ಮುಂಬಯಿ : ದೇಶ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಂತೆಯೇ ಕೇಂದ್ರದಲ್ಲಿನ ಎನ್‌ಡಿಎ ಸರಕಾರ ನಾಳೆ ಫೆ.1ರಂದು ಸಂಸತ್ತಿನಲ್ಲಿ ಮಂಡಿಸಲಿರುವ ಮಧ್ಯಾವಧಿ ಬಜೆಟ್ ಬಗ್ಗೆ ಭಾರೀ ನಿರೀಕ್ಷೆಗಳನ್ನು ಇರಿಸಿಕೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್, ಇಂದು ಗುರುವಾರದ ವಹಿವಾಟನ್ನು 665.44 ಭರ್ಜರಿ ಏರಿಕೆಯೊಂದಿಗೆ 36,256.69 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 179.15 ಅಂಕಗಳ ಉತ್ತಮ ಏರಿಕೆಯೊಂದಿಗೆ ದಿನದ ವಹಿವಾಟನ್ನು 10,830.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಯಥಾವತ್ತಾಗಿ ಕಾಯ್ದುಕೊಂಡಿರುವುದು ಕೂಡ ಭಾರತ ಸೇರಿದಂತೆ ಜಾಗತಿಕ ಶೇರು ಪೇಟೆಗಳಲ್ಲಿ ಇಂದು ಕಂಡುಬಂದಿರುವ ತೇಜಿಗೆ ಕಾರಣವಾಗಿದೆ.
ಇದೀಗ ಸಮಾಜದ ಎಲ್ಲ ವರ್ಗಗಳ, ಉದ್ಯಮಗಳ ಕಣ್ಣು ನಾಳೆ ಶುಕ್ರವಾರ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಮಂಡಿಸಲಿರುವ 2019ರ ಮಧ್ಯಾವಧಿ ಬಜೆಟ್ ಮೇಲೆ ನೆಟ್ಟಿದೆ.
ಇಂದಿನ ಭರಾಟೆಯ ಶೇರು ಖರೀದಿಯಲ್ಲಿ ಎಕ್ಸಿಸ್ ಬ್ಯಾಂಕ್, ಟಾಟಾ ಮೋಟರ್, ಇನ್‌ಫೋಸಿಸ್, ಆರ್‌ಐಎಲ್, ಕೋಟಕ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಬಜಾಜ್ ಆಟೋ, ಎಸ್‌ಬಿಐ, ಇಂಡಸ್ ಇಂಡ್ ಬ್ಯಾಂಕ್, ಸನ್ ಫಾರ್ಮಾ, ಟಿಸಿಎಸ್ ಮತ್ತು ಎಚ್‌ಯುಎಲ್ ಶೇರುಗಳು ಶೇ.4.64ರಷ್ಟು ಏರಿ ಟಾಪ್ ಗೇನರ್ ಎನಿಸಿಕೊಂಡವು.
ಟಾಪ್ ಲೂಸರ್‌ಗಳಾಗಿ ಕೋಲ್ ಇಂಡಿಯಾ, ಐಸಿಐಸಿಐ ಬ್ಯಾಂಕ್ , ಬಜಾಜ್ ಫಿನಾನ್ಸ್, ಎಚ್‌ಸಿಎಲ್ ಟೆಕ್ ಮತ್ತು ಎಸ್ ಬ್ಯಾಂಕ್ ಶೇರುಗಳು ಶೇ.2.56ರ ಕುಸಿತಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,703 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,421 ಶೇರುಗಳು ಮುನ್ನಡೆ ಸಾಧಿಸಿದವು; 1,143 ಶೇರುಗಳು ಹಿನ್ನಡೆಗೆ ಗುರಿಯಾದವು; 139 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.