Advertisement

ಕಂಟಕ ತ‌ಪ್ಪಿಸಲು ಫೋನ್‌ ಕದ್ದಾಲಿಕೆ ?

06:00 AM Aug 29, 2018 | |

ಬೆಂಗಳೂರು: ಸಮ್ಮಿಶ್ರ ಸರಕಾರ ಉರುಳಿಸುವ ಪ್ರಯತ್ನ ಒಳಗಿಂದೊಳಗೆ ನಡೆಯುತ್ತಿರುವ ಬೆನ್ನಲ್ಲೇ ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವರು ಮತ್ತು ಪ್ರಭಾವಿ ಶಾಸಕರ ದೂರವಾಣಿ ಕದ್ದಾಲಿಕೆ ಮಾಡುತ್ತಿರುವ ಅಂಶ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಾಗೂ ಬಿಜೆಪಿ ಶಾಸಕರ ದೂರವಾಣಿ ಕರೆ ಹಾಗೂ ಸಂಭಾಷಣೆಗಳ ಟ್ಯಾಪಿಂಗ್‌ ನಡೆಯುತ್ತಿದ್ದು, ಕಳೆದ ಒಂದು ವಾರದಿಂದ ಇದು ತೀವ್ರಗೊಂಡಿದೆ. ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತರು ಹಾಗೂ ಬೆಂಬಲಿಗ ಶಾಸಕರ ಚಲನವಲನಗಳ ಬಗ್ಗೆ ನಿಗಾ ಇರಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

Advertisement

ಸಿದ್ದರಾಮಯ್ಯ ಯೂರೋಪ್‌ ಪ್ರವಾಸಕ್ಕೆ ತೆರಳುತ್ತಿದ್ದಂತೆ ಸರಕಾರ ಉರುಳಲಿದೆ ಎಂಬ ಮಾತುಗಳು ಕೇಳಿಬರುತ್ತಿರುವುದು, ಇದಕ್ಕೆ ತಕ್ಕಂತೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಚರ್ಚೆ ವ್ಯಾಪಕವಾಗಿರುವುದು ಸಹಿತ ಸರಕಾರಕ್ಕೆ ಕಂಟಕ ತರುವ ವಿದ್ಯಮಾನ ನಡೆಯು ತ್ತಿರುವುದರಿಂದಲೇ ಫೋನ್‌ ಟ್ಯಾಪಿಂಗ್‌ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಯಾವ್ಯಾವ ಸಚಿವರು-ಶಾಸಕರು ಯಾರ್ಯಾರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಕಲೆಹಾಕಲಾಗಿದೆ. ಕಾಂಗ್ರೆಸ್‌ನ 15 ಶಾಸಕರು ಹಾಗೂ ಓರ್ವ ಸಚಿವ, ಜೆಡಿಎಸ್‌ನ ಒಬ್ಬರು ಸೇರಿ ಮೂವರು ಮಾಜಿ ಸಚಿವರು ಬಿಜೆಪಿ ನಾಯಕರ ಸಂಪರ್ಕದಲ್ಲಿರುವುದು ಫೋನ್‌ ಟ್ಯಾಪಿಂಗ್‌ನಿಂದ ಪತ್ತೆ ಹಚ್ಚಲಾಗಿದೆ.

ಸಂಪುಟ ವಿಸ್ತರಣೆ ಚೌತಿಗೆ ಮೊದಲು ಆಗದಿದ್ದರೆ ಲೋಕಸಭೆ ಚುನಾವಣೆಗೆ ಮುನ್ನವೇ ಸರಕಾರಕ್ಕೆ ಆಪತ್ತು ಬರುವ ಸಾಧ್ಯತೆ ಇದೆ. ಒಂದೋ ಬದಲಿ ಸರಕಾರ ರಚನೆ ಮಾಡುವುದು. ಇಲ್ಲವೇ ಹೊಸದಾಗಿ ಚುನಾವಣೆಗೆ ಹೋಗುವುದು ಎಂಬುದು ಕಾರ್ಯತಂತ್ರ ಎಂಬ ಮಾಹಿತಿ ಫೋನ್‌ ಟ್ಯಾಪಿಂಗ್‌ನಿಂದ ಲಭ್ಯವಾಗಿದೆ. ಈ ಬೆಳವಣಿಗೆಯಿಂದ ಮುಖ್ಯಮಂತ್ರಿ ಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌ ವಿಚಲಿತಗೊಂಡಿದ್ದಾರೆ. ಇಂಥದ್ದೊಂದು ಬೆಳವಣಿಗೆ ನಡೆಯುತ್ತಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರ ಗಮನಕ್ಕೂ ತರಲಾಗಿದೆ ಎಂದು ಹೇಳಲಾಗಿದೆ.

ಬಿಜೆಪಿ ನಾಯಕರದ್ದೂ ಟ್ಯಾಪಿಂಗ್‌
ಬಿಜೆಪಿಯ ಪ್ರಮುಖ ನಾಯಕರು ಹಾಗೂ ಶಾಸಕರ ದೂರವಾಣಿ ಕರೆಗಳನ್ನೂ ಟ್ಯಾಪಿಂಗ್‌ ಮಾಡಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ನಾಯಕರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

ದೂರವಾಣಿ ಕದ್ದಾಲಿಕೆ ಹೊಸದಲ್ಲ
ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಹೊಸದಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾಪಕ್ಷ ಸರಕಾರ ಅಧಿಕಾರದಲ್ಲಿದ್ದಾಗ ದೂರವಾಣಿ ಕದ್ದಾಲಿಕೆ ಆರೋಪ ಸಂಚಲನ ಮೂಡಿಸಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಫೋನ್‌ ಟ್ಯಾಪಿಂಗ್‌ ನಡೆದಿತ್ತು. ಇತ್ತೀಚೆಗೆ ಹೊಸದಾಗಿ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭ ಹಾಗೂ ಅನಂತರ ಸರಕಾರ ರಚನೆ ಕಸರತ್ತು ನಡೆಯುತ್ತಿದ್ದಾಗ ಎಚ್‌.ಡಿ. ಕುಮಾರಸ್ವಾಮಿಯವರ ಫೋನ್‌ ಟ್ಯಾಪಿಂಗ್‌ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. 

Advertisement

ಅತ್ಯಾಧುನಿಕ ತಂತ್ರಜ್ಞಾನದ ಡಿವೈಸ್‌ 
ಬಿ.ಎಸ್‌.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅತ್ಯಾಧುನಿಕ ತಂತ್ರಜ್ಞಾನದ ದೂರವಾಣಿ ಕರೆ ಹಾಗೂ ಸಂಭಾಷಣೆಗಳ ಸಂಪೂರ್ಣ ಮಾಹಿತಿ ನೀಡುವ ಎರಡು ಡಿವೈಸ್‌ ಖರೀದಿ ಮಾಡಲಾಗಿತ್ತು. ಅವುಗಳಲ್ಲಿ ಒಂದನ್ನು ರಾಜ್ಯ ಗುಪ್ತಚರ ಇಲಾಖೆಯಲ್ಲಿ ಇರಿಸಲಾಗಿದೆ.

ಲ್ಯಾಂಡ್‌ಲೈನ್‌ ಮೊರೆ
ಫೋನ್‌ ಟ್ಯಾಪಿಂಗ್‌ ಮಾಡುತ್ತಿರುವ ಮಾಹಿತಿ ಗೊತ್ತಾಗಿ ಕೆಲವು ಸಚಿವರು, ಶಾಸಕರು ಬೆಚ್ಚಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಟ್ಯಾಪಿಂಗ್‌ ವೇಳೆ “ಖಾಸಗಿ ವ್ಯವಹಾರ’ಗಳ ಮಾಹಿತಿಯೂ ಗೊತ್ತಾಗಿರಬಹುದಾ ಎಂದು ತಲೆಬಿಸಿ ಮಾಡಿಕೊಂಡಿದ್ದಾರೆ. ಪ್ರಮುಖ ಕರೆಗಳಿಗೆ ಲ್ಯಾಂಡ್‌ಲೈನ್‌ ಮೊರೆ 
ಹೋಗಿದ್ದಾರೆ. ಮೊಬೈಲ್‌ಗೆ ಕರೆ ಮಾಡಿದರೆ ನೇರವಾಗಿಯೇ ಟ್ಯಾಪಿಂಗ್‌ ಆಗುತ್ತಿದೆ. ದಯವಿಟ್ಟು ಲ್ಯಾಂಡ್‌ ಲೈನ್‌ನಲ್ಲಿ ಮಾತಾಡೋಣ ಎಂದು ಹೇಳುತ್ತಿದ್ದಾರೆ.

ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next