ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆನ್ನಲಾದ ವಿಡಿಯೋ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸುವಂತೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿಡಿಯೋ ಪ್ರಕರಣವನ್ನು ಪಕ್ಷದ ಆಂತರಿಕ ತನಿಖೆಗೆ ಆದೇಶ ನೀಡಿರುವುದು ಯಡಿಯೂರಪ್ಪ ಮಾತನಾಡಿರುವುದನ್ನು ಅವರು ಒಪ್ಪಿಕೊಂಡಂತಾಗಿದೆ. ಈ ಪ್ರಕರಣದ ನಂತರ ಬಿಜೆಪಿ ಸಚಿವರು ಹಾಗೂ ನಾಯಕರ ಸಮೂಹ ಸನ್ನಿ ಹಿಡಿದಂತೆ ಮಾತನಾಡುತ್ತಿದ್ದಾರೆ. ಅವರು ಆರೋಗ್ಯವಾಗಿರಬೇಕಾದರೆ ಅವರಿಗೆ ನಿಮ್ಯಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಎರಡು ನಾಲಿಗೆ ಇಟ್ಟುಕೊಂಡಿದ್ದಾರೆ. ಅವರೇ ಅನರ್ಹರನ್ನು ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಎರಡು ತಿಂಗಳು ಮುಂಬೈನಲ್ಲಿ ಇಟ್ಟುಕೊಳ್ಳಲಾಗಿತ್ತು ಎಂದು ಹೇಳಿದವರು ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯಾಗುವ ಆಸೆ ಎಲ್ಲರಿಗೂ ಇರುತ್ತದೆ. ಈಗ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ಧಂತೆ ಯಡಿಯೂರಪ್ಪ ರಾಗ ಬದಲಾಯಿಸುತ್ತಿದ್ದಾರೆ. ಅವರಿಗೆ ಎರಡು ನಾಲಿಗೆ ಇದೆ ಎಂದು ಉಗ್ರಪ್ಪ ಆರೋಪಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಡಿಯೂರು ಸಿದ್ದಲಿಂಗೇಶ್ವರನ ಸನ್ನಿಧಾನದಲ್ಲಿ ನೀವು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನದಂತೆ ಅನರ್ಹ ಶಾಸಕರನ್ನು ಮುಂಬೈನಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿಲ್ಲ ಎಂದು ಪ್ರಮಾಣ ಮಾಡಿ, ನಾವು ನೀವೇ ಹೇಳಿದ್ದು ಎಂದು ಪ್ರಮಾಣ ಮಾಡಲು ಸಿದ್ದರಿದ್ದೇವೆ ಎಂದು ಸವಾಲು ಹಾಕಿದರು.
ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಯಲ್ಲಿ ಗುಂಪುಗಳು ಪ್ರಯತ್ನ ನಡೆಸುತ್ತಿವೆ. 2011 ರಲ್ಲಿ ನಿಮ್ಮನ್ನು ಕೆಳಗಿಳಿಸಿದವರು ಈಗ ಮತ್ತೆ ನಿಮ್ಮನ್ನು ಕೆಳಗಿಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಿ ಬಹುಮತ ಪಡೆದುಕೊಳ್ಳಲಿ. ಅವರು ಇದುವರೆಗೂ ಯಾವತ್ತೂ ಬಹುಮತ ಪಡೆದು ಮುಖ್ಯಮಂತ್ರಿಯಾಗಿಲ್ಲ. ಒಂದು ವೇಳೆ ಬಿಜೆಪಿಗೆ ಬಹುಮತ ಬಂದರೆ ಯಡಿಯೂರಪ್ಪ ಅವರಿಗೆ ಸೆಲ್ಯೂಟ್ ಹೊಡೆದು ಅವರ ವಿರುದ್ಧ ಮಾತನಾಡುವುದನ್ನು ನಿಲ್ಲಿಸುತ್ತೇನೆ ಎಂದು ಉಗ್ರಪ್ಪ ಹೇಳಿದರು.
ಯಡಿಯೂರಪ್ಪ ಮಾತನಾಡಿರುವ ವಿಡಿಯೋ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮೇಲೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಒಬ್ಬ ಗೃಹ ಸಚಿವರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಸರ್ಕಾರವನ್ನು ಪತನಗೊಳಿಸುವ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಸಂಪುಟದಿಂದ ಕೈ ಬಿಡುವಂತೆ ರಾಷ್ಟ್ರಪತಿಗೆ ಮನವಿ ಮಾಡಲಾಗಿದೆ. ಅಲ್ಲದೇ ಯಡಿಯೂರಪ್ಪ ಸರ್ಕಾರವನ್ನು ವಿಸರ್ಜಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.