ಮುಂಬಯಿ: ಆತ್ಮ ನಿರ್ಭಯ ಭಾರತವನ್ನು ಪ್ರೋತ್ಸಾಹಿಸುವಂತಹ ಉತ್ತಮ ಬಜೆಟ್ ಅನ್ನು ಈ ವರ್ಷ ಕೇಂದ್ರ ಸರಕಾರ ಮಂಡಿಸಿದ್ದು. ಉತ್ತಮ ಪ್ರಗತಿ ದೇಶದ ಬೆಳವಣಿಗೆಗೆ ಪೂರಕವಾಗಿದೆ. ಉದ್ಯಮ ಕ್ಷೇತ್ರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸರಕಾರವು ಅನೇಕ ಯೋಜನೆಗಳನ್ನು ಕೈಗೊಂಡಿದೆ. ಹೊಸ 400 ವಂದೇ ಭಾರತ್ ರೈಲುಗಳ ಆರಂಭದ ಯೋಜನೆ, ಮೇಕ್ ಇನ್ ಇಂಡಿಯಾ ಮೂಲಕ ಉದ್ಯೋಗ ಸೃಷ್ಟಿ, ಆದಾಯ ತೆರಿಗೆ ಯಥಾಸ್ಥಿತಿ, ತೆರಿಗೆ ಪಾವತಿಗೆ ಹೊಸ ವ್ಯವಸ್ಥೆ ಇಂತಹ ಅನೇಕ ಯೋಜನೆಗಳನ್ನು ಒಳಗೊಂಡ ಈ ವರ್ಷ ಹಣಕಾಸು ಸಚಿವರು ಉತ್ತಮ ಬಜೆಟ್ ಅನ್ನು ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಕ್ರಾಂತಿ ಹಾಗೂ ಆತ್ಮ ನಿರ್ಭಯ ಭಾರತವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ತಿಳಿಸಿದ್ದಾರೆ.
ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಫೋರಂ ಆಫ್ ಮುಂಬಯಿ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ ವತಿಯಿಂದ ಜರಗಿದ ಬಜೆಟ್-2022 ವಿಶ್ಲೇಷಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿ, ಫೋರಂ ಆಫ್ ಮುಂಬಯಿ ಬಂಟ್ಸ್ ಚಾರ್ಟೆಡ್ ಅಕೌಂಟೆಂಟ್ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಮಾಜದ ಉದ್ಯಮಿಗಳು ಸಹಿತ ವಿವಿಧ ಕ್ಷೇತ್ರ ಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ಉಪಯೋ ಗವಾಗುತ್ತದೆ. ಇಂದು ಬಂಟ್ಸ್ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಇದ್ದಾರೆ. ಯುವಜನರು ಈ ಕ್ಷೇತ್ರದ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದು,ಇದು ಉತ್ತಮ ಬೆಳವಣಿಗೆ. ಸಮಾಜದ ಅನೇಕ ಸಿಎ ಪದವೀಧರರು ಸ್ಯೋಉದ್ಯೋಗ ಹಾಗೂ ಅನೇಕ ಹೆಸರಾಂತ ಕಂಪೆನಿ ಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ ಸಿ. ಶೆಟ್ಟಿ ಮಾತನಾಡಿ, ಸಮಾಜದ ಯುವಜನರು ಉದ್ದಿಮೆ ಕ್ಷೇತ್ರದಲ್ಲಿ ಆಸಕ್ತಿ ವಹಿಸಬೇಕು. ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ಬಜೆಟ್ ವಿಶ್ಲೇಷಣೆ ಕಾರ್ಯಕ್ರಮವು ಉದ್ಯಮ ರಂಗಕ್ಕೆ ಅತ್ಯಂತ ಉಪಯುಕ್ತ ಕಾರ್ಯಕ್ರಮವಾಗಿದ್ದು, ಸಂಯೋಜಕರನ್ನು ಅಭಿನಂದಿಸುತ್ತೇನೆ ಎಂದರು.
ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಶಿವಾನಂದ ಡಿ. ಶೆಟ್ಟಿ ಮಾತನಾಡಿ, ಬಜೆಟ್ ವಿಶ್ಲೇಷಣೆ ಕಾರ್ಯಕ್ರಮ ಹೊಟೇಲ್ ಉದ್ಯಮಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫೋರಂ ಆಫ್ ಮುಂಬಯಿ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್‌ನ ಅಧ್ಯಕ್ಷ ಸಿಎ ಹರೀಶ್ ಹೆಗ್ಡೆ ಮಾತನಾಡಿ ನಮ್ಮ ಈ ಸಂಸ್ಥೆಯು ಪ್ರತೀವರ್ಷವೂ ಕೇಂದ್ರ ಸರಕಾರದ ಬಜೆಟ್ ಮಂಡನೆ ಬಳಿಕ ಅದರ ವಿಶ್ಲೇಷಣೆ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಸಮಾಜದ ಉದ್ಯಮಿಗಳಿಗೆ ಹಾಗೂ ತೆರಿಗೆ ಪಾವತಿದಾರರಿಗೆ ಪ್ರಯೋಜನಕಾರಿ ಕಾರ್ಯಕ್ರಮವಾಗಿದ್ದು, ಇದಕ್ಕೆ ಬಂಟ್ಸ್ ಸಂಘ ಮುಂಬಯಿ, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಹಾಗೂ ಆಹಾರ್‌ನಂತಹ ಸಂಘಟನೆಗಳು ಸಹಕಾರ ನೀಡುತ್ತ ಬಂದಿದೆ. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂದಿನ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಪ್ರಾರಂಭದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಫೋರಂ ಆಫ್ ಮುಂಬಯಿ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ ಉಪಾಧ್ಯಕ್ಷ ಸಿಎ ವಿಶ್ವನಾಥ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ಡೈರೆಕ್ಟ್ ಟ್ಯಾಕ್ಸ್ ಬಗ್ಗೆ ಸಿಎ ವಿಮಲ್ ಪುಣ್ಮೀಯ, ಇನ್‌ಡೈರೆಕ್ಟ್ ಟ್ಯಾಕ್ಸ್ ಬಗ್ಗೆ ನ್ಯಾಯವಾದಿ ಪ್ರಭಾಕರ್ ಶೆಟ್ಟಿ ಉಪನ್ಯಾಸ ನೀಡಿದರು. ಗಣ್ಯರು ಇವರನ್ನು ಹೂಗುತ್ಛ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಅಶೋಕ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಸುಧೇಶ್ ಶೆಟ್ಟಿ ಮತ್ತಿತರರಿದ್ದರು. ಬಂಟ್ಸ್ ಸಂಘ ಮುಂಬಯಿ ಪದಾಧಿಕಾರಿ ಗಳು, ಇಂಡಿಯನ್ ಬಂಟ್ಸ್ ಚೇಂಬರ್ ಅಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್‌ನ ಪದಾಧಿಕಾರಿಗಳು, ಆಹಾರ್ ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
–ಚಿತ್ರ ವರದಿ: ಸುಭಾಷ್ ಶಿರಿಯಾ