Advertisement

ಬುದ್ಧ ಹುಟ್ಟಿದ ನಾಡು

06:20 PM Apr 27, 2019 | mahesh |

ಭಾರತಕ್ಕೆ ನೇಪಾಳದ ಮಹಾರಾಜರು ಭೇಟಿಯಾದ ಸುದ್ದಿಗಳನ್ನು ಪತ್ರಿಕೆಯಲ್ಲಿ ಓದಿದ್ದೆ. ಅವರು ಧರಿಸುತ್ತಿದ್ದ ಪಾರಂಪರಿಕ ಟೋಪಿಯ ಚಿತ್ರಣ ಮನದಲ್ಲಿ ದಾಖಲಾಗಿತ್ತು. ಅದು ಆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ. ನೇಪಾಳಕ್ಕೆ ಪ್ರವಾಸ ಹೊರಡುವ ದಿನ ಮೊದಲಿಗೆ ನೆನಪಾದುದು ಮಹಾರಾಜರು ಮತ್ತು ಟೋಪಿ! ಈಗ ಮಹಾರಾಜರೂ ಇಲ್ಲ. ಅವರ ಆಳ್ವಿಕೆಯೂ ಇಲ್ಲ !

Advertisement

ನೇಪಾಳ ಹಿಂದೂ ರಾಷ್ಟ್ರ. ನಾಲ್ಕು ವರುಷದ ಹಿಂದಿನ ಭೂಕಂಪದ ದುರಂತವನ್ನು ಭಾರತೀಯ ಪತ್ರಿಕೆಗಳು ವರ್ಣಿಸುತ್ತಿದ್ದಾಗ ಮಧ್ಯೆ ಮಧ್ಯೆ ನುಸುಳುತ್ತಿದ್ದ ಭೌಗೋಳಿಕ ರಚನೆಗಳನ್ನು ಅರಿತು ಕೊಳ್ಳಲು ಯತ್ನಿಸುತ್ತಿದ್ದೆ. ಹತ್ತಿರದ ಬಂಧು ಹಾಗೂ ಪಶುಪತಿನಾಥನ ಅರ್ಚಕರಾದ ಪದ್ಯಾಣ ರಘುರಾಮ ಕಾರಂತರು ಊರಿಗೆ ಬಂದಾಗಲೆಲ್ಲ ಕಾಠ್ಮಂಡುವಿನ ಬದುಕು ಮತ್ತು ಅಲ್ಲಿನ ಧಾರ್ಮಿಕ ನೆಲೆಯನ್ನು ವಿವರಿಸುತ್ತಿದ್ದಾಗ ಕಿವಿ ಜಾಗೃತವಾಗುತ್ತಿತ್ತು.

ಅಂದು ಕಾಠ್ಮಂಡುವಿನಲ್ಲಿ ವಿಮಾನ ಇಳಿದಾಗ ರಾತ್ರಿ ಹತ್ತು ಗಂಟೆ. ಕನಸು ನನಸಾದ ಅನುಭವ. ಮೈನಸ್‌ನತ್ತ ಜಾರುತ್ತಿರುವ ಚಳಿ. ಭಾಗಶಃ ಕಾಠ್ಮಂಡು ಮಲಗಿತ್ತು! ಕೊರೆ ಚಳಿಯನ್ನು ಪಾಠ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ ಓದಿದ ನೆನಪು. ಆದರೆ ಅಂದಿನ, ಆ ವಾರದ ಚಳಿಯಲ್ಲಿ ನಡುಗುತ್ತಿದ್ದಾಗ ನಮ್ಮ ದೇಶವನ್ನು ಕಾಯುವ ಸೈನಿಕರ ಕಷ್ಟ ನೆನಪಾಯಿತು. ಜತೆಗೆ ಸೈನಿಕರನ್ನು, ದೇಶವನ್ನು ಹಳಿಯುವ ನಮ್ಮ ದೇಶದ ವಿಚಿತ್ರ ಮನಸ್ಥಿತಿಗಳು ಸರದಿಯಂತೆ ಮಿಂಚಿ ಮರೆಯಾದುವು.

ನೇಪಾಳದ ಶಕ್ತಿ ಪಶುಪತಿನಾಥ. ಆತ ಭಕ್ತರ ಶಕ್ತಿಯೂ ಹೌದು. ಆತನ ದರ್ಶನಕ್ಕೆ ಬರುವ ಭಕ್ತರದು ಸಮರ್ಪಿತ ಭಕ್ತಿ. ಗಂಟಲ ಮೇಲಿನದ್ದಲ್ಲ! ಚಿಕ್ಕಚಿಕ್ಕ ಮಂದಿರದಂತಿರುವ ಪ್ರಾಚೀನ ರಚನೆಗಳು. ಮಧ್ಯೆ ಪಶುಪತಿನಾಥನ ದೇವಸ್ಥಾನ. ಸನಿಹದಲ್ಲೇ ರುದ್ರಭೂಮಿ. ನಿತ್ಯ ಶವದಹನದ ಕಮಟು ಪರಿಸರ. ಇದು ಶಿವನಿಗೆ ಪ್ರಿಯ. ಶಿವ ಸ್ಥಾಣು ರೂಪಿ. ರುದ್ರಭೂಮಿಯಲ್ಲಿ ಒಂದೈದು ನಿಮಿಷ ನಿಂತರೆ ನಮ್ಮ ಮನಸ್ಸು ಕೂಡ ಸ್ಥಾಣುವಿನತ್ತ ಜಾರುತ್ತದೆ. ಪಶುಪತಿನಾಥನ ದರ್ಶನವು ಪುಳಕದ ಅನುಭವ. ರುದ್ರಭೂಮಿಯ ಶೇಷವನ್ನು ತನ್ನೊಳಗಿಳಿಸಿಕೊಂಡ ಭಾಗಮತಿ ನದಿಯು ಹರಿಯಲು ತ್ರಾಸಪಡುತ್ತಿದ್ದಳು!

ಅಬ್ಟಾ ! ಎಲ್ಲಿಂದ ಬಂದಿದ್ದವೋ ಗೊತ್ತಿಲ್ಲ, ಕೋತಿಗಳ ಸಂಸಾರ ಸಂದೋಹ. ಬೆದರಿಸುವುದೇನು, ಕೈಯಲ್ಲಿರುವ ವಸ್ತುವಿಗೆ ಹಕ್ಕು ಸ್ಥಾಪಿಸುವುದೇನು, ಎಳೆದೊಯ್ಯುವುದೇನು? ಮನುಷ್ಯನ ಎಲ್ಲಾ ವರ್ತನೆಗಳನ್ನು ಅವುಗಳು ರೂಢಿಸಿಕೊಂಡಿವೆ! ಪಶುಪತಿ ದೇವಾಲಯದ ಸನಿಹ ಒಂದರ್ಧ ಗಂಟೆ ಗುಡ್ಡ ಹತ್ತಿದರೆ ಗುಹೇಶ್ವರಿ (ಗೃಹೇಶ್ವರೀ) ದೇವಾಲಯ. ಇಲ್ಲಿ ಮೂರ್ತಿಗಳಿಲ್ಲ. ಪೀಠಕ್ಕೆ ಪೂಜೆ. ಇಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶ ಎನ್ನುವ ಸೂಚನೆಯನ್ನು ಯಾರೂ ಅತಿಕ್ರಮಿಸುವುದಿಲ್ಲ.

Advertisement

ಪಶುಪತಿ ದೇವಾಲಯದ ಸರಹದ್ದಿನ ಗುಡಿ ಯೊಂದರಲ್ಲಿ ಮಹಿಳಾ ಅರ್ಚಕರನ್ನು ನೋಡಿದಾಗ ಫ‌ಕ್ಕನೆ ನೆನಪಾದುದು ಯಾರಾಗಿರಬಹುದು? ಬೇರಾರೂ ಅಲ್ಲ, ನಮ್ಮ ದೇವರನಾಡಿನ ಮುಖ್ಯ ಮಂತ್ರಿ! ಅಲ್ಲೇ ಪಕ್ಕ ಶಿವಲಿಂಗಗಳ ಸಮುತ್ಛಯವು ಅಕರ್ಷಣೀಯ. ಭಕ್ತರು ಲಿಂಗಗಳ ಮೇಲೆ ನಾಣ್ಯ, ನೋಟುಗಳನ್ನು ಸಮರ್ಪಿಸುತ್ತಿದ್ದಾಗ, ಒಂದೆಡೆ ನಮ್ಮ ಎರಡು ರೂಪಾಯಿ ನಾಣ್ಯ ಇಣುಕಿತು. ಅರೆ… ಸಂದೋಹದಲ್ಲಿ ಭಾರತದವರಾರೋ ಇರಬೇಕೆಂದು ಕಣ್ಣು ಹುಡುಕಿತು!

ನೇಪಾಳ ದರ್ಶನ
ಒಂದು ವಾರದ ಪ್ರಯಾಣ. ಮೂರು ದಿವಸ ಕುಟುಂಬ ವಾಸ. ಮತ್ತೆ ಮೂರು ದಿವಸ ಕ್ಷೇತ್ರಗಳ ಭೇಟಿ. ನೇಪಾಳದಲ್ಲಿ ಪ್ರಸಿದ್ಧ ಎಂದುಕೊಂಡ ಹಲವು ಪ್ರದೇಶಗಳನ್ನು ನೋಡಬೇಕೆಂದರೂ ತಿಂಗಳುಗಳು ಸಾಕಾಗದು. ಎಂದು ಕಾಠ್ಮ‌ಂಡುವಿನ ಕೆಲವೆಡೆ ಕಳುಹಿಸಿಕೊಟ್ಟರು ಆತಿಥೇಯರಾದ ರಾಮ-ಗೀತಾ ಕಾರಂತ ದಂಪತಿ. ಭಾಷೆ ಮತ್ತು ಸಂವಹನ ಸಮಸ್ಯೆ ನೀಗಲು ಜತೆಯಾದಳು ಇವರ ಪುತ್ರಿ ಶಿವಾಂಗಿ. ಒಂದರ್ಥದಲ್ಲಿ ಅವಳು ನೇಪಾಳಿ ಹುಡುಗಿಯೇ! ಅವಳ ಕ್ಷಿಪ್ರ ಸಂವಹನ, ತೀಕ್ಷ್ಣಮತಿತ್ವ ಮತ್ತು ವ್ಯವಹಾರ ಚತುರತೆಗಳಿಂದ ತಂಡಕ್ಕೆ ಪ್ರಯಾಣದ ಬಳಲಿಕೆಯಾಗಲೇ ಇಲ್ಲ.

ಕಾಠ್ಮಂಡು ಸುತ್ತಾಡುತ್ತಿದ್ದಾಗ 2015ರ ಭೂಕಂಪದ ಅವಶೇಷಗಳು ಗೋಚರವಾದುವು. ನೋಡಿ.. ಅದು ಭೀಮ್‌ಸೇನ್‌ ಟವರಿನ ಅವಶೇಷ. ಭೂಕಂಪ ಮಾಡಿದ ಅನಾಹುತ. ನಾಲ್ಕುನೂರಕ್ಕೂ ಮಂದಿ ಮರಣವನ್ನಪ್ಪಿದ್ದರು. ಕಾಠ್ಮಂಡುವಿನ ಪ್ರೇಕ್ಷಣೀಯ ತಾಣವಾಗಿತ್ತು. ಕಾರಿನ ಚಾಲಕ ಕುಮಾರ್‌ ಗಮನ ಸೆಳೆದಾಗ ಅಂದು ನಮ್ಮ ವಾಹಿನಿಗಳು ಬಿತ್ತರಿಸಿದ ಚಿತ್ರಗಳು ಕಣ್ಮುಂದೆ ಹಾದುಹೋದುವು.
ಕಾಠ್ಮಂಡು ಪ್ರವಾಸದ ನೆನಪುಗಳು ರಿಂಗಣಿಸುತ್ತಿ ದ್ದುವು. ವಿಮಾನವು ಮೂವತ್ತೇಳು ಸಾವಿರ ಅಡಿ ಮೇಲೆ ಹಾರುತ್ತಿತ್ತು. ಕೆಳ ನೋಡಿದರೆ ಹತ್ತಿಯನ್ನು ರಾಶಿ ಹಾಕಿದ ಹಾಗೆ ಕಾಣುವ ಮೋಡಗಳ ರಾಶಿಗಳು. ಮನದೊಳಗೆ ಗೂಡುಕಟ್ಟಿದ ಪ್ರವಾಸದ ಗುಂಗಿನಿಂದ ಬೆಂಗಳೂರು ತಲಪಿದ್ದೇ ಗೊತ್ತಾಗಲಿಲ್ಲ. ಪ್ರಯಾಣದ ಸಿಹಿನೆನಪುಗಳು ಆಯಾಸವನ್ನು ಬಗೆಹರಿಸಿದ್ದುವು.

ಅಲ್ಲಿನ ವಾಹನಗಳಲ್ಲಿ ಬುದ್ಧ ಹುಟ್ಟಿದ ನಾಡು ನೇಪಾಳ ಬರಹಗಳು ಅವರ ರಾಷ್ಟ್ರೀಯ ಪರಂಪರೆಯೊಂದರ ಅಭಿಮಾನಕ್ಕೆ ಸಾಕ್ಷಿ ಹೇಳುತ್ತಿತ್ತು. ಇಂತಹ ಅಭಿಮಾನಗಳೇ ಒಂದು ರಾಷ್ಟ್ರವನ್ನು ಭಾವನಾತ್ಮಕವಾಗಿ ಕಟ್ಟಬಲ್ಲವು. ಹಾಗೆ ಕಟ್ಟುವಂತಹ ಮನಸ್ಸು ರೂಪುಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next