ಹಾಸನ: ರಾಜ್ಯದಲ್ಲಿ ಕೋವಿಡ್ 19 ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವವರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದರೂ ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ಸಮರ್ಥವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಕ್ಷೌರಿಕರು, ಅಗಸರು, ಗಾರೆ ಕಾರ್ಮಿಕರು ಸೇರಿ ನೊಂದ ವರ್ಗಗಳಿಗೆ ಇದುವರೆಗೂ ಪರಿಹಾರ ಧನ ಸಿಕ್ಕಿಲ್ಲ. ತರಕಾರಿ, ಹಣ್ಣು, ಹೂವು ಬೆಳೆಗಾರ ರಿಗೂ ಪರಿಹಾರ ದಕ್ಕಿಲ್ಲ. ಪರಿಹಾರ ನೀಡಲು ವಿಧಿಸಿ ರುವ ಮಾರ್ಗದರ್ಶಿ ಸೂತ್ರ ಗಮನಿಸಿದರೆ ಸಂಕಷ್ಟ ಅನುಭವಿಸಿದವರಿಗೆ ಪರಿಹಾರ ಸಿಗುವುದೂ ಕಷ್ಟ. ಇಂತಹ ಪರಿಸ್ಥಿತಿ ಇದ್ದರೂ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜೆಡಿಎಸ್ ಮತ್ತಿತರ ವಿರೋಧ ಪಕ್ಷಗಳು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಒತ್ತಡ ಹೇರಲು ಮುಂದಾದ ವೇಳೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅವರನ್ನು ಆಧುನಿಕ ಬಸವಣ್ಣ ಎಂದು ಬಣ್ಣಿಸಿ ಮೆಚ್ಚುಗೆ ವ್ಯಕ್ತಪಡಿಸುವುದಾದರೆ, ಸರ್ಕಾರವನ್ನು ಎಚ್ಚರಿಸಲು ಸಾಧ್ಯವೇ. ಪರಿಹಾರ ಧನ ಮಂಜೂರಾತಿಗೆ ಜಿಲ್ಲಾಧಿಕಾರಿಗೇ ಅಧಿಕಾರ ನೀಡಬೇಕು ಎಂದೂ ಆಗ್ರಹಿಸಿದರು.
ಜೆಡಿಎಸ್ ಅನ್ನು ಲಘುವಾಗಿ ಕಾಣಬೇಡಿ: ರಾಜ್ಯದಲ್ಲಿ ಇನ್ನು ಮುಂದೆ ಚುನಾವಣಾ ಮೈತ್ರಿ ಬೇಡ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಜೆಡಿಎಸ್ ಎಂದೂ ಕಾಂಗ್ರೆಸ್ ಸಖ್ಯಕ್ಕೆ ಮುಂದಾಗಿಲ್ಲ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆ ವೇಳೆಯೂ ಜೆಡಿಎಸ್ ಕಾಂಗ್ರೆಸ್ ಮುಖಂಡರ ಮನೆ ಬಾಗಿಲಿಗೆ ಹೋಗಿರಲಿಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಹೊಸ ಸಾರಥಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪಕ್ಷ ಸಂಘಟಿಸಲಿ. ಆದರೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ಕಳೆದ ಲೋಕಸಭಾ ಚುನಾವಣೆಯಲ್ಲಿ ಏನೇನು ನಡೆಯಿತು. ಕುಮಾರ ಸ್ವಾಮಿ ಸರ್ಕಾರವನ್ನು ಯಾರು ಉರುಳಿಸಿದರು, ಕಾಂಗ್ರೆ ಸ್‌ನ 14 ಶಾಸಕರು ಬಿಜೆಪಿಗೆ ಹೋಗಲು ಯಾರು ಕಾರಣ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು. ಹಾಸನದಲ್ಲಿ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿದರು.