ಮುಂಬಯಿ : ಕೇಂದ್ರ ಇಂದು ಲೋಕಸಭೆಯಲ್ಲಿ ಮಂಡಿಸಿರುವ ರೈತ, ಗ್ರಾಹಕ, ಮಧ್ಯಮ ವರ್ಗ ಸ್ನೇಹಿ ಮದ್ಯಾವಧಿ ಬಜೆಟ್ ದೇಶದ ಆರ್ಥಿಕತೆಗೆ ವಿಶೇಷ boost ನೀಡುವುದೆನ್ನುವ ಲೆಕ್ಕಾಚಾರದಲ್ಲಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟನ್ನು 212.74 ಅಂಕಗಳ ಮುನ್ನಡೆಯೊಂದಿಗೆ 36,221.32 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ದಿನಪೂರ್ತಿ ಏರಿಳಿತಗಳನ್ನೇ ಕಾಣುತ್ತಾ ಸಾಗಿದ ಸೆನ್ಸೆಕ್ಸ್, ಒಂದು ಹಂತದಲ್ಲಿ 500ಕ್ಕೂ ಅಧಿಕ ಅಂಕಗಳ ಮುನ್ನಡೆಯನ್ನು ಕಂಡು 36,778.14 ಅಂಕಗಳ ಮಟ್ಟವನ್ನೇರಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 62.70 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,893.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ತಿಂಗಳ ಸಂಬಳ ಪಡೆಯುವ ಸುಮಾರು 3 ಕೋಟಿ ಮಧ್ಯಮ ವರ್ಗದ ಜನರ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೇರಿಸಿರುವ ಕೇಂದ್ರ ಬಜೆಟ್ ನಿಂದ ಗ್ರಾಹಕ ಮಾರುಕಟ್ಟೆಗೆ ಭಾರೀ ಲಾಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಇಂದು ಎಫ್ಎಂಸಿಜಿ ರಂಗದ ಶೇರುಗಳು ಉತ್ತಮ ಏರಿಕೆ ದಾಖಲಿಸಿದವು.
ಸರಕಾರ ತೆರಿಗೆ ಪಾವತಿದಾರರ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಈಗಿನ 40,000 ರೂ.ಗಳಿಂದ 50,000 ರೂ.ಗೆ ಏರಿಸಿರುವುದು ಇನ್ನೊಂದು ಲಾಭವಾಗಿ ಕಂಡು ಬಂತು.
ಇಂದಿನ ವಹಿವಾಟಿನಲ್ಲಿ ಹೀರೋ ಮೋಟೋ ಕಾರ್ಪ್, ಮಾರುತಿ, ಎಚ್ ಸಿ ಎಲ್ ಟೆಕ್, ಏಶ್ಯನ್ ಪೇಂಟ್, ಬಜಾಜ್ ಆಟೋ, ಬಜಾಜ್ ಫಿನಾನ್ಸ್, ಎಚ್ ಡಿ ಎಫ್ ಸಿ, ಆರ್‌ಐಎಲ್ ಶೇರುಗಳು ಶೇ.7.48ರಷ್ಟು ಏರಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,677 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,197 ಶೇರುಗಳು ಮುನ್ನಡೆ ಸಾಧಿಸಿದವು; 1,340 ಶೇರುಗಳು ಹಿನ್ನಡೆಗೆ ಗುರಿಯಾದವು; 140 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.