Advertisement

Budget 2024; ಮಹಿಳಾ ಕಲ್ಯಾಣಕ್ಕೆ 3 ಲಕ್ಷ ಕೋಟಿ ರೂ!

09:15 PM Jul 23, 2024 | Team Udayavani |

ಹೊಸದಿಲ್ಲಿ: ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಒಳಗೊಳ್ಳುವಿಕೆಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕಲ್ಯಾಣ ಯೋಜನೆಗಳಿಗಾಗಿ ಕೇಂದ್ರ ಸರಕಾರ ತನ್ನ 2024-25ನೇ ಸಾಲಿನ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಲ್ಲಿ 3 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಮಹಿಳಾ ಪರ ಯೋಜನೆಗಳಿಗೆ ವಿನಿಯೋಗಿಸಲು ನಿರ್ಧರಿಸಿದೆ. ಮಹಿಳಾ ಕೇಂದ್ರಿತ ಅಭಿವೃದ್ಧಿ ಹಾಗೂ ದೇಶದ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರವನ್ನು ಮತ್ತಷ್ಟು ಹೆಚ್ಚಿಸಲು ಕೆಲವು ಮಹತ್ವದ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಭಾಷಣದಲ್ಲಿ ಪ್ರಸ್ತಾವಿಸಿದ್ದಾರೆ. ಉದ್ಯೋಗ ಕ್ಷೇತ್ರದತ್ತ ಹೆಣ್ಣು ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಹತ್ತರ ಉಪಕ್ರಮಗಳನ್ನು ಘೋಷಿಸಿರುವ ಅವರು, ಜತೆಯಲ್ಲಿ ಮಹಿಳೆಯರ ಕೌಶಲ್ಯಾಭಿವೃದ್ಧಿ, ಆರೋಗ್ಯ, ಸುರಕ್ಷೆಗೂ ಹೆಚ್ಚಿನ ಒತ್ತು ನೀಡಿದ್ದಾರೆ.

Advertisement

ಸದ್ಯ ಜಾರಿಯಲ್ಲಿರುವ ಮಹಿಳಾ ಹಾಸ್ಟೆಲ್‌ಗ‌ಳು, ಸ್ವಾಧಾರ್‌ ಗೃಹ ಮತ್ತು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗಳಂತಹ  ಸಾಮರ್ಥ್ಯ ಉಪ ಯೋಜನೆಗೆ ಒಟ್ಟಾರೆ 2,516 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

– ಮಹಿಳಾ ಉದ್ಯೋಗಿಗಳ ಕೌಶಲವನ್ನು ಹೆಚ್ಚಿಸಲು ವಿಶೇಷ ಕೌಶಲ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

– ದೇಶದ ಸರ್ವಾಂಗೀಣ, ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಅಭಿವೃದ್ಧಿಯ ಕಲ್ಪನೆಯೊಂದಿಗೆ ಸರಕಾರ ರೈತರು, ಯುವಕರು, ಮಹಿಳೆಯರು ಮತ್ತು ಬಡವರ ಸಹಿತ ದೇಶದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದ್ದು ಆ ಮೂಲಕ ಸಾಮಾಜಿಕ ನ್ಯಾಯದ ಗುರಿಯನ್ನು ಸಾಧಿಸಲು ಬದ್ಧವಾಗಿದೆ.

ಮಹಿಳಾ ಉದ್ಯೋಗಿಗಳಿಗಾಗಿ ಹಾಸ್ಟೆಲ್‌, ಶಿಶುವಿಹಾರ ಸ್ಥಾಪನೆ

Advertisement

ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುವಂತಾಗಲು ಉದ್ಯಮಗಳ ಸಹಭಾಗಿತ್ವದಲ್ಲಿ ಮಹಿಳಾ ಹಾಸ್ಟೆಲ್‌ಗ‌ಳನ್ನು ಮತ್ತು ತಾಯಂದಿರ ನೆರವಿಗಾಗಿ ಶಿಶುವಿಹಾರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಉದ್ಯಮಗಳ ಸಹಭಾಗಿತ್ವದಿಂದ ಮಹಿಳೆಯರಿಗೆ ನಿರ್ದಿಷ್ಟ ಕೌಶಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಮಾರುಕಟ್ಟೆಯನ್ನು ಒದಗಿಸಿಕೊಡಲು ಇದು ನೆರವಾಗಲಿದೆ.

ಮಹಿಳೆ, ಮಕ್ಕಳ ಇಲಾಖೆಗೆ 26 ಸಾವಿರ ಕೋಟಿ

2024-25ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 26,092ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು ಶೇ. 2.5ರಷ್ಟು ಅಧಿಕವಾಗಿದೆ. 2023-24ನೇ ಸಾಲಿನಲ್ಲಿ ಇಲಾಖೆಗೆ 25,448 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.  ಇಲಾಖೆಗೆ ಒಟ್ಟಾರೆ ಮೀಸಲಿಡಲಾಗಿರುವ ಮೊತ್ತದಲ್ಲಿ ಗರಿಷ್ಠ ಅನುದಾನ ಅಂದರೆ 25,848 ಕೋ. ರೂ.ಗಳನ್ನು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಮೀಸಲಿರಿಸಲಾಗಿದೆ.

ಮಕ್ಕಳ ರಕ್ಷಣೆ, ಆರೋಗ್ಯಗಾಗಿ 1,472 ಕೋಟಿ ರೂ. ಮೀಸಲು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವದ ಯೋಜನೆಗಳಾದ ಸಕ್ಷಮ ಅಂಗನವಾಡಿ ಮತ್ತು ಮಿಷನ್‌ 2.0, ಮಿಷನ್‌ ವಾತ್ಸಲ್ಯ ಮತ್ತು ಮಿಷನ್‌ ಶಕ್ತಿ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ತೆಗೆದಿರಿಸಲಾಗಿದೆ. ಆ ಮೂಲಕ ಮಹಿಳೆಯರ ಸಶಕ್ತೀಕರಣ, ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆಯನ್ನು ನೀಗಿಸುವ ಸಕ್ಷಮ್‌ ಅಂಗನವಾಡಿ ಮತ್ತು ಪೋಷಣ್‌ 2.0 ಯೋಜನೆಗೆ 21,200 ಕೋಟಿ ರೂ., ಮಕ್ಕಳ ರಕ್ಷಣೆ, ಆರೈಕೆ, ಅಭಿವೃದ್ಧಿಗಾಗಿ 1,472 ಕೋಟಿ ರೂ., ಸಂಭಾಲ್‌ ಮತ್ತು ಸಾಮರ್ಥ್ಯ ಉಪಯೋಜನೆಗಳಿಗಾಗಿ 3,145 ಕೋಟಿ ರೂ. ಮೀಸಲಿಡಲಾಗಿದೆ. ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಮಹಿಳೆಯರ ಸುರಕ್ಷತೆಗಾಗಿನ ಒನ್‌ ಸ್ಟಾಪ್‌ ಸೆಂಟರ್‌ ಒಳಗೊಂಡ ಸಂಭಾಲ್‌ ಉಪಯೋಜನೆಗೆ 629 ಕೋಟಿ ರೂ. ವಿನಿಯೋಗಿಸಲು ನಿರ್ಧರಿಸಲಾಗಿದೆ.

– ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ತರಬೇತಿ ನೀಡುವ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿಗಾಗಿನ ರಾಷ್ಟ್ರೀಯ ಸಂಸ್ಥೆಗೆ 88.87 ಕೋಟಿ ರೂ. ಹಾಗೂ ಮಕ್ಕಳ ದತ್ತು ವಿಷಯಗಳಿಗೆ ಸಂಬಂಧಿಸಿದ ಕೇಂದ್ರೀಯ ದತ್ತು ಸಂಪನ್ಮೂಲ ಸಂಸ್ಥೆಗೆ 11.40 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

– ಯುನಿಸೆಫ್ಗೆ ದೇಣಿಗೆ ನೀಡಲು 5.60 ಕೋಟಿ ರೂ., ನಿರ್ಭಯಾ ನಿಧಿಗೆ 500 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಮಕ್ಕಳಿಗಾಗಿ ಕೇಂದ್ರ ಸರ್ಕಾರ “ವಾತ್ಸಲ್ಯ’ಮಯಿ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ದಾಖಲೆಯ ಏಳನೇ ಬಜೆಟ್‌ ಭಾಷಣದಲ್ಲಿ ಮಕ್ಕಳಿಗಾಗಿ ಉಳಿತಾಯ ಯೋಜನೆಯೊಂದನ್ನು ಘೋಷಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಹೆತ್ತವರು ಯಾ ಪೋಷಕರು ತಮ್ಮ ಪಿಂಚಣಿ ಮೊತ್ತದಲ್ಲಿ ಒಂದಿಷ್ಟು ಹಣವನ್ನು ಮಕ್ಕಳ ಹೆಸರಿನಲ್ಲಿ ಉಳಿತಾಯ ಮಾಡುವ ಯೋಜನೆ ಇದಾಗಿದ್ದು, ಮಕ್ಕಳು ಪ್ರಾಪ್ತ ವಯಸ್ಕರಾದ ಬಳಿಕ ಇದು ಸಾಮಾನ್ಯ ಪಿಂಚಣಿ ಖಾತೆಯಾಗಿ ಮಾರ್ಪಡಲಿದೆ. ಇದರಿಂದ ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರು ಒಂದಿಷ್ಟು ಹೂಡಿಕೆ ಮಾಡಲು ಸಾಧ್ಯವಾಗಲಿದೆ.

ಏನಿದು ಯೋಜನೆ?

ಅಪ್ರಾಪ್ತ ವಯಸ್ಕ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಹೆತ್ತವರು ಮತ್ತು ಪೋಷಕರು ಕೈಗೊಳ್ಳಬಹುದಾದ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ಮಕ್ಕಳ ಹೆತ್ತವರು ಯಾ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಈ ಉಳಿತಾಯ ಪಾಲಿಸಿಗಳಲ್ಲಿ ಹಣ ಹೂಡಿಕೆ ಮಾಡಬಹುದಾಗಿದೆ. ಮಕ್ಕಳು ಪ್ರಾಪ್ತ ವಯಸ್ಕರಾದಾಗ ಈ ಯೋಜನೆ ಸಾಮಾನ್ಯ ಎನ್‌ಪಿಎಸ್‌ ಖಾತೆಯಾಗಿ ಪರಿವರ್ತನೆಗೊಳ್ಳಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಹೆತ್ತವರು ತಮ್ಮ ಪಿಂಚಣಿ ಯೋಜನೆಯ ಒಂದಿಷ್ಟು ಮೊತ್ತವನ್ನು ಮಕ್ಕಳಿಗಾಗಿ ಉಳಿತಾಯ ಮಾಡುವ ವಿನೂತನ ಯೋಜನೆ ಇದಾಗಿದೆ. ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಎನ್‌ಪಿಎಸ್‌ ವಾತ್ಸಲ್ಯ ಖಾತೆಯನ್ನು ತೆರೆಯಬಹುದಾಗಿದೆ. ಪ್ರತೀ ತಿಂಗಳು ಅಥವಾ ನಿರ್ದಿಷ್ಟ ಅವಧಿಯ ಅಂತರದಲ್ಲಿ ಈ ಖಾತೆಗೆ ಮಕ್ಕಳ ಹೆತ್ತವರು ಹಣವನ್ನು ವರ್ಗಾಯಿಸುವ ಮೂಲಕ ಉಳಿತಾಯ ಮಾಡಬಹುದಾಗಿದೆ. ಎನ್‌ಪಿಎಸ್‌ ವಾತ್ಸಲ್ಯ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಗೆ ತೆರಿಗೆ ವಿನಾಯಿತಿ ಲಭಿಸಲಿದೆಯಲ್ಲದೆ ಸರಕಾರಿ ಉಳಿತಾಯ ಯೋಜನೆ ಇದಾಗಿರುವುದರಿಂದ ಕಡಿಮೆ ಹೂಡಿಕೆಗೆ ಹೆಚ್ಚಿನ ಲಾಭ ಸಿಗುವುದಷ್ಟೇ ಅಲ್ಲದೆ ಹೆಚ್ಚಿನ ಸುರಕ್ಷೆಯೂ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next