Advertisement

ಬಿಟಿಡಿಎ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ

12:26 PM Sep 20, 2019 | Team Udayavani |

ಬಾಗಲಕೋಟೆ: ರಾಜ್ಯ ಸರ್ಕಾರದ ನಿಗಮ ಮಂಡಳಿ ಸ್ಥಾನಮಾನ ಹೊಂದಿರುವ ಇಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದೆ. ಅಲ್ಲದೇ ಸಂಘ ಪರಿವಾರದ ಹಿರಿಯ ಮುಖಂಡ ಹಾಗೂ ಜನ ಸಂಘ ಕಾಲದಿಂದಲೂ ಪಕ್ಷದೊಂದಿಗೆ ಇರುವ ನಗರದ ಶಿಂಧೆ ಕುಟುಂಬ, ಇದೇ ಮೊದಲ ಬಾರಿಗೆ ಬಿಟಿಡಿಎ ನೇಮಕಾತಿಯಲ್ಲಿ ಪರಿಗಣಿಸಲು ಮನವಿ ಮಾಡಿದೆ.

Advertisement

ಹೌದು, ನೀರಾವರಿಗಾಗಿ ಇಡೀ ಏಷ್ಯಾದಲ್ಲಿ ಜಿಲ್ಲಾ ಕೇಂದ್ರವೊಂದು ಮುಳುಗಡೆಯಾಗಿರುವ ನಗರದ ಪಟ್ಟಿಯಲ್ಲಿ ಬಾಗಲಕೋಟೆಗೆ 2ನೇ ಸ್ಥಾನವಿದೆ. ಘಟಪ್ರಭಾ ನದಿಗೆ ಹೊಂದಿಕೊಂಡಿರುವ ಈ ನಗರ, ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಛಿದ್ರ ಛಿದ್ರವಾಗಿದೆ. 517 ಮೀಟರ್‌ನಿಂದ 525 ಮೀಟರ್‌ ವರೆಗೆ 11,452 ಕುಟುಂಬದ 58,285 ಜನರು, ಹಳೆಯ ನಗರದಲ್ಲಿನ ಬದುಕು ಕಳೆದುಕೊಂಡು, ನವನಗರದಲ್ಲಿ ಪುನರ್‌ವಸತಿ ಪಡೆಯುತ್ತಿದ್ದಾರೆ.

ಮುಳುಗಡೆ ಕಟ್ಟಡಗಳಿಗೆ ಪರಿಹಾರ, ಸಂತ್ರಸ್ತರಿಗೆ ಪುನರ್‌ವಸತಿ, ಅವರ ಬದುಕು ಪುನರ್‌ ನಿರ್ಮಾಣ ಮಾಡಬೇಕಾದ ಮಹತ್ವದ ಜವಾಬ್ದಾರಿ ಹೊತ್ತ ಬಿಟಿಡಿಎಗೆ ವಾರ್ಷಿಕ 1 ಸಾವಿರ ಕೋಟಿ ವರೆಗೂ ಅನುದಾನ ಬರುತ್ತದೆ. ಹೀಗಾಗಿ ಈ ಸಂಸ್ಥೆಗೆ ನುರಿತ ಹಾಗೂ ಸಂತ್ರಸ್ತರ ಸಂಕಷ್ಟ ಅರಿತು ಕೆಲಸ ಮಾಡುವ ಕ್ರಿಯಾಶೀಲರೇ ಅಧ್ಯಕ್ಷರಾಗಬೇಕು ಎಂಬುದು ಬಹುತೇಕರ ಒತ್ತಾಯ.

ಮೊದಲ ಬಾರಿಗೆ ಬೇಡಿಕೆ ಇಟ್ಟ ಶಿಂಧೆ: ದೇಶದ ನಾಗಪುರ, ಮಂಗಳೂರ ಹೊರತುಪಡಿಸಿದರೆ ಸಂಘ- ಪರಿವಾರ ಹಾಗೂ ಬಿಜೆಪಿಗೆ ಬಹುದೊಡ್ಡ ಗಟ್ಟಿತನ ಇರುವುದು ಬಾಗಲಕೋಟೆ ಯಲ್ಲಿ. ಪರಿವಾರದ ಸ್ವಯಂ ಸೇವಕರ ಸಂಘಟನೆ, ತ್ಯಾಗ, ಸೇವೆಯಿಂದ ಬಿಜೆಪಿಯೂ ಇಲ್ಲಿ ಗಟ್ಟಿಯಾಗಿ ಬೇರೂರಿದೆ. ಜನ ಸಂಘ ಕಾಲದಿಂದಲೂ (1968ರಿಂದ) ಪಕ್ಷ ಸಂಘಟನೆ ಹಾಗೂ ಪರಿವಾರದ ವ್ಯವಸ್ಥೆಯಲ್ಲಿ ದುಡಿಯುತ್ತ ಬಂದಿರುವ ಗುಂಡುರಾವ್‌ ಶಿಂಧೆ ಅವರಿಗೆ ಪಕ್ಷದಲ್ಲಿ ದೊಡ್ಡ ಹೆಸರಿದೆ.

ಸದ್ಯ ಜಿಲ್ಲೆಯಲ್ಲಿ ಸಂಘದ ಹಾಗೂ ಪಕ್ಷದ ಅತ್ಯಂತ ಹಿರಿಯ ಕಾರ್ಯಕರ್ತರು, ಇಂದೂ ಪಕ್ಷದಲ್ಲೇ ಮುಂದುವರೆದವರು ಇವರೊಬ್ಬರೇ. ಹಲವಾರು ಜನರು ಬಂದು- ಹೋದವರಿದ್ದಾರೆ. ಇನ್ನು ಈಚಿನ 20 ವರ್ಷಗಳಿಂದ ಪರಿವಾರ-ಪಕ್ಷ ವ್ಯವಸ್ಥೆಯಲ್ಲಿ ಸಕ್ರಿಯರಾದವರಿದ್ದಾರೆ. ಆದರೆ, 51 ವರ್ಷಗಳಿಂದ ಪಕ್ಷ- ಸಂಘದಲ್ಲಿದ್ದರೂ ಈ ವರೆಗೆ ಯಾವುದೇ ಅಧಿಕಾರದ ಬೇಡಿಕೆ ಇಟ್ಟಿರಲಿಲ್ಲ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಅವರಿಗೂ ಯಾವುದೇ ನೇಮಕಾತಿಯಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಗುಂಡು ಶಿಂಧೆ ಅವರು, ಬಿಟಿಡಿಎ ಅಧ್ಯಕ್ಷ ಸ್ಥಾನ ಕೊಡಿ. ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ಬೇಡಿಕೆ ಇಟ್ಟಿದ್ದಾರೆ.

Advertisement

ಈಚೆಗೆ ನಗರಕ್ಕೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ನಳಿನ್‌ಕುಮಾರ ಕಟೀಲ್‌, ಉಪಮುಖ್ಯಮಂತ್ರಿ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಗೋವಿಂದ ಕಾರಜೋಳರಿಗೆ ಲಿಖೀತ ಬೇಡಿಕೆಯ ಮನವಿ ಕೊಟ್ಟಿದ್ದಾರೆ. ಮುಖ್ಯವಾಗಿ ಬಿಟಿಡಿಎ ನೇಮಕಾತಿ ಡಾ|ವೀರಣ್ಣ ಚರಂತಿಮಠರ ವಿವೇಚನೆ ನಡೆಯಲಿದ್ದು, ಅವರಿಗೂ ಮನವಿ ಕೊಡುವುದಾಗಿ ಹೇಳಿದ್ದಾರೆ.

ಸಂತ್ರಸ್ತರ ಸಮಿತಿಯ ಒಬ್ಬರಾಗಲಿ: ಬಿಟಿಡಿಎ ಇರುವುದೇ ನಗರದ ಸಂತ್ರಸ್ತರಿಗಾಗಿ. ಪರಿಹಾರ ಕೊಡುವುದಷ್ಟೇ ಅಲ್ಲ, ಮೂಲಭೂತ ಸೌಲಭ್ಯ ಕಲ್ಪಿಸಬೇಕು. ನವನಗರ ಯೂನಿಟ್‌-1, ಯೂನಿಟ್‌-2 ನಿರ್ವಹಣೆ ಜತೆಗೆ ನವನಗರ ಯೂನಿಟ್‌-3 ಅಭಿವೃದ್ದಿಪಡಿಸಬೇಕಿದೆ.

ಇಲ್ಲಿ ನಗರದ ಸಂತ್ರಸ್ತರು, ಸಣ್ಣ-ಪುಟ್ಟ ವ್ಯಾಪಾರಸ್ಥ ಆಶಯ-ತ್ಯಾಗ ಪರಿಗಣಿಸಬೇಕು. ಹೀಗಾಗಿ ಹಲವು ವರ್ಷಗಳಿಂದ ಸಂತ್ರಸ್ತರಿಗಾಗಿ ಹೋರಾಟ ನಡೆಸುತ್ತಿರುವ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಸಕ್ರಿಯ ಹೋರಾಟಗಾರರಲ್ಲಿ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಸಮಿತಿಯಡಿ ಹೋರಾಟ ನಡೆಸಿದ ಸಂಗಯ್ಯ ಸರಗಣಾಚಾರಿ, ಸದಾನಂದ ನಾರಾ, ಅಶೋಕ ಲಿಂಬಾವಳಿ ಅವರ ಹೆಸರು ಕೇಳಿ ಬಂದಿವೆ. ಆದರೆ, ಅಶೋಕ ಲಿಂಬಾವಳಿ ಅವರು ಅಧ್ಯಕ್ಷ ಸ್ಥಾನದ ರೇಸ್‌ ನಲ್ಲಿದ್ದಾರೆ ಎನ್ನಲಾಗಿದೆ.

ಚರಂತಿಮಠರ ಕೃಪೆ ಯಾರಿಗೆ?: ಬಿಟಿಡಿಎಗೆ ಶಾಸಕ ಡಾ|ಚರಂತಿಮಠರೇ ಅಧ್ಯಕ್ಷರಾಗಲಿ ಎಂಬ ಮನವಿ ಪಕ್ಷದ ಒಂದು ವೇದಿಕೆಯಲ್ಲಿ ಕೇಳಿ ಬಂದರೆ, ಹಿರಿಯ ಅಥವಾ ಯುವ ಕಾರ್ಯಕರ್ತರಿಗೆ ಅವಕಾಶ ದೊರೆಯಬೇಕು ಎಂಬ ಬೇಡಿಕೆ ಮತ್ತೂಂದೆಡೆ ಇದೆ. ಈ ನಿಟ್ಟಿನಲ್ಲಿ ಗುಂಡು ಶಿಂಧೆ, ಮಾಜಿ ಶಾಸಕ ಪಿ.ಎಚ್‌. ಪೂಜಾರ, ಬಿಟಿಡಿಎ ಮಾಜಿ ಅಧ್ಯಕ್ಷರಾದ ಜಿ.ಎನ್‌. ಪಾಟೀಲ, ಪ್ರಕಾಶ ತಪಶೆಟ್ಟಿ, ಸಿದ್ದಣ್ಣ ಶೆಟ್ಟರ, ರಾಜು ರೇವಣಕರ, ರಾಜು ನಾಯ್ಕರ, ಕುಮಾರ ಯಳ್ಳಿಗುತ್ತಿ ಹೀಗೆ ಹಲವರ ಹೆಸರು ಕೇಳಿ ಬರುತ್ತಿವೆ. ಶಾಸಕ ಡಾ|ಚರಂತಿಮಠರ ಕೃಪೆ ಯಾರ ಮೇಲಿರುತ್ತದೆಯೋ ಅವರೇ ನೂತನ ಅಧ್ಯಕ್ಷರಾಗಲಿದ್ದಾರೆ.

ಹಂಗಾಮಿ ಅಧ್ಯಕ್ಷರಾಗಿ ರಾಕೇಶ್‌ : ಬಿಟಿಡಿಎಗೆ ಆಡಳಿತ ಮಂಡಳಿ ಇಲ್ಲದ ಸಮಯದಲ್ಲಿ ಬಾಗಲಕೋಟೆಯ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಯಾಗಿ ಹಂಗಾಮಿ ಸಭಾಪತಿ ಸ್ಥಾನ ನಿರ್ವಹಿಸುತ್ತಿದ್ದರು. ಆದರೆ, ಈ ಬಾರಿ ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಅಂದಹಾಗೆ ಬಿಟಿಡಿಎಗೆ ಒಂದು ಸಭಾಪತಿ ಸ್ಥಾನ ಹಾಗೂ ಮೂರು ಸದಸ್ಯ ಸ್ಥಾನಗಳಿರುತ್ತವೆ. ಇವುಗಳಿಗೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರ, ನಾಮ ನಿರ್ದೇಶಿತರನ್ನಾಗಿ ನೇಮಕ ಮಾಡುತ್ತದೆ. ಅಧ್ಯಕ್ಷ ಸ್ಥಾನಕ್ಕೆ ಕೆಲವರು ಪೈಪೋಟಿ ನಡೆಸಿದ್ದರೆ, ಸದಸ್ಯ ಸ್ಥಾನಕ್ಕೂ ಹಲವರು ಬೇಡಿಕೆ ಇಟ್ಟಿದ್ದಾರೆ.

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next