Advertisement
ಬಜೆಟನ್ನು ಕೋಟಿ ಕೋಟಿ ರೂ.ಗಳ ಲೆಕ್ಕಚಾರದಲ್ಲಿ, ಅನುದಾನದ ರೂಪದಲ್ಲಿ ನೋಡುತ್ತಾ, ತೂಗುತ್ತಾ ಹೋಗುವುದು ಮುಂದೊಂದು ದಿನದ ಅಪಾಯದ ಸೂಚನೆಯೂ ಆಗಿದೆಯೆಂಬುದನ್ನು ಮನಗಾಣಬೇಕಾಗಿದೆ. ಅಪಾಯವೆಂದರೆ ಮುಗಿದು ಹೋಗುವ ಪ್ರಾಕೃತಿಕ ಸಂಪತ್ತಿನೊಂದಿಗೆ ಉಂಟಾಗುವ ಪಾರಿಸಾರಿಕ ಅಸಮತೋಲನದೊಂದಿಗೆ ಕೌಟುಂಬಿಕ, ಸಾಮಾಜಿಕ ಸವಾಲುಗಳು ದೇಶವನ್ನು ದುರ್ಬಲಗೊಳಿಸೀತು. ಈ ಕಾರಣದಿಂದಲೇ ಶಿಕ್ಷಣ ಉಳಿದೆಲ್ಲ ಅಭಿವೃದ್ಧಿಗೆ, ವಿಕಾಸಕ್ಕೆ ದಿಕ್ಕು ತೋರುವ, ಅಡಿಗಲ್ಲು ಆಗುವ ವಿಚಾರ. ಇಲ್ಲಿ ಶಿಕ್ಷಣ ವೆಂದರೆ ಪರಿಣಾಮವೇ ಹೊರತು ಪರಿಮಾಣವಲ್ಲ.
ಇನ್ನೊಂದು ವಿಷಯವೇನೆಂದರೆ ಪಬ್ಲಿಕ್ ಶಾಲೆಗಳು, ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಹಾಗೂ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗಗಳು ಈ ಬಗ್ಗೆ ಘೋಷಿಸಿದ ಹಣ ಮತ್ತು ಯೋಜನೆಗಳು. ಜೊತೆಗೆ ಮಾಧ್ಯಮದ ವಿಚಾರ ಬಂದಾಗ ಇನ್ನೂ ಮಾತೃಭಾಷೆ, ಕನ್ನಡ ಮಾಧ್ಯಮ, ಭಾಷೆ ಕಲಿಕೆ, ಕಲಿಕೆಯ ಗುಣಮಟ್ಟ ಎಂಬುವುದಕ್ಕಿಂತಲೂ ಶಿಕ್ಷಣ ಸುಧಾರಣೆ ಎನ್ನುವುದು ಆಂಗ್ಲ ನೆಲೆಯ ವ್ಯಾಪಾರಿ ಚಿಂತನೆಗಳಲ್ಲೇ ಶಿಕ್ಷಣ ಸುಧಾರಣೆ ಕಳೆದು ಹೋಗುತ್ತದೆ.
Related Articles
Advertisement
ಭಾಷಿಕ ನೆಲೆಯಲ್ಲಿ “ಕನ್ನಡ ಶಾಲೆಗಳು’ ಎಂಬ ಧ್ವನಿ ಬಲವಾಗಬೇಕು. ಸರಕಾರಿ, ಅನುದಾನಿತ ಖಾಸಗಿ, ಅನುದಾನ ರಹಿತ ಖಾಸಗಿ ಕನ್ನಡ ಶಾಲೆಗಳು ಎಂಬ ಭಿನ್ನತೆ ಕಾಣಬಾರದು. ಒಂದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾಧ್ಯಮ ಅಥವಾ ರಾಜ್ಯ ಭಾಷೆಯನ್ನು ಹೊರತು ಪಡಿಸಿ ಇನ್ನೊಂದು ಮಾಧ್ಯಮದ ಶಿಕ್ಷಣ ನೀಡಲಾಗುವುದೆಂದರೆ ಅದು ಅಭಿವೃದ್ಧಿ ಆಗುವುದು ಹೇಗೆ? ಸಂಖ್ಯಾತ್ಮಕ ದೃಷ್ಟಿಯಲ್ಲಿ ಶಾಲೆಗಳನ್ನು ಹೆಚ್ಚಿಸುವುದು ಬೇಡಿಕೆಯನ್ನು ಪೂರೈಸಿದಂತಾಗುತ್ತದೆಯೇ ಹೊರತು ಶಿಕ್ಷಣದ ನೀತಿಯಾ ಗುವುದಿಲ್ಲ. ಇರುವ ಶಾಲೆಗಳಲ್ಲಿ ಸಂಖ್ಯಾತ್ಮಕವಾಗಿ ತರಗತಿವಾರು ಶಿಕ್ಷಕರ ಲೆಕ್ಕಾಚಾರ ಬರಬೇಕು. ಶಿಕ್ಷಕರು ಶಾಲೆಯಲ್ಲೇ ಇದ್ದು ಮಕ್ಕಳಿಗೆ ಲಭ್ಯವಾಗುವಂತಾಗಬೇಕು.
ಉತ್ತಮವಾಗಿ ಭಾಷೆಯನ್ನು ಕಲಿಯುವ ಹಾಗೂ ಕಲಿಸುವ ಚಟುವಟಿಕೆಗಳು, ಬೋಧನಾ ವಿಧಾನ (ಮಾಧ್ಯಮದ ಸಂಗತಿಯಲ್ಲ) ಹಾಗೂ ಇತರ ವಿಷಯಗಳನ್ನೂ ಕಲಿಯುವಂತೆ ಮಾಡುವ “ಮಗು ಸ್ನೇಹಿ’ ಕಲಿಕಾ ವಾತಾವರಣವಿರಬೇಕು. ಮಕ್ಕಳ ಬಜೆಟ್ ಮಂಡಿಸಿದ ವಿಚಾರ ವೇನೋ ಒಳ್ಳೆಯದೆ. ಆದರೆ ಅದು ಒಳಗಿನ ತಿರುಳಿನ ಸಂಗತಿಗಳಿಗೆ ಇಳಿಯದೇ ಹೋದರೆ ಬಜೆಟ್ ಹುರುಳಿಲ್ಲದ, ಕೇವಲ ಆವರಣದ ಸಂಗತಿಯಾಗಿಯೇ ಉಳಿಯುತ್ತದೆ.
ಬಹಳ ಮುಖ್ಯವಾಗಿ ಬಜೆಟ್‌ನಲ್ಲಿ ಉಲ್ಲೇಖೀಸಿದ ಒಂದು ಸಂಗತಿಯೆಂದರೆ “ನೋ ಬ್ಯಾಗ್ ಡೇ’ (ಸಂಭ್ರಮದ ಶನಿವಾರ). ತಿಂಗಳಿನಲ್ಲಿ ಎರಡು ಶನಿವಾರ ಇನ್ನು ಮುಂದೆ ಮಕ್ಕಳು ಶಾಲೆಗೆ ಬ್ಯಾಗ್ ಕೊಂಡುಹೋಗಬೇಕಾದ್ದಿಲ್ಲ. ಆ ದಿನಗಳಲ್ಲಿ ಪಾಠದ ಬದಲಾಗಿ ಚಟುವಟಿಕೆಗಳ ಮೂಲಕ ದೇಶದ ಉತ್ತಮ ನಾಗರಿಕರಾಗಲು ಅವಶ್ಯವಿರುವ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಜೊತೆಗೆ ಖಾಸಗಿ ಶಾಲೆಗಳು ಇದನ್ನು ಮಾಡುತ್ತಿದ್ದು ಅದಕ್ಕೆ ಸಮವಾಗಿ ಉತ್ತಮ ಶಿಕ್ಷಣ ನೀಡುವು ದಕ್ಕಾಗಿ ಈ ವ್ಯವಸ್ಥೆಯೆಂದು ಬಿಂಬಿಸಲಾಗಿದೆ. ಹಾಗಿದ್ದರೆ ಈವರೆಗಿನ (ಮುಂದೆಯೂ) ಪಾಠಗಳು ಅದನ್ನು ಪ್ರತಿಬಿಂಬಿಸಲಿಲ್ಲವೆಂದು ಅರ್ಥವೇ? “ಸಂಭ್ರಮದ ಶನಿವಾರ’ ಯೋಜನೆಯು ಶಿಕ್ಷಣದ ಆಶಯ ಉದ್ದೇಶಗಳನ್ನು ಈಡೇರಿಸಲಾಗದ ಪಠ್ಯಕ್ರಮ, ಬೋಧನಾ ಕ್ರಮ, ಪರೀಕ್ಷೆ, ಫಲಿತಾಂಶ ವ್ಯವಸ್ಥೆ ಈಗಿನದ್ದು ಎಂದು ಹೇಳಿದಂತವಲ್ಲವೇ? ಒಟ್ಟಾರೆಯಾಗಿ ನೋ ಬ್ಯಾಗ್ ಡೇ ಇನ್ನಷ್ಟು ಅಧ್ವಾನಗಳನ್ನು ಮತ್ತು ಕಲಿಕಾ ಒತ್ತಡವನ್ನು ಸೃಷ್ಟಿಸುವ ಅಪಾಯವೇ ಹೆಚ್ಚು. ಕಲಿಕಾ ಹೊರೆಯನ್ನು ಕಡಿಮೆಗೊಳಿಸಲಾರದೆ, ನಿತ್ಯದ ಪಾಠಾವಧಿಯಲ್ಲಿ ಮತ್ತು ಪಾಠದೊಂದಿಗೆ ಖುಷಿ ನೀಡುವ ಕಲಿಕಾ ವ್ಯವಸ್ಥೆ ಮತ್ತು ಉತ್ತಮ ನಾಗರಿಕರಾಗಲು ಅವಶ್ಯವಿರುವ ಅಂಶಗಳಲ್ಲಿ ಅರಿವು, ಜಾಗೃತಿ ಮೂಡಿಸುವ ಶಿಕ್ಷಣ ವ್ಯವಸ್ಥೆ ಜಾರಿಗೆ ತರದೇ ಹೋದಲ್ಲಿ “ಸಂಭ್ರಮದ ಶನಿವಾರ’ ಇಡೀ ತಿಂಗಳ ಕಲಿಕಾ ಸಂಭ್ರಮವನ್ನು ಕಸಿದುಕೊಂಡೀತು. ಹಾಗಾಗಿ ಕೋಟಿ ಕೋಟಿ ರೂ.ಗಳ ಅನುದಾನದ ಮೌಲ್ಯಕ್ಕಿಂತಲೂ ಅಧಿಕ ಮೌಲ್ಯದ ಗುಣಾತ್ಮಕ ಶಿಕ್ಷಣ ವ್ಯವಸ್ಥೆಯ ಬಗೆಗಿನ ಚಿಂತನೆಗಳ ಬಜೆಟ್ ರೂಪುಗೊಳ್ಳಬೇಕು. ಇಲ್ಲವಾದರೆ ಶಿಕ್ಷಣ ಸುಧಾರಣೆ ಘೋಷಣೆಗಳಲ್ಲೆ ಕಳೆದುಹೋಗಿ ಎಂದಿನಂತೆಯೇ ಅಂಕ, ಫಸ್ಟ್-ಸೆಕೆಂಡ್, ಹೈಯೆಸ್ಟ್, ಸ್ಪರ್ಧೆ, ಬಹುಮಾನ ಇತ್ಯಾದಿಗಳ ಸುತ್ತಲೇ ಗಿರಕಿ ಹೊಡೆಯುವ ಗುಣಮಟ್ಟದ ದಾಖಲೆ ಅಷ್ಟೆ.
– ರಾಮಕೃಷ್ಣ ಭಟ್ ಚೊಕ್ಕಾಡಿ