ಹೊಸದಿಲ್ಲಿ: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಮೂಲ ಸೌಕರ್ಯಕ್ಕೆ ಭಾರೀ ಪ್ರಮಾಣದ ಒತ್ತು ನೀಡಿರುವ ಕೇಂದ್ರ ಸರ್ಕಾರ ಈ ಬಾರಿ 11,11,111 ಕೋಟಿ ರೂ. ಮೀಸಲಿರಿಸಲಿದೆ. ಅಂದರೆ ಭಾರತದ ಒಟ್ಟು ಜಿಡಿಪಿಯ ಶೇ.3.4ರಷ್ಟು ಹಣವನ್ನು ಮೂಲಸೌಕರ್ಯಕ್ಕೆ ಒದಗಿಸಲು ನಿರ್ಧರಿಸಿದೆ. ಈ ಮೂಲಕ ಜನರಿಗೆ ನೇರ ಮತ್ತು ಪರೋಕ್ಷ ಅನುಕೂಲವಾಗಲಿದ್ದು, ಉದ್ಯೋಗಾವಕಾಶ ಹೆಚ್ಚಳವಾಗುವುದಲ್ಲದೆ, ಕೈಯಿಂದ ಕೈಗೆ ಹಣದ ಹರಿವು ಹೆಚ್ಚಾಗಲಿದೆ. ಹೀಗಾಗಿ ಇದು ಆರ್ಥಿಕ ಚಟುವಟಿಕೆಗೆ ಪೂರಕವಾಗುವಂತಹ ಮಹತ್ವಪೂರ್ಣ ಕ್ರಮವಾಗಿದೆ.
ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಅವರು ಮೂಲಸೌಕರ್ಯಕ್ಕೆ ಈ ಬಾರಿ ವಿಶೇಷ ಆದ್ಯತೆ ನೀಡುವಂತೆ ಆರ್ಥಿಕ ಸಮೀಕ್ಷೆಯಲ್ಲೂ ಸಲಹೆ ನೀಡಿದ್ದರು. ಈ ಬಜೆಟ್‌ನಲ್ಲಿ ಅದು ಅನಾವರಣಗೊಂಡಿದೆ. ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮೂಲಸೌಕರ್ಯಕ್ಕೆ 2 ಪಟ್ಟು ಹಣ ಮೀಸಲಿಟ್ಟಿದ್ದು, ವಿಶೇಷ ಆದ್ಯತಾ ವಲಯದ ಪ್ರಗತಿಯಲ್ಲಿ ಭಾರೀ ನಿರೀಕ್ಷೆ ಇಟ್ಟು ಕೊಂಡಿದೆ.
ರಸ್ತೆ, ರೇಲ್ವೆ ಸೇರಿ ವಿವಿಧ ವಲಯಕ್ಕೆ ವಿಶೇಷ ಕೊಡುಗೆ: ಮೋದಿ 3ನೇ ಅವಧಿಯ ಮುಂದಿನ 5 ವರ್ಷಗಳಲ್ಲಿ ರಸ್ತೆ, ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಗಣನೀಯ ಪ್ರಗತಿ ಹಾಗೂ ಆರ್ಥಿಕಾಭಿವೃದ್ಧಿಗೆ ವಿಶೇಷ ಕೊಡುಗೆಯನ್ನು ನಿರೀಕ್ಷಿಸಲಾಗಿದೆ. 2020-21ರಲ್ಲಿ 4.1 ಲಕ್ಷ ಕೋಟಿ ರೂ., 2021-22ರಲ್ಲಿ 5.9 ಲಕ್ಷ ಕೋಟಿ ರೂ., 2022-23ರಲ್ಲಿ 9.5 ಲಕ್ಷ ಕೋಟಿ ನೀಡಿದ್ದರೆ, ಈ ಬಾರಿ ಬರೋಬ್ಬರಿ 11.11 ಲಕ್ಷ ಕೋಟಿ ರೂ. ನೀಡಲಾಗಿದೆ.
ಆದ್ಯತೆ ನೀಡಲು ರಾಜ್ಯ ಸರ್ಕಾರಕ್ಕೆ ಸಲಹೆ: ಭಾರತದ ಆರ್ಥಿಕ ಚೇತರಿಕೆಗೆ ಹಲವು ಕ್ರಮ ಕೈಗೊಳ್ಳಲಾಗುತ್ತಿರುವ ಬೆನ್ನಲ್ಲೇ ಅದಕ್ಕೆ ಪೂಕರವಾಗಿ ಮೂಲಸೌಕರ್ಯಗಳ ಹೆಚ್ಚಳಕ್ಕೂ ಆದ್ಯತೆ ನೀಡಿದೆ. ಸರಕು ಸಾಗಣೆ, ವಹಿವಾಟು ಉತ್ತೇಜನಕ್ಕೆ ರಸ್ತೆ, ರೈಲ್ವೆಗಳಿಗೆ ಬಲ ತುಂಬಲು ಭಾರೀ ಪ್ರಮಾಣದ ಹಣ ಮೀಸಲಿರಿಸಿದೆ. ಅಲ್ಲದೇ ರಾಜ್ಯ ಸರ್ಕಾರಗಳು ಸಹ ಮೂಲಸೌಕರ್ಯ ಕಲ್ಪಿಸಲು ತಮ್ಮ ಶಕಾöನುಸಾರ ವಿಶೇಷ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದೆ.
ಖಾಸಗಿ ಸಹಭಾಗಿತ್ವಕ್ಕೂ ಅವಕಾಶ: ಕೇಂದ್ರ ಸರ್ಕಾರದ ಜತೆ ಮೂಲಸೌಕರ್ಯ ಕ್ಷೇತ್ರದಲ್ಲಿ ಖಾಸಗಿಯವರೂ ಕೈಜೋಡಿಸಲು ಉತ್ತೇಜಿಸಲಾಗುತ್ತಿದೆ. ಇದಕ್ಕಾಗಿ ನಿಯಮಗಳನ್ನು ಸರಳೀಕರಿಸಲಾಗಿದೆ. ಮಾರುಕಟ್ಟೆ ಆಧಾರಿತ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ರಸ್ತೆ, ರೈಲ್ವೆ ಕ್ಷೇತ್ರದಲ್ಲಿ ಅಗಾಧ ಬದಲಾವಣೆ ಜತೆಗೆ ತ್ವರಿತ ಸಂಪರ್ಕ ಸಾಧನದಿಂದ ಆರ್ಥಿಕ ಚೇತರಿಕೆಗೆ ವಿಶೇಷ ಕೊಡುಗೆ ದೊರೆಯುವ ನಿರೀಕ್ಷೆ ಇಟ್ಟುಕೊಂಡಿದೆ.
ರಾಜ್ಯಗಳಿಗೆ 1.5 ಲಕ್ಷ ಕೋಟಿ ದೀರ್ಘಾವಧಿ ಉಚಿತ ಸಾಲ: ಮೂಲಸೌಕರ್ಯಕ್ಕೆ ಹಣಕಾಸು ಕೊರತೆಯಾಗದಂತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ದೀರ್ಘಾವಧಿಯ ಉಚಿತ ಸಾಲ ನೀಡಲು ನಿರ್ಧರಿಸಿದೆ. ಇದಕ್ಕಾಗಿ 1.5 ಲಕ್ಷ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ರಾಜ್ಯ ಸರ್ಕಾರಗಳು ದೀರ್ಘಾವಧಿ ಸಾಲ ಪಡೆದು ಆಯಾ ರಾಜ್ಯಗಳಲ್ಲಿ ಮೂಲಸೌಕರ್ಯಕ್ಕೆ ಈ ಹಣ ಬಳಸಿಕೊಳ್ಳಬಹುದು. ಪ್ರಮುಖವಾಗಿ ರಸ್ತೆ, ರೈಲ್ವೆ ಕಾಮಗಾರಿಗಳಿಗೆ ಈ ಹಣ ಬಳಸುವಂತೆ ಸೂಚಿಸಲಾಗಿದೆ.