ್ಹ.
ಆದರೆ, ಇದರ ಆಚೆಗೆ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಈ ಬಜೆಟ್‌ನಲ್ಲಿ ನಡೆದಿದೆಯೇ ಎಂದು ಕೇಳಿದರೆ, ಉತ್ತರ- “ಇಲ್ಲ’ ಎಂದೇ ಹೇಳಬೇಕಾಗುತ್ತದೆ. “ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ’ ಎನ್ನುವು ದೊಂದೇ ರೈತರ ಅಳಲು ಆಗಿದೆ. ಬೆಂಬಲ ಬೆಲೆ ಇದೆಯಲ್ಲ ಎಂದು ಕೇಳಬಹುದು. ಅದರಿಂದ ಎಲ್ಲ ರಾಜ್ಯಗಳ ರೈತರಿಗೂ ಅನುಕೂಲ ಆಗುವುದಿಲ್ಲ. ಹಾಗಾಗಿ, ಕೃಷಿ ಬೆಲೆ ನೀತಿ ರೂಪಿಸಬೇಕಿತ್ತು.
ಇದರ ಮುಂದುವರಿದ ಭಾಗ “ಮಾರುಕಟ್ಟೆ ಮಾರ್ಜಿನ್’. ಪ್ರಸ್ತುತ ವ್ಯವಸ್ಥೆಯಲ್ಲಿ 6 ತಿಂಗಳು ಕಷ್ಟಪಟ್ಟು ಬೆಳೆದ ರೈತನಿಗೆ 250 ರೂ. ಸಿಕ್ಕರೆ, ಮಧ್ಯವರ್ತಿಗೆ 500 ರೂ. ಸಿಗುತ್ತಿದೆ. ವ್ಯಾಪಾರಿಗೆ 3ಪಟ್ಟು ಅಂದರೆ 750 ರೂ. ಸಿಗುತ್ತಿದೆ. ಈ ಸ್ಥಿತಿ ಬದಲಾಗಬೇಕಿದೆ. ಮಾರುಕಟ್ಟೆ ಸಂಖ್ಯೆ ಹೆಚ್ಚಿಸಬೇಕಿತ್ತು.ಗ್ರಾಮೀಣ ಕೈಗಾರಿಕೆಗಳ ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತುಕೊಡುವ ಕೆಲಸ ಆಗಬೇಕಿತ್ತು. ಇದನ್ನು ಎದುರು ನೋಡುತ್ತಿರುವ ರೈತರ ಪ್ರಮಾಣ ಶೇ. 85ರಷ್ಟಿದೆ. ಆದರೆ, ಈ ಅಂಶಗಳ ಕಡೆಗೆ ಗಮನ ನೀಡಿಲ್ಲ. ತಂತ್ರಜ್ಞಾನ ಆಧಾರಿತ ಕೃಷಿ, ಸಂಶೋಧನೆ ಮತ್ತು ಅಭಿವೃದ್ಧಿ ಬೇಕಾಗಿಯೇ ಇಲ್ಲ ಅಂತ ನಾನು ಹೇಳುತ್ತಿಲ್ಲ. ನಮ್ಮ ಆದ್ಯತೆ ಸಣ್ಣ ಮತ್ತು ಅತಿಸಣ್ಣ ರೈತರು ಆಗಿರಬೇಕಿತ್ತು. ಅತಿಹೆಚ್ಚು ಇಳುವರಿ ಕೊಡುವ 109 ತಳಿಗಳನ್ನು ಘೋಷಿಸಲಾಗಿದೆ. ಆದರೆ, ಎಷ್ಟು ಸಣ್ಣ-ಅತಿಸಣ್ಣ ರೈತರು ಆ ತಳಿಗಳ ಪ್ರಯೋಗಕ್ಕೆ ಮುಂದಾಗುತ್ತಾರೆ? ಕಳೆದ ಹಲವು ದಶಕಗಳಲ್ಲಿ 25 ಸಾವಿರಕ್ಕೂ ಅಧಿಕ ತಳಿಗಳು ಬಂದಿವೆ. ಅದರಲ್ಲಿ ಎಷ್ಟು ತಳಿಗಳು ನಮ್ಮ ರೈತರ ಜಮೀನುಗಳಿಗೆ ಬಂದಿವೆ? ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಬಹುಸಂಖ್ಯಾತ ರೈತರ ದೃಷ್ಟಿಯ ಕೊರತೆ ಕಾಣುತ್ತಿದೆ.
ಇನ್ನು ಗ್ರಾಮೀಣಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿಗೆ 2.66 ಲಕ್ಷ ಕೋಟಿ ನೀಡಿರುವುದು ಸ್ವಾಗತಾರ್ಹ. ಈ ಹಣ ಸಾಮಾನ್ಯವಾಗಿ ರಾಜ್ಯ ಸರಕಾರದ ಸಂಬಂಧಪಟ್ಟ ಇಲಾಖೆಗೆ ಬರುತ್ತದೆ. ಅನಂತರ ಅಲ್ಲಿಂದ ಪಂಚಾಯತ್ ಮಟ್ಟಕ್ಕೆ ಹೋಗುತ್ತದೆ. ಈ ಬಾರಿ ಬಜೆಟ್‌ನಲ್ಲಿ ನೀಡಿದ ಅನುದಾನ ಹಾಗೆ ಆಗಬಾರದು. ನೇರವಾಗಿ ಪಂಚಾಯ್ತಿ ಗಳಿಗೆ ಹೋಗುವಂತಾದರೆ, ಉದ್ದೇಶ ಸಾರ್ಥಕವಾಗುತ್ತದೆ.
ಪ್ರೊ| ಆರ್.ಎಸ್. ದೇಶಪಾಂಡೆ,
ಮಾಜಿ ನಿರ್ದೇ ಶಕರು, ಸಾಮಾಜಿಕ ಮತ್ತು ಆರ್ಥಿಕ ಬದಲಾಣೆ ಅಧ್ಯಯನ ಸಂಸ್ಥೆ (ಐಸೆಕ್)