ಬೆಂಗಳೂರು: ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಸಿಎಂ ಕುಮಾರಸ್ವಾಮಿಯವರು ಸೋಮವಾರ ವಿಧಾನಸಭೆಯಲ್ಲಿ ನಡೆಸಿದ ಸಭೆಯಲ್ಲಿ ವ್ಯಕ್ತಪಡಿಸಿದ್ದ ಪ್ರತಿಕ್ರಿಯೆ ಅಸಮಾಧಾನದ ಹೊಗೆಯನ್ನು ಹೊರಹಾಕಿದ್ದಾರೆ.
ಏತನ್ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ದಿಢೀರ್ ಗುಜರಾತ್ ಗೆ ತೆರಳಿದ್ದಾರೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.
ಅಹಮದಾಬಾದ್ ಗೆ ತೆರಳಿರುವ ಬಿಎಸ್ ವೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ರಾಜ್ಯರಾಜಕಾರಣದ ಸದ್ಯದ ರಾಜಕೀಯ ಚಿತ್ರಣದ ಮಾಹಿತಿ ನೀಡಿದ್ದಾರೆನ್ನಲಾಗಿದೆ.
ಅಲ್ಲದೇ ಪರಿಸ್ಥಿತಿಯ ಲಾಭ ಪಡೆಯುವ ನಿಟ್ಟಿನಲ್ಲಿ ಮುಂದಿನ ನಡೆ ಹೇಗಿರಬೇಕೆಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂಬುದಾಗಿ ವರದಿಗಳು ಹೇಳಿವೆ. ಬಜೆಟ್ ಹಾಗೂ ಕಮಿಷನ್ ವಿಚಾರದಲ್ಲಿ ಹಾಲಿ ಮತ್ತು ಮಾಜಿ ಸಿಎಂ ನಡುವೆ ಪರೋಕ್ಷ ವಾಕ್ಸಮರ ನಡೆಯುತ್ತಿದೆ.
ನಮ್ಮ ಸರ್ಕಾರ ಎಷ್ಟು ದಿನ ಇರುತ್ತೆ ಎಂಬುದು ಮುಖ್ಯವಲ್ಲ, ಏನು ಮಾಡಿದ್ದೇವೆ ಎಂಬುದು ಮುಖ್ಯ ಎಂದು ಸಿಎಂ ಕುಮಾರಸ್ವಾಮಿ ಪದೇ, ಪದೇ ನೀಡುತ್ತಿರುವ ಹೇಳಿಕೆಗೆ ಬಿಜೆಪಿ ರಣತಂತ್ರ ರೂಪಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.