Advertisement

ವ್ಯಕ್ತಿ ಎಷ್ಟೇ ದೊಡ್ಡವನಾದ್ರೂ ಪಕ್ಷದ ಬೆಂಬಲವಿಲ್ಲದೆ ಎತ್ತರಕ್ಕೇರಲು ಸಾಧ್ಯವಿಲ್ಲ: BSY

08:55 PM Apr 16, 2023 | Team Udayavani |

ಬೆಂಗಳೂರು: ನನ್ನ ಸಂಪೂರ್ಣ ಬದುಕನ್ನು ಬಿಜೆಪಿ ಹಾಗೂ ನರೇಂದ್ರ ಮೋದಿಯವರಿಗೆ ಮೀಸಲಿಟ್ಟಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೀಗ ಎಂಬತ್ತು ವರ್ಷ. ನನ್ನ ಸಂಪೂರ್ಣ ಬದುಕನ್ನು ಬಿಜೆಪಿ ಹಾಗೂ ನರೇಂದ್ರ ಮೋದಿಯವರಿಗೆ ಮೀಸಲಿಟ್ಟಿದ್ದೇನೆ.

Advertisement

ಹೊಸಮುಖಗಳಿಗೆ ನಾವೀಗ ಅವಕಾಶ ನೀಡಿದ್ದೇವೆ. ಪಕ್ಷಕ್ಕೆ ಹೊಸ ಹುರುಪು ಬರುವಂತಾಗಲು ಹಿರಿಯರು ಅವಕಾಶ ಮಾಡಿಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಮುಂದುವರಿಯುತ್ತಿರುವ ವೇಳೆ ಅವರಿಗೆ ಶಕ್ತಿ ತುಂಬುವುದು ನಮ್ಮ ಜವಾಬ್ದಾರಿ. ಇಂತಹ ಸಂದರ್ಭದಲ್ಲಿ ಜಗದೀಶ್‌ ಶೆಟ್ಟರ್‌ ಅವರು ವಿಚಾರಧಾರೆಗೆ ತದ್ವಿರುದ್ಧದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸ್ಥಾನ ಸಿಗದಿದ್ದರೂ ದೇಶಕ್ಕಾಗಿ ಶ್ರಮಿಸಬೇಕಿದೆ. ಶೆಟ್ಟರ್‌ ಅವರನ್ನು ಗುರುತಿಸಿದ್ದು ಬಿಜೆಪಿ. ವ್ಯಕ್ತಿ ಎಷ್ಟೇ ದೊಡ್ಡವನಾದರೂ ಪಕ್ಷದ ಬೆಂಬಲವಿಲ್ಲದೆ ಎತ್ತರಕ್ಕೇರಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಪದವಿ ಅಲಂಕರಿಸಲು ಸಾಧ್ಯವಿಲ್ಲ. ಧಮೇಂದ್ರ ಪ್ರಧಾನ್‌, ಪ್ರಲ್ಹಾದ್‌ ಜೋಶಿ ಹುಬ್ಬಳ್ಳಿಯಲ್ಲಿ ಶೆಟ್ಟರ್‌ ಅವರ ಮನೆಗೆ ಭೇಟಿ ನೀಡಿ ಅವರ ಮನವೊಲಿಸಲು ಪ್ರಯತ್ನಿಸಿದರು.

ನನಗೆ, ಶೆಟ್ಟರ್‌, ಈಶ್ವರಪ್ಪ ಸೇರಿ ಎಲ್ಲರಿಗೂ ಪಕ್ಷ ಸ್ಥಾನಮಾನ, ಅವಕಾಶ ನೀಡಿದೆ. ತಮ್ಮಂತ ಸಾಮಾನ್ಯ ಕಾರ್ಯಕರ್ತರು ರಾಜ್ಯದ ಮೂಲೆ ಮೂಲೆಯಲ್ಲಿ ವಿಶ್ವಾಸ ಗಳಿಸಲು ಬಿಜೆಪಿ ಕಾರಣ ಎಂಬುದನ್ನು ಎಂದಿಗೂ ಮರೆಯುವುದಿಲ್ಲ. ಸ್ವಇಚ್ಛೆಯಿಂದ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದೇನೆ. ಈಶ್ವರಪ್ಪ, ಅಂಗಾರ, ರಘುಪತಿ ಭಟ್‌ ಅವರು ಪಕ್ಷದ ತೀರ್ಮಾನವನ್ನು ಗೌರವಿಸಿದ್ದು, ಅವರನ್ನು ಅಭಿನಂದಿಸುತ್ತೇನೆ. ಶೆಟ್ಟರ್‌ ಮತ್ತು ಸವದಿ ನಾಲ್ಕೆçದು ದಿನಗಳಲ್ಲಿ ತಮ್ಮ ತಪ್ಪಿನ ಅರಿವಾಗಿ ಪಕ್ಷಕ್ಕೆ ಬರುವುದಾದರೆ ವಾಪಸ್‌ ಸೇರಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಲಕ್ಷಣ ಸವದಿ ಅವರು ಶಾಸಕರು, ಸಚಿವರಾಗಿದ್ದರು. ಸೋತ ಮೇಲೆ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಕೋರ್‌ ಕಮಿಟಿಯಲ್ಲಿ ಸ್ಥಾನ ನೀಡಲಾಯಿತು. ಅವರ ವಿಧಾನಪರಿಷತ್‌ ಸದಸ್ಯ ಅವಧಿ ಇನ್ನೂ 5 ವರ್ಷ ಇದ್ದರೂ ಪಕ್ಷವನ್ನು ತೊರೆದಿದ್ದಾರೆ. ಪಕ್ಷದಲ್ಲಿದ್ದಿದ್ದರೆ ಮುಂದೆಯೂ ಅವರನ್ನು ಸಚಿವರನ್ನಾಗಿ ಮಾಡುತ್ತಿದ್ದೆವು. ಬಿಜೆಪಿ ಅವರಿಗೆ ಅನ್ಯಾಯ ಮಾಡಿಲ್ಲ. ಬಿಜೆಪಿ ಅವರನ್ನು ಗುರುತಿಸಿದೆ. ಕಾಂಗ್ರೆಸ್‌ ಹೋಗುವ ಅವರ ಪ್ರಯತ್ನ ಜನತೆಗೆ, ಪಕ್ಷಕ್ಕೆ, ನಂಬಿಕೆ-ವಿಶ್ವಾಸಕ್ಕೆ ಮಾಡಿದ ದ್ರೋಹ. ಅವರ ನಿರ್ಧಾರವನ್ನು ಜನತೆ ಕ್ಷಮಿಸುವುದಿಲ್ಲ. ಈ ಬೆಳವಣಿಗೆಗಳಿಂದ ಕಾರ್ಯಕರ್ತರು ವಿಚಲಿತರಾಗುವ ಅಗತ್ಯವಿಲ್ಲ. ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಯಾವುದೇ ಅಭ್ಯರ್ಥಿ ಇದ್ದರೂ ಕಾರ್ಯಕರ್ತರು ಹಗಲಿರುಳು ಕೆಲಸ ಮಾಡಬೇಕು. ನಾನೇ ಖುದ್ದಾಗಿ ಆ ಭಾಗದಲ್ಲಿ ಪ್ರವಾಸ ಮಾಡಿ ಜನರಿಗೆ ವಾಸ್ತವ ಸಂಗತಿ ತಿಳಿಸುತ್ತೇನೆ. ಜಗತ್ತಿನ ಯಾವುದೇ ಶಕ್ತಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

2018ರಲ್ಲಿ ಕಾಂಗ್ರೆಸ್‌ ಧರ್ಮದ ಹೆಸರಿನಲ್ಲಿ ವೀರಶೈವ-ಲಿಂಗಾಯತರನ್ನು ಒಡೆಯಲು ಪ್ರಯತ್ನಿಸಿತು. ಆದರೆ ರಾಜ್ಯದ ಜನರು ಕಾಂಗ್ರೆಸ್‌ ಅನ್ನು ತಿರಸ್ಕರಿಸಿದರು. ಹಿಂದಿನ ಲೋಕಸಭೆ ಚುನಾವಣೆ ವೇಳೆ ಬಿಜೆಪಿ 25 ಸ್ಥಾನಗಳನ್ನು ಗೆಲ್ಲುವುದಾಗಿ ನಾನು ಹೇಳಿದ್ದೆ. ಅದರಂತೆ 25 ಆಯ್ತು. ಮುಂದಿನ ಚುನಾವಣೆಯಲ್ಲೂ 25ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಈ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 125ರಿಂದ 130 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು. ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ , ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌, ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next