Advertisement

ಹೆರಕಲ್ ಯೋಜನೆ ಹಳ್ಳ ಹಿಡಿಸಿದ ಬಿಟಿಡಿಎ!

12:08 PM May 14, 2019 | Team Udayavani |

ಬಾಗಲಕೋಟೆ: ಕೋಟ್ಯಂತರ ಮೊತ್ತದ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಬಿಟಿಡಿಎ ಅಧಿಕಾರಿಗಳು ಸಂಪೂರ್ಣ ಹಳ್ಳ ಹಿಡಿಸಿದ್ದಾರೆ. ನೀರು ಪೂರೈಕೆ ಯೋಜನೆ ಹೋಗಿ, ಬ್ಯಾರೇಜ್‌ ತುಂಬುವ ಯೋಜನೆಯಾಗಿ ಮಾರ್ಪಟ್ಟಿದೆ.

Advertisement

ಹೌದು, ಬಿಟಿಡಿಎ ಎಂಜಿನಿಯರ್‌ಗಳಲ್ಲಿನ ಸಮನ್ವಯತೆ ಕೊರತೆ, ಮುಂದಾಲೋಚನೆ ಇಲ್ಲದ ನಿರ್ಲಕ್ಷಿತ ಕ್ರಿಯಾ ಯೋಜನೆಗಳು, ಸರ್ಕಾರದ ಹಣ ದುಂದುವೆಚ್ಚ ಮಾಡುವ ದೂರಾಲೋಚನೆಯಿಂದ ಮಹತ್ವದ ಯೋಜನೆ ಹಳ್ಳ ಹಿಡಿಯುವಂತಾಗಿದೆ ಎಂಬ ಆರೋಪ ನಗರದ ಜನರಿಂದ ಕೇಳಿ ಬರುತ್ತಿದೆ.

18 ತಿಂಗಳ ಗಡುವು; ಆರು ವರ್ಷಕ್ಕೆ: ಈ ಯೋಜನೆ, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಬಾಗಲಕೋಟೆಯ ಜನರಿಗೆ ನದಿ ನೀರು ಕುಡಿಯುವ ಸೌಭಾಗ್ಯ ಒದಗುತ್ತಿತ್ತು. 2012ರಲ್ಲಿ ಶಾಸಕ ಡಾ|ವೀರಣ್ಣ ಚರಂತಿಮಠರ ಕ್ರಿಯಾಶೀಲತೆಯಿಂದ 72 ಕೋಟಿ ಮೊತ್ತದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ, ಅಧಿಕಾರಿಗಳ ಬೇಜವಾಬ್ದಾರಿ, ಮುಂದೆ ಬಂದ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಯೋಜನೆ, 18 ತಿಂಗಳಲ್ಲಿ ಮುಗಿಯಬೇಕಾಗಿದ್ದು, ಆರು ವರ್ಷವಾದರೂ ಮುಗಿದಿಲ್ಲ ಎಂಬ ಆಕ್ರೋಶದ ಮಾತು ವ್ಯಕ್ತವಾಗುತ್ತಿವೆ.

ಬ್ಯಾರೇಜ್‌ ತುಂಬುವ ಯೋಜನೆ ಆಯಿತು: ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯೊಂದು ಅಧಿಕಾರಿಗಳ ಜನಪರ ಮತ್ತು ಅಪಾರ ಕಾಳಜಿಯಿಂದ ಈಗ ಬ್ಯಾರೇಜ್‌ ತುಂಬುವ ಯೋಜನೆಯಾಗಿ ಮಾರ್ಪಟ್ಟಿರುವುದು ದುರಂತವೇ ಸರಿ.

ಹೆರಕಲ್ದಿಂದ ಪೈಪ್‌ಲೈನ್‌ ಮೂಲಕ, ಗದ್ದನಕೇರಿ ಕ್ರಾಸ್‌ವರೆಗೆ ನೀರು ಪಂಪ್‌ ಮಾಡಿ, ಗದ್ದನಕೇರಿ ಕ್ರಾಸ್‌ನ ಜಲ ಶುದ್ದೀಕರಣ ಮತ್ತು ಡಬ್ಲುಪಿ ಕೇಂದ್ರದಿಂದ ನಗರಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಕೊಡುವ ಯೋಜನೆಯಿದು. ಆದರೆ, ಪೈಪ್‌ಲೈನ್‌ ಅಳವಡಿಸುವ ಮಾರ್ಗದಲ್ಲಿ ನದಿ ಮತ್ತು ಹಿನ್ನೀರ ಪ್ರದೇಶ ಬಂದಿದ್ದರಿಂದ ಪ್ರತ್ಯೇಕ ಬ್ಯಾರೇಜ್‌ ಕಟ್ಟಬೇಕೇ, ಸದ್ಯ ಆನದಿನ್ನಿ ಬ್ಯಾರೇಜ್‌ನಲ್ಲಿರುವ ಜಾಕವೆಲ್ಗೆ ಹೆರಕಲ್ದಿಂದ ಬರುವ ನೀರಿನ ಪೈಪ್‌ಲೈನ್‌ ಅಳವಡಿಸಬೇಕೇ ಎಂಬ ಗೊಂದಲ ಬಗೆಹರಿದಿಲ್ಲ. ಆದರೆ, ಆರು ವರ್ಷವಾದರೂ ಇನ್ನೂ ಹೆರಕಲ್ ನೀರು, ಬಾಗಲಕೋಟೆಗೆ ಬಂದಿಲ್ಲ. ನೀವು ಏನು ಮಾಡ್ತಿರೋ ಗೊತ್ತಿಲ್ಲ. ನೀರು ಮಾತ್ರ ಕೊಡಲೇಬೇಕೆಂಬ ಒತ್ತಡ ಜನಪ್ರತಿನಿಧಿಗಳಿಂದ ಬಂದಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು, ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯನ್ನು, ಸದ್ಯಕ್ಕೆ ಬ್ಯಾರೇಜ್‌ ತುಂಬುವ ಯೋಜನೆ ಮಾಡಲು ಸಿದ್ಧರಾಗಿದ್ದಾರೆ.

Advertisement

ಏನಿದು ಬ್ಯಾರೇಜ್‌ ತುಂಬುವ ಯೋಜನೆ?: ಅನಗವಾಡಿ ಸೇತುವೆ ಬಳಿ ಇನ್ನೂ ನಾಲ್ಕು ಕಿ.ಮೀ ಪೈಪ್‌ಲೈನ್‌ ಅಳವಡಿಸುವ ಕಾರ್ಯವಾಗಿಲ್ಲ. ಪ್ರತ್ಯೇಕ ಸೇತುವೆ ನಿರ್ಮಿಸಿ, ಪೈಪ್‌ಲೈನ್‌ ಅಳವಡಿಸಿ, ನೀರು ತರಲು ಇನ್ನೂ ಐದು ವರ್ಷ ಬೇಕಾಗಬಹುದು. ಹೀಗಾಗಿ ಸಧ್ಯ ಇರುವ ಸಂಪನ್ಮೂಲ ಬಳಸಿಕೊಂಡು, ನೀರು ಕೊಡಲು ಬಿಟಿಡಿಎ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ, ಹೆರಕಲ್ದಿಂದ ಅನಗವಾಡಿ ಸೇತುವೆ ಹತ್ತಿರದ ಘಟಪ್ರಭಾ ನದಿವರೆಗೆ ಪೈಪ್‌ಲೈನ್‌ ಮಾಡಲಾಗಿದೆ. ಹೆರಕಲ್ ಬ್ಯಾರೇಜ್‌ ಬಳಿ ಜಾಕ್‌ವೆಲ್ ಕೂಡ ಸಿದ್ಧವಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸುವುದೊಂದೇ ಬಾಕಿ ಇದೆ. ಅದನ್ನು ಪೂರ್ಣಗೊಳಿಸಿ, ಹೆರಕಲ್ದಿಂದ ಆನದಿನ್ನಿ ಬ್ಯಾರೇಜ್‌ಗೆ ನೀರು ತುಂಬಿಸಿಕೊಳ್ಳುವುದು. ಆನದಿನ್ನಿ ಬ್ಯಾರೇಜ್‌ನಿಂದ ಈಗಾಗಲೇ ನಗರಕ್ಕೆ ಕುಡಿಯುವ ನೀರು ಪೂರೈಸುವ ಜಾಕವೆಲ್ ಮತ್ತು ಯೋಜನೆ ಇದೆ. ಆನದಿನ್ನಿ ಬ್ಯಾರೇಜ್‌ ಖಾಲಿಯಾದಾಗ, ನಗರಕ್ಕೆ ನೀರಿನ ಸಮಸ್ಯೆ ಉದ್ಭವಿಸುತ್ತಿತ್ತು. ಹೀಗಾಗಿ ಹೆರಕಲ್ದಿಂದ ನೀರನ್ನು ತಂದು, ಆನದಿನ್ನಿ ಬ್ಯಾರೇಜ್‌ ತುಂಬಿಸಿಕೊಳ್ಳಲು ಸಧ್ಯ ಎಲ್ಲ ತಯಾರಿ ನಡೆದಿವೆ.

ನಿರ್ವಹಣೆ ವೆಚ್ಚ ದುಪ್ಪಟ್ಟು : ಬಿಟಿಡಿಎ ಅಧಿಕಾರಿಗಳ ಇಂತಹ ಎಡವಟ್ಟು ಮತ್ತು ನಿರ್ಲಕ್ಷ್ಯದಿಂದ ಕುಡಿಯುವ ನೀರು ಪೂರೈಕೆ ಯೋಜನೆ ನಿರ್ವಹಿಸಲು ದುಪ್ಪಟ್ಟು ಅನುದಾನ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೆರಕಲ್ ಬಳಿ 7550 ಕೆ.ವಿ ವಿದ್ಯುತ್‌ ಬಳಸಿ, ನಾಲ್ಕು ಪಂಪಸೆಟ್ ಮೂಲಕ ನೀರೆತ್ತಬೇಕು. ಅಲ್ಲಿ ಒಬ್ಬ ವಾಟರ್‌ಮ್ಯಾನ್‌, ಪಂಪಸೆಟ್ ನಿರ್ವಹಣೆಗೆ ಮಾಸಿಕ ಕನಿಷ್ಠ 5ರಿಂದ 6 ಲಕ್ಷ ಖರ್ಚು ಮಾಡಬೇಕು. ಅಲ್ಲಿಂದ ಆನದಿನ್ನಿ ಬ್ಯಾರೇಜ್‌ಗೆ ನೀರು ತುಂಬಿಸಿಕೊಂಡು, ಆನದಿನ್ನಿ ಬ್ಯಾರೇಜ್‌ನಲ್ಲಿರುವ ಹಳೆಯ ಜಾಕವೆಲ್ದಿಂದ ನೀರು ಎತ್ತಿ, ಅಲ್ಲಿಂದ ಗದ್ದನಕೇರಿ ಡಬ್ಲುಪಿಗೆ ಪಂಪ್‌ ಮಾಡಬೇಕು. ಎರೆಡೆರಡು ಕಡೆ ಜಾಕವೆಲ್, ಪಂಪಸೆಟ್ ನಿರಂತರ ಬಳಕೆ ಮಾಡಬೇಕು. ಇದರಿಂದ ಮಾಸಿಕ ಹೊರೆ ಬಿಟಿಡಿಎಗೆ ಬೀಳಲಿದೆ.

ಹೆರಕಲ್‌ದಿಂದ ಆನದಿನ್ನಿ ಬಳಿ ಘಟಪ್ರಭಾ ನದಿವರೆಗೆ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್‌ ಸಂಪರ್ಕ ಕಾಮಗಾರಿಯೂ ನಡೆಯುತ್ತಿದ್ದು, ಜುಲೈ-ಆಗಸ್ಟ್‌ ವೇಳೆಗೆ ಹೆರಕಲ್‌ದಿಂದ ಆನದಿನ್ನಿ ಬ್ಯಾರೇಜ್‌ ವರೆಗೆ ನೀರು ತಂದು, ಬ್ಯಾರೇಜ್‌ ತುಂಬಿಸಿಕೊಳ್ಳುತ್ತೇವೆ. ಅಲ್ಲಿಂದ ಈಗಾಗಲೇ ಚಾಲ್ತಿಯಲ್ಲಿರುವ ಬನ್ನಿದಿನ್ನಿ (ಆನದಿನ್ನಿ) ಜಾಕವೆಲ್‌ನಿಂದ ಕುಡಿಯುವ ನೀರು ಕೊಡಲು ತಯಾರಿ ಮಾಡಿಕೊಳ್ಳಲಾಗಿದೆ.
ಮೋಹನ ಹಲಗತ್ತಿ, ಕಾರ್ಯನಿರ್ವಾಹಕ ಅಭಿಯಂತರ, ಬಿಟಿಡಿಎ

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next