Advertisement

ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಭರಪೂರ ಕೊಡುಗೆ

10:10 AM Jan 15, 2020 | Team Udayavani |

ಕೋಟ: ಶಿಕ್ಷಣ ಇಲಾಖೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಬಜೆಟ್‌ನಲ್ಲಿ ಅಧಿಕ ಅನುದಾನ ಮೀಸಲಿರಿಸಲು ಮನವಿ ಮಾಡಲಾಗಿದೆ. ಈ ಬಾರಿ ಬರ ಪರಿಹಾರಕ್ಕೆ ಹೆಚ್ಚಿನ ಹಣ ವಿನಿಯೋಗವಾದ್ದರಿಂದ ಸ್ವಲ್ಪ ಸಮಸ್ಯೆಯಾಗುತ್ತಿದೆ. ಆದರೂ ಇಲಾಖೆಗೆ ಹೆಚ್ಚಿನ ಕೊಡುಗೆ ಸಿಗುವ ಭರವಸೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಸೋಮವಾರ ಕೋಟ ಕಾರಂತ ಕಲಾಭವನದಲ್ಲಿ ಶಿಕ್ಷಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಇಲಾಖೆಗೆ ಸಂಬಂಧಿಸಿದ ಹಲವಾರು ವಿಚಾರಗಳ ಬಗ್ಗೆ ತಿಳಿಸಿದರಲ್ಲದೆ ಮುಂದೆ ಜಾರಿಯಾಗಲಿರುವ ವಿವಿಧ ಯೋಜನೆಗಳ ಕುರಿತು ಸುಳಿವು ನೀಡಿದರು.

ಸಕಾಲ ಮಾದರಿಯ ಸಹಾಯವಾಣಿ
ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, “ಸಕಾಲ’ ಮಾದರಿಯಲ್ಲಿ ವಿಲೇ ಮಾಡುವ ಸಲುವಾಗಿ ಮಾ.31ರೊಳಗೆ ಸಹಾಯವಾಣಿ ಸ್ಥಾಪನೆಯಾಗಲಿದೆ. ಬಜೆಟ್‌ನಲ್ಲಿ ಅಕ್ಷರ ದಾಸೋಹ ಸಿಬಂದಿ ಮತ್ತು ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿಕ್ಷಕಸ್ನೇಹಿ ವರ್ಗಾವಣೆ
ಕಡ್ಡಾಯ ವರ್ಗಾವಣೆಯಿಂದ ಶಿಕ್ಷಕರಿಗೆ ಸಮಸ್ಯೆಯಾಗುತ್ತಿದೆ. ಬಯಸಿದ ಹಾಗೆ ವರ್ಗಾವಣೆ ನಡೆದರೆ ಲವಲವಿಕೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯ. ಹೀಗಾಗಿ ಶಿಕ್ಷಕಸ್ನೇಹಿ ವರ್ಗಾವಣೆ ವ್ಯವಸ್ಥೆ ಶೀಘ್ರ ಜಾರಿಗೊಳಿಸಲಾಗುವುದು ಮತ್ತು ಈಗ ಕಡ್ಡಾಯ ವರ್ಗಾವಣೆಗೊಂಡಿರುವವರಿಗೆ ಜಿಲ್ಲೆಯೊಳಗೆ ಮರುವರ್ಗಾವಣೆ ಕುರಿತು ಚಿಂತನೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

2 ದಿನ ಬ್ಯಾಗ್‌ ರಹಿತ
ವಿದ್ಯಾರ್ಥಿಗಳ ಬ್ಯಾಗ್‌ ಹೊರೆ ಇಳಿಸಬೇಕಾದ ತುರ್ತು ಅಗತ್ಯವಿದೆ. ಹೀಗಾಗಿ ಮುಂದೆ ಪ್ರತೀ ತಿಂಗಳು 2 ಬ್ಯಾಗ್‌ ರಹಿತ ದಿನಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು. ಈ ದಿನಗಳಲ್ಲಿ ಮಕ್ಕಳ ಕೌಶಲಾಭಿವೃದ್ಧಿಗೆ ಅಗತ್ಯವಾದ ತರಬೇತಿಗಳನ್ನು ನೀಡಲಾಗುವುದು ಎಂದರು.

Advertisement

ಕಾರ್ಯಕ್ರಮವನ್ನು ಸಂಘಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ, ಆನಂದ ಸಿ. ಕುಂದರ್‌, ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ, ಪದವಿಪೂರ್ವ ವಿಭಾಗದ ಸಹಾಯಕ ನಿರ್ದೇಶಕ ಮಾರುತಿ ಉಪಸ್ಥಿತರಿದ್ದರು.

ಮಹತ್ವದ ಚರ್ಚೆ
ಮುಖಾಮುಖೀಯಲ್ಲಿ ಜಿಲ್ಲೆಯ 500ಕ್ಕೂ ಹೆಚ್ಚು ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಕರ ಸಂಘದ ಪ್ರಮುಖರು ಭಾಗವಹಿಸಿದ್ದರು. ಎಸ್‌ಡಿಎಂಸಿಗೆ ದಾನಿಗಳು, ಶಿಕ್ಷಣ ತಜ್ಞರನ್ನು ಆಯ್ಕೆ ಮಾಡಬೇಕು, ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಆದ್ಯತೆ ನೀಡಬೇಕು. ಅನುದಾನಿತ ಶಾಲೆಗಳ ಉಳಿವಿಗೂ ಗಮನ ನೀಡಬೇಕು ಮುಂತಾದ ಹಲವಾರು ಬೇಡಿಕೆಗಳನ್ನು ಶಿಕ್ಷಕರು ಮುಂದಿಟ್ಟರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಅಮೃತ ಮಹೋತ್ಸವ ಉದ್ಘಾಟನೆ
ಶಿಕ್ಷಕರೊಂದಿಗೆ ಮುಖಾಮುಖೀಗೆ ಮುನ್ನ ಶಿಕ್ಷಣ ಸಚಿವರು ಮಣೂರು ಪಡುಕರೆ ಸ.ಹಿ.ಪ್ರಾ. ಶಾಲೆಯ ಅಮೃತ ಮಹೋತ್ಸವ ಮತ್ತು ಸಂಯುಕ್ತ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ
ದರು. ಶಾಲೆಯ ನೂತನ ಕಟ್ಟಡ, ಕೊಠಡಿ ಮತ್ತು ಸಭಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಂದಲೇ ಉದ್ಘಾಟಿಸಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next