Advertisement
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಠೇವಣಿ ಮಿತಿಯನ್ನು 30 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಈವರೆಗೆ ಇದು 15 ಲಕ್ಷ ರೂ.ಗಳಾಗಿತ್ತು. ಅದೇ ರೀತಿ, ಹಿರಿಯ ನಾಗರಿಕರ ಮಾಸಿಕ ಆದಾಯ ಖಾತೆ ಯೋಜನೆಯಲ್ಲಿ ಠೇವಣಿಯ ಗರಿಷ್ಠ ಮಿತಿಯನ್ನು 9 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಒಂದೇ ಖಾತೆಯಿದ್ದರೆ ಈವರೆಗೆ ಗರಿಷ್ಠವೆಂದರೆ 4.5 ಲಕ್ಷ ರೂ. ಠೇವಣಿ ಇಡಬೇಕಾಗಿತ್ತು. ಇನ್ನು ಮುಂದೆ 9 ಲಕ್ಷ ರೂ.ವರೆಗೆ ಠೇವಣಿ ಇಡಬಹುದು. ಇನ್ನು, ಜಂಟಿ ಖಾತೆಯಿದ್ದವರಿಗೆ ಈವರೆಗೆ 9 ಲಕ್ಷ ರೂ.ವರೆಗೆ ಠೇವಣಿಯಿಡುವ ಅವಕಾಶವಿತ್ತು. ಅದನ್ನು ಈಗ 15 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಈ ಯೋಜನೆಗಳಿಗೆ ಯಾವುದೇ ಕ್ರೆಡಿಟ್ ರಿಸ್ಕ್ ಇರುವುದಿಲ್ಲ.
ಮಹಿಳೆಯರಿಗೆಂದೇ ಅತ್ಯುತ್ತಮ ಉಳಿತಾಯ ಯೋಜನೆಯೊಂದನ್ನು ಸರ್ಕಾರ ಪರಿಚಯಿಸಿದೆ. “ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್’ (ಮಹಿಳಾ ಸಮ್ಮಾನ್ ಉಳಿತಾಯ ಪತ್ರ) ಎಂಬ ಹೆಸರಿನ ಈ ಯೋಜನೆಯಡಿ ಹೆಣ್ಣು ಮಗು ಅಥವಾ ಮಹಿಳೆಯರ ಹೆಸರಲ್ಲಿ ಗರಿಷ್ಠ 2 ಲಕ್ಷ ರೂ.ಗಳನ್ನು 2 ವರ್ಷಗಳವರೆಗೆ ಠೇವಣಿ ಇಡಬಹುದು. ವಿಶೇಷವೆಂದರೆ, ಈ ಮೊತ್ತಕ್ಕೆ ಶೇ.7.5ರಷ್ಟು ಬಡ್ಡಿ ಸಿಗಲಿದೆ. ಇದು ಏಕಕಾಲಿಕ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಭಾಗಶಃ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ 25,448.75 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅನುದಾನದಲ್ಲಿ 267 ಕೋಟಿ ರೂ. ಹೆಚ್ಚಳವಾಗಿದೆ.