Advertisement

BJP: ವಿಜಯೇಂದ್ರರಿಗೆ ಬಲ ತುಂಬಲು ಬಿಎಸ್‌ವೈ ಪ್ರವಾಸ

12:20 AM Jan 28, 2024 | Team Udayavani |

ಬೆಂಗಳೂರು: ಪುತ್ರ ವಿಜಯೇಂದ್ರ ಅವರ ರಾಜಕೀಯ ಸಾಮರ್ಥ್ಯ ಪ್ರತಿಷ್ಠಾಪನೆಗಾಗಿ ಮಾಜಿ ಸಿಎಂ ಯಡಿಯೂರಪ್ಪ ಈಗ ಮತ್ತೆ ಹೋರಾಟದ ಶಸ್ತ್ರ ಹಿಡಿಯಲು ಮುಂದಾಗಿದ್ದು, ಲೋಕಸಭಾ ಚುನಾವಣೆಯ ಮುಂಚೂಣಿಯಲ್ಲಿ ನಿಂತು ಪ್ರಚಾರಕ್ಕೆ ನಿರ್ಧರಿಸಿದ್ದಾರೆ.

Advertisement

ವಯಸ್ಸಿನ ಎಲ್ಲ ಸವಾಲುಗಳನ್ನು ಪಕ್ಕಕ್ಕಿಟ್ಟು ಚುನಾವಣೆಯಲ್ಲಿ ಭಾಗಿ ಯಾಗಲು ಅವರು ನಿರ್ಧರಿಸಿದ್ದು, ಈ ಸಂಬಂಧ ದಿಲ್ಲಿಯಲ್ಲಿ ವರಿಷ್ಠರ ಭೇಟಿ ವೇಳೆ ಚರ್ಚಿಸಿದ್ದಾರೆ. 28ಕ್ಕೆ 28 ಕ್ಷೇತ್ರ ಗೆಲ್ಲುವುದಕ್ಕೆ ಕರ್ನಾಟಕದಲ್ಲಿ ಅವಕಾಶವಿದ್ದು, ದಕ್ಷಿಣ ಭಾರತದಲ್ಲಿ ಬಿಜೆಪಿಯ “ಗುರಿ -50′ ಸ್ಥಾನ ಗಳಿಕೆಯ ಗುರಿಯ ಪೈಕಿ ಅರ್ಧದಷ್ಟನ್ನು ಅಂದರೆ 25 ಸ್ಥಾನಗಳನ್ನು ಕರ್ನಾಟಕದಿಂದಲೇ ಗೆದ್ದುಕೊಡುವ ಭರವಸೆ ನೀಡಿದ್ದಾರೆ. ಇದಕ್ಕಾಗಿ ರಾಜ್ಯ ಪ್ರವಾಸ ಮಾಡಲು ಅವರು ನಿರ್ಧರಿಸಿದ್ದಾರೆ.

ಆದರೆ ವರಿಷ್ಠರ ಬಳಿ ಕೆಲವು ಮನವಿಯನ್ನೂ ಯಡಿಯೂರಪ್ಪ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಬಹುತೇಕ ಹಾಲಿ ಅಭ್ಯರ್ಥಿಗಳು ಮುಂದುವರಿಯಲಿ ಎಂಬುದು ಅವರ ಅನಿಸಿಕೆಯಾಗಿದ್ದು, ಹೊಸ ಮುಖಗಳನ್ನು ಕಣಕ್ಕಿಳಿಸುವ ಸಂದರ್ಭ ಬಂದಾಗ ತಮ್ಮ ಅಭಿಪ್ರಾಯ ಆಲಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಮೂಲಕ ಉತ್ತಮ ಫ‌ಲಿತಾಂಶ ಬೇಕಿದ್ದರೆ ತಮ್ಮನ್ನು ಕಡೆಗಣಿಸಬೇಡಿ ಎಂಬ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

28ಕ್ಕೆ 28 ಘೋಷಣೆ
ಇದಕ್ಕೆ ಪೂರಕವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲೂ ಯಡಿಯೂರಪ್ಪ 28 ಕ್ಷೇತ್ರಗಳನ್ನು ಗೆಲ್ಲುವ ಘೋಷಣೆ ಮೊಳಗಿಸಿದ್ದಾರೆ. ತಮ್ಮ ಪುತ್ರ ವಿಜಯೇಂದ್ರ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಕಾರ್ಯಕಾರಿಣಿಯನ್ನು ಯಶಸ್ವಿಗೊಳಿಸಲು ಅವರು ವಿಶೇಷ ಮುತುವರ್ಜಿ ವಹಿಸಿದ್ದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್‌ವೈ, ಲೋಕಸಭಾ ಸಮರ ನಮ್ಮೆಲ್ಲರಿಗೆ ಬಹುದೊಡ್ಡ ತಿರುವಿನ ಸತ್ವ ಪರೀಕ್ಷೆಯಾಗಿದೆ. 2019ರಲ್ಲಿ 26 ಸ್ಥಾನಗಳನ್ನು ಗೆಲ್ಲಲಾಗಿತ್ತು. ಇದು ಜನರ ಸಂಕಲ್ಪ ಶಕ್ತಿಯಾಗಿತ್ತು. ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಬೇಕಿದೆ ಎಂದು ಮನವಿ ಮಾಡಿದರು.

Advertisement

ಜನರು ಈ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇವರಿಗೆ ಬರಗಾಲದಲ್ಲಿ ರೈತರ ಕಣ್ಣೀರು ಒರೆಸಲು ಆಗಿಲ್ಲ. ಹೆಣ್ಣುಮಕ್ಕಳ ಮಾನ ರಕ್ಷಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಜನರ ಹಾಗೂ ರಾಜ್ಯದ ಪರವಾಗಿ ನಿಂತು ಹೋರಾಟ ಮಾಡೋಣ. ಬಿಜೆಪಿಗೆ ಜಗದೀಶ ಶೆಟ್ಟರ್‌ ಸೇರಿದ್ದು, ನಮಗೊಂದು ದೊಡ್ಡ ಶಕ್ತಿ ಕೊಟ್ಟಿದೆ ಎಂದರು.

ಶಾಮನೂರು ಆಶೀರ್ವಾದ, ಬಿಎಸ್‌ವೈ ಖುಷಿ
ಶಿವಮೊಗ್ಗ ಸಂಸದ ಬಿ.ವೈ. ವಿಜಯೇಂದ್ರ ಗೆದ್ದು ಬರಲಿ ಎಂದು ಕಾಂಗ್ರೆಸ್‌ ನಾಯಕ ಶಾಮನೂರು ಶಿವಶಂಕರಪ್ಪ ಮಾಡಿರುವ ಆಶೀರ್ವಾದ ಯಡಿಯೂರಪ್ಪ ಅವರನ್ನು ಆನಂದದ ಕಡಲಲ್ಲಿ ಮುಳುಗಿಸಿದ್ದು, ಪತ್ರಕರ್ತರ ಪ್ರಶ್ನೆಗೆ ನಗುಮೊಗದ ಉತ್ತರ ನೀಡಿದ್ದಾರೆ. ಶಾಮನೂರು ಅವರಂಥ ಹಿರಿಯರು ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿರುವುದು ಸಂತೋಷ ತಂದಿದೆ. ರಾಘವೇಂದ್ರ ಮಾಡಿರುವ ಕೆಲಸವನ್ನು ಮೆಚ್ಚಿ ಪುನರಾಯ್ಕೆ ಮಾಡಬೇಕೆಂದು ಹೇಳಿರುವುದು ಕ್ಷೇತ್ರದ ಜನತೆಗೆ ಹಾಗೂ ಸಮಾಜದ ಬಂಧುಗಳಿಗೆ ಸಂತೋಷ ತಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next