Advertisement

ಮುಳುಗಡೆ ಜಿಲ್ಲೆಗೆ ತಾತ್ಸಾರ ಸಲ್ಲ

12:43 PM Mar 07, 2020 | Suhan S |

ಬಾಗಲಕೋಟೆ: ಇಡೀ ದೇಶದಲ್ಲಿ 2ನೇ ಅತಿದೊಡ್ಡ ನೀರಾವರಿ ಯೋಜನೆ ಎಂಬ ಖ್ಯಾತಿ ಪಡೆದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಏಕೆ ಇಷ್ಟೊಂದು ತಾತ್ಸಾರದಿಂದ ನೋಡುತ್ತಿವೆ ಎಂಬ ಆಕ್ರೋಶದ ಮಾತು ಕೇಳಿ ಬರುತ್ತಿವೆ.

Advertisement

ಚುನಾವಣೆಗೊಮ್ಮೆ, ಬಜೆಟ್‌ಗೂ ಮುನ್ನ ಪ್ರತಿ ಬಾರಿ ದೊಡ್ಡ ದೊಡ್ಡ ಭರವಸೆಗಳ ಮಾತುಗಳು ಕೇಳಿ ಬರುತ್ತವೆ. ಪ್ರತಿಯೊಬ್ಬರೂ ನಾವು ಯುಕೆಪಿಗಾಗಿ, ಸಂತ್ರಸ್ತರ ಪರವಾಗಿದ್ದೇವೆ ಎಂದು ಹೇಳುತ್ತಾರೆ. ಯುಕೆಪಿ ಯೋಜನೆ ಪೂರ್ಣಗೊಳಿಸಲು ನಾವು ಸಂಪೂರ್ಣ ಬಂದೂ ಹೇಳುತ್ತಾರೆ. ಆದರೆ, ಬಜೆಟ್‌ ಮುಗಿದ ಬಳಿಕ, ಮುಂದಿನ ವರ್ಷ ಅನುದಾನ ಕೊಡುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿ, ಜಾರಿಕೊಳ್ಳುತ್ತಾರೆ. ಇದು ಪ್ರತಿವರ್ಷ ಹೀಗೆಯೇ ನಡೆದಿದೆ. ಇದಕ್ಕೊಂದು ಮುಕ್ತಿ ಯಾವಾಗ, ಉತ್ತರ ಕರ್ನಾಟಕ, ಅದರಲ್ಲೂ ರಾಜ್ಯದ ಬಹುಭಾಗ ಭೌಗೋಳಿಕ ಕ್ಷೇತ್ರಕ್ಕೆ ನೀರಾವರಿ ಒದಗಿಸುವ ಈ ಯೋಜನೆಗೆ ಪಕ್ಷಾತೀತ ಬದ್ಧತೆ ಬೇಕಿದೆ ಎಂಬ ಕೂಗು ಕೇಳಿ ಬಂದಿದೆ.

ಅನುದಾನ ಖರ್ಚು ಮಾಡಲು ಅಧಿಕಾರಿಗಳೇ ಇಲ್ಲ: ಕಳೆದ ಆರು ದಶಕಗಳ ಹಿಂದೆ ಅಡಿಗಲ್ಲು ಹಾಕಿರುವ ಯೋಜನೆ, 2020 ಬಂದರೂ ಪೂರ್ಣಗೊಳ್ಳುತ್ತಿಲ್ಲ. ಇಲ್ಲಿಯ ವರೆಗಿನ ಎಲ್ಲಾ ಸರ್ಕಾರಗಳು ಈ ಯೋಜನೆಗೆ ಬದ್ಧತೆ, ಕಾಳಜಿ ಹಾಗೂ ಅನುದಾನದ ಜತೆಗೆ ಅಧಿಕಾರಿಗಳನ್ನು ಒದಗಿಸದಿರುವುದು ಕಂಡು ಬರುತ್ತದೆ. ಯುಕೆಪಿಗೆ ಅನುದಾನ ಕೊಟ್ಟಂಗೆ ಇರಬೇಕು, ಆ ಅನುದಾನ ಬಳಕೆ ಮಾಡಲೂ ಸಾಧ್ಯವಾಗದ ವಾತಾವರಣವೂ ಇರಬೇಕು ಎಂಬುದು ಸರ್ಕಾರದ ನಿಲುವು ಎಂಬಂತಿದೆ ಎಂಬ ಗಂಭೀರ ಆರೋಪ ರೈತಾಪಿ ವಲಯದಿಂದ ಪ್ರತಿಧ್ವನಿಸಿದೆ.

ಅನುದಾನ ಬಳಕೆಗೆ ತ್ವರಿತವಾಗಿ ಕೆಲಸ ಕಾರ್ಯಗಳಾಗಬೇಕು. ಅದಕ್ಕಾಗಿ ಸರ್ಕಾರವೇ ಮಂಜೂರು ಮಾಡಿರುವ ಎಲ್ಲಾ ಹುದ್ದೆಗಳಲ್ಲಿ (ಪ್ರಮುಖವಾಗಿ ಆಯುಕ್ತರು, ಭೂಸ್ವಾಧೀನ ಅಧಿಕಾರಿಗಳು, ಪುನರ್‌ವಸತಿ ಅಧಿಕಾರಿಗಳು) ಅಧಿಕಾರಿಗಳನ್ನು ನೇಮಕ ಮಾಡಬೇಕು. ಆಗ ತ್ವರಿತವಾಗಿ ಕೆಲಸಗಳಾಗುವ ಜತೆಗೆ ವಾರ್ಷಿಕವಾಗಿ ನೀಡಿದ ಅನುದಾನವೂ ಖರ್ಚಾಗುತ್ತದೆ. ಆದರೆ, ಯುಕೆಪಿ, ಬಿಟಿಡಿಎ ವಿಷಯದಲ್ಲಿ ಕೊಟ್ಟ ಅನುದಾನವೂ ಖರ್ಚಾಗುತ್ತಿಲ್ಲ. ಇದೇ ನೆಪ ಇಟ್ಟುಕೊಂಡು ಪ್ರತಿವರ್ಷ ಅನುದಾನ ಖಡಿತವೂ ಆಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದೆ.

ಬದ್ಧತೆಯ ಆತ್ಮಾವಲೋಕನ ಅಗತ್ಯ: ಯುಕೆಪಿ ಯೋಜನೆ ಪೂರ್ಣಗೊಳಿಸುವುದೆಂದರೆ ಸಣ್ಣ ಕೆಲಸವಲ್ಲ. ಹಲವಾರು ಕಾನೂನು ಹೋರಾಟ, ರೈತರ ಹೋರಾಟದ ಬಳಿಕ ಬಿ ಸ್ಕೀಂ ಅಡಿ ನಮಗೆ ನೀರು ಹಂಚಿಕೆ ಅಂತಿಮಗೊಳ್ಳುವ ಜತೆಗೆ ಆಲಮಟ್ಟಿ ಜಲಾಶಯವನ್ನು 525.256 ಮೀಟರ್‌ಗೆ ಎತ್ತರಿಸಲು ಅನುಮತಿ ಸಿಕ್ಕಿದೆ. ಈ ಅನುಮತಿ ಸಿಕ್ಕು 10 ವರ್ಷವಾದ್ರೂ ಹನಿ ನೀರು ಬಳಸಿಕೊಂಡಿಲ್ಲ. ನಮ್ಮ ಬದ್ಧತೆಯ ಬಗ್ಗೆ ಆತ್ಮಾವಲೋಕನ ನಡೆಯಲೇಬೇಕು ಎಂಬುದು ಹಲವರ ಅಭಿಪ್ರಾಯ.

Advertisement

ಆಕ್ರೋಶದ ಬಳಿಕ ಘೋಷಣೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುರುವಾರ ಮಂಡಿಸಿದ ಬಜೆಟ್‌ಗೆ ಕೃಷ್ಣೆಯ ನೆಲದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ, ಜಲ ಸಂಪನ್ಮೂಲ ಇಲಾಖೆಯ ಒಟ್ಟು ನೀರಾವರಿ ಯೋಜನೆಗೆ ನೀಡಿದ ಅನುದಾನದಲ್ಲಿ ಯುಕೆಪಿಗೆ 10 ಸಾವಿರ ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ಈ ಅನುದಾನ ನೀಡಿರುವುದೇನೋ ಖುಷಿಯ ವಿಷಯವೇ. ಆದರೆ, ಈ 10 ಸಾವಿರ ಕೋಟಿ ಹಣ, ಒಂದು ವರ್ಷದಲ್ಲಿ ಪೂರ್ಣ ಬಳಸಬೇಕು. ಆ ನಿಟ್ಟಿನಲ್ಲಿ ತ್ವರಿತ ಕೆಲಸ ನಡೆಯಬೇಕು. ಆ ಕೆಲಸ ಮಾಡಲು ಪ್ರಮುಖ ಹುದ್ದೆಗಳಿಗೆ ಖಾಯಂ ಅಧಿಕಾರಿಗಳ ನೇಮಕ ಮಾಡಬೇಕಿದೆ.

ಬೇಕಿರೋದು 52 ಸಾವಿರ ಕೋಟಿ: ಅಲ್ಲದೇ 20 ಗ್ರಾಮಗಳು ಮುಳುಗಡೆ, 1.23 ಲಕ್ಷ ಎಕರೆ ಭೂಮಿಗೆ ಪರಿಹಾರ, 20 ಪುನರ್‌ವಸತಿ ಕೇಂದ್ರಗಳ ನಿರ್ಮಾಣ, 9 ಉಪ ಯೋಜನೆಗಳ ಕಾಲುವೆ ಕಾಮಗಾರಿಗಳ ಪೂರ್ಣ ಹೀಗೆ ಹಲವು ಕೆಲಸ ಕಾರ್ಯಗಳಿವೆ. ಯುಕೆಪಿ 3ನೇ ಹಂತದ ಎಲ್ಲ ಕಾಮಗಾರಿಗೆ 52 ಸಾವಿರ ಕೋಟಿ ಅನುದಾನದ ಸಮಗ್ರ ಯೋಜನಾ ವರದಿಯನ್ನು ರಾಜ್ಯ ಸರ್ಕಾರವೇ ಕಳೆದ 2017ರಲ್ಲಿ ಸಿದ್ಧಪಡಿಸಿದೆ. ಪ್ರತಿವರ್ಷ ವಿಳಂಬವಾದಂತೆ ಶೇ.10ರಷ್ಟು ಯೋಜನಾ ವೆಚ್ಚವೂ ಹೆಚ್ಚಳವಾಗುತ್ತದೆ. 52 ಸಾವಿರ ಕೋಟಿ ಅನುದಾನ ಅಗತ್ಯವೆಂದು ಸರ್ಕಾರವೇ ಹೇಳಿರುವಾಗ, ಈ ವರ್ಷ 10 ಸಾವಿರ ಕೋಟಿ ನೀಡಿದೆ. ಅಲ್ಲದೇ ಮೂರು ವರ್ಷದಲ್ಲಿ ಇಡೀ ಯೋಜನೆ ಪೂರ್ಣಗೊಳಿಸುತ್ತೇವೆ ಎಂದೂ ಸರ್ಕಾರ ಹೇಳುತ್ತದೆ. ಹಾಗಾದರೆ, ಈ ಅನುದಾನದಲ್ಲಿ ಯುಕೆಪಿ ಮುಗಿಸಲು ಹೇಗೆ ಸಾಧ್ಯ ಎಂಬುದು ಸಂತ್ರಸ್ತರ ಪ್ರಶ್ನೆ.

ಪಕ್ಷ ಯಾವುದೇ ಇರಲಿ, ಸರ್ಕಾರ ಯಾವುದೇ ಬರಲಿ. ಕೃಷ್ಣೆಗೆ ತಾರತಮ್ಯ ನಿಂತಿಲ್ಲ. ಹಿಂದೆ ಎಚ್‌.ಡಿ. ದೇವೇಗೌಡರ ಗಟ್ಟಿ ನಿಲುವಿನಿಂದ ಈ ಯೋಜನೆಗೆ ಸಿಕ್ಕ ವೇಗ, ಸದ್ಯ ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದು ಸದ್ಭಳಕೆಯಾಗಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಯುಕೆಪಿಗೆ 10 ಸಾವಿರ ಕೋಟಿ ನೀಡುವುದಾಗಿ ಸ್ವತಃ ಸಿಎಂ ಯಡಿಯೂರಪ್ಪ ಇಂದು ಹೇಳಿದ್ದಾರೆ. ಜಿಲ್ಲೆಯ ಡಿಸಿಎಂ ಆಗಿ ನಾನು ಅಭಿನಂದಿಸುತ್ತೇನೆ. ನಮ್ಮದೇ ಜಿಲ್ಲೆಯ ವಿರೋಧ ಪಕ್ಷದ ನಾಯಕರೂ, ಸಿಎಂ ಅವರನ್ನು ಅಭಿನಂದಿಸಬೇಕಿತ್ತು. ಮೂರು ವರ್ಷದಲ್ಲಿ ಗ್ರಾಮಗಳ ಮುಳುಗಡೆ, ಪುನರ್‌ವಸತಿ, ಭೂ ಪರಿಹಾರ ಹೀಗೆ ಎಲ್ಲ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಯುಕೆಪಿಗೆ 10 ಸಾವಿರ ಕೋಟಿ ಘೋಷಣೆ ಮಾಡಲಾಗಿದೆ. ಸರ್ಕಾರದ ಯೋಜನೆಯಂತೆ ಯುಕೆಪಿ 3ಕ್ಕೆ ಒಟ್ಟು 52 ಸಾವಿರ ಕೋಟಿ ಅಗತ್ಯವಿದೆ. ಈಗ ಕೇವಲ 10 ಸಾವಿರ ಕೊಟ್ಟು, ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲು ಹೇಗೆ ಸಾಧ್ಯ. ಭೂಸ್ವಾಧೀನಕ್ಕೆ 20 ಸಾವಿರ ಕೋಟಿ ನೀಡಬೇಕಿತ್ತು. ನಮ್ಮ ಭಾಗದಲ್ಲೇ ಇಬ್ಬರು ಡಿಸಿಎಂ, ಜಲ ಸಂಪನ್ಮೂಲ ಸಚಿವರಿದ್ದರೂ, ಕೃಷ್ಣೆಗೆ ನ್ಯಾಯ ಸಿಗುತ್ತಿಲ್ಲ. ಪ್ರಕಾಶ ಅಂತರಗೊಂಡ, ಯುಕೆಪಿ ಯೋಜನಾ ಬಾಧಿತ ಸಂತ್ರಸ್ತರ ಸಮಿತಿ ಮುಖಂಡ

 

-ಎಸ್‌.ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next