ಮಣಿಪಾಲ: ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಹಿರಿಯ ಯತಿ ವಿಶ್ವೇಶ ತೀರ್ಥ ಸ್ವಾಮೀಜಿಗಳನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಶನಿವಾರ ಮಧ್ಯಾಹ್ನ ಸಿಎಂ ಯಡಿಯೂರಪ್ಪ ಜೊತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದರು.
ಭೇಟಿಯ ನಂತರ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಶ್ರೀಗಳು ಆದಷ್ಟು ಬೇಗ ಗುಣಮುಖರಾಗಿ ಮತ್ತೆ ಕೃಷ್ಣ ಮಠಕ್ಕೆ ಬರಬೇಕು. ನುರಿತ ವೈದ್ಯರು ಪ್ರಯತ್ನ ಪಡುತ್ತಿದ್ದಾರೆ. ಶ್ರೀಗಳು ಈಗ ಕಣ್ಣು ಬಿಡುತ್ತಿದ್ದಾರೆ ಎಂದರು.
ಸೋಂಕು ತಗಲಬಾರದು ಎಂಬ ಕಾರಣಕ್ಕೆ ಆಸ್ಪತ್ರೆಯ ಸುತ್ತಲೂ ಕಟ್ಟೆಚ್ಚರ ವಹಿಸಲಾಗಿದೆ. ಭಕ್ತರಲ್ಲಿ ವಿನಂತಿ ಏನೆಂದರೆ ಇಲ್ಲಿ ಯಾರೂ ಬರುವುದು ಬೇಡ. ಶ್ರೀಗಳು ಗುಣಮುಖರಾದ ಕೃಷ್ಣ ಮಠಕ್ಕೆ ಬಂದ ನಂತರ ಜನರು ಆಶೀರ್ವಾದ ಪಡೆಯಬಹುದು ಎಂದು ಬಿಎಸ್ ವೈ ಮನವಿ ಮಾಡಿದರು.
ಅಯೋಧ್ಯೆಯಲ್ಲಿ ಈ ಹಿಂದೆ ರಾಮನ ಪ್ರತಿಷ್ಠಾಪನೆ ಮಾಡಿದಾಗ ಪೇಜಾವರ ಶ್ರೀಗಳ ಜೊತೆಗೆ ನಾನೂ ಇದ್ದೆ. ಈಗ ಅವರ ಅಪೇಕ್ಷೆಯಂತೆ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಆ ಸುಂದರ ಸಂದರ್ಭದಲ್ಲಿ ಅವರು ಬದುಕಿರಬೇಕು ಎಂದು ಆಶಿಸಿದರು.
ವಿರೇಂದ್ರ ಹೆಗ್ಗಡೆ ಭೇಟಿ
ಶನಿವಾರ ಮಧ್ಯಾಹ್ನ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿ ವಿರೇಂದ್ರ ಹೆಗ್ಗಡೆಯವರು ಮಣಿಪಾಲ ಆಸ್ಪತ್ರೆಗೆ ಭೇಟಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದರು.