ಬೆಂಗಳೂರು: ಹಲವು ಸಮಯದ ರಾಜಕೀಯ ಬೆಳವಣಿಗೆಗಳ ಬಳಿಕ ಇಂದು (ಜು.26) ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಮಾರು ಅರ್ಧಶತಮಾನದ ಸಕ್ರಿಯ ಚುನಾವಣಾ ರಾಜಕೀಯ ನಡೆಸಿದ ಬಿಎಸ್ ಯಡಿಯೂರಪ್ಪ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾದವರು. 2019ರಲ್ಲಿ ರಾಜಕೀಯ ಬೆಳವಣಿಗೆಯ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೇರಿದ ಬಿ ಎಸ್ ಯಡಿಯೂರಪ್ಪ ಇಂದಿನ ಎರಡು ವರ್ಷ. ಎರಡು ವರ್ಷದ ಸಂಭ್ರಮದ ಸಾಧನಾ ಸಮಾವೇಶದಲ್ಲಿ ಭಾವುಕತೆಯಿಂದ ಮಾತನಾಡಿದ ಯಡಿಯೂರಪ್ಪ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.
ಮುಂದೇನು?
ಶಿಕಾರಿಪುರ ಪುರಸಭೆಯಿಂದ ಆರಂಭಿಸಿ ಮುಖ್ಯಮಂತ್ರಿ ಸ್ಥಾನದವರೆಗೆ ಯಡಿಯೂರಪ್ಪ ರಾಜಕೀಯದ ಹಲವ ಮಜಲುಗಳನ್ನು ಏರಿ ಬಂದವರು. ವಿಪಕ್ಷ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅರ್ಧ ಶತಮಾನದ ಕಾಲ ರಾಜಕೀಯ ನಡೆಸಿದ ಯಡಿಯೂರಪ್ಪ ಇಂದು ರಾಜೀನಾಮೆ ನೀಡಿದರು. ಹಾಗಾದರೆ ಯಡಿಯೂರಪ್ಪ ಮುಂದಿನ ನಡೆಯೇನು? ಪುತ್ರರ ಸ್ಥಾನಮಾನವೇನು?
ಇದನ್ನೂ ಓದಿ:ಕುತೂಹಲಕ್ಕೆ ಬಿತ್ತು ತೆರೆ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ!
ಬಿಜೆಪಿ ಪಕ್ಷದಲ್ಲಿ 75 ವರ್ಷದ ಬಳಿಕ ಸಕ್ರಿಯ ರಾಜಕಾರಣಕ್ಕೆ ಅವಕಾಶ ಇಲ್ಲ ಎಂಬ ಅಲಿಖಿತ ನಿಯಮವಿದೆ. ಬಿಎಸ್ ಯಡಿಯೂರಪ್ಪ ಗೆ ಮಾತ್ರ ಬಿಜೆಪಿ ಈ ನಿಯಮವನ್ನು ಸಡಿಲಿಸಿತ್ತು. ಸದ್ಯ ರಾಜೀನಾಮೆ ಘೋಷಣೆ ಮಾಡಿರುವ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಪಕ್ಷದ ಬೆಳವಣಿಗೆಗೆ ಕೆಲಸ ಮಾಡುತ್ತೇನೆ ಎನ್ನುತ್ತಿದ್ದಾರೆ. 2023ರಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಪಕ್ಷದ ಬಲವರ್ಧನೆಗೆ ಕೆಲಸ ಮಾಡುತ್ತೇನೆ ಎನ್ನುತ್ತಿದ್ದಾರೆ.
ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಿ ಯಾವುದಾದರೂ ಒಂದು ರಾಜ್ಯದ ರಾಜ್ಯಪಾಲ ಸ್ಥಾನವನ್ನು ನೀಡಲಾಗುತ್ತದೆ ಎನ್ನುವ ಮಾತುಗಳೂ ಕೇಳಿಬರುತ್ತಿತ್ತು. ಆದರೆ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ನಾನು ಅಧಿಕಾರ ಇಲ್ಲದಿದ್ದರೂ ಕರ್ನಾಟಕದಲ್ಲಿಯೇ ಇರುತ್ತೇನೆ. ಕರ್ನಾಟಕದಲ್ಲಿ ಪಕ್ಷದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದರು. ಹೀಗಾಗಿ ರಾಜ್ಯಪಾಲ ಸ್ಥಾನದ ಅವಕಾಶ ಕಡಿಮೆ ಎನ್ನಲಾಗಿದೆ.
ಕೇಂದ್ರದಲ್ಲೂ ಪಕ್ಷದ ಹಿರಿಯರಾದ ಲಾಕ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ ಮುಂತಾದ ಹಿರಿಯರನ್ನು ಮಾರ್ಗದರ್ಶನ ಸ್ಥಾನಕ್ಕೆ ಸೀಮಿತವಾಗಿಸಿದ ಹಿನ್ನೆಲೆ ಬಿಜೆಪಿಗೆ ಇದೆ. ಹಾಗಾಗಿ ಯಡಿಯೂರಪ್ಪ ಕೂಡಾ ಮಾರ್ಗದರ್ಶಕ ಸ್ಥಾನಕ್ಕೆ ಸೀಮಿತರಾಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಪುತ್ರರ ಭವಿಷ್ಯವೇನು?
ಬಿ ಎಎಸ್ ಯಡಿಯೂರಪ್ಪ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರೆ ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ ಭವಿಷ್ಯವೇನು? ರಾಘವೇಂದ್ರ ಸಂಸದರಾಗಿದ್ದಾರೆ, ಮುಂದೆಯೂ ಚುನಾವಣಾ ಟಿಕೆಟ್ ಸಿಗಬಹುದು. ಆದರೆ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಹೊಂದಿರದ ವಿಜಯೇಂದ್ರ ಮುಂದಿನ ನಡೆಯೇನು? ಸೂಪರ್ ಸಿಎಂ ಎಂದು ತನ್ನ ಪಕ್ಷದವರಿಂದಲೇ ಹೇಳಿಕೊಂಡಿದ್ದ ವಿಜಯೇಂದ್ರಗೆ ಮುಂದೆ ಪಕ್ಷದಲ್ಲಿ ಯಾವ ಸ್ಥಾನಮಾನ ಸಿಗಬಹುದು.
ಮೂಲಗಳ ಪ್ರಕಾರ ವಿಜಯೇಂದ್ರಗೆ ಹಾನಗಲ್ ಉಪಚುನಾವಣೆ ಟಿಕೆಟ್ ಕೊಡಿಸಿ, ನಂತರ ಉಪಮುಖ್ಯಮಂತ್ರಿ ಮಾಡಬೇಕೆಂದು ಯಡಿಯೂರಪ್ಪ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇಲ್ಲದಿದ್ದರೆ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕೆಂದು ಬಿಎಸ್ ವೈ ಬೇಡಿಕೆಯಾಗಿದೆ ಎನ್ನಲಾಗಿದೆ. ಆದರೆ ದೆಹಲಿ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾಲವೇ ಉತ್ತರಿಸಬೇಕು.