ಬೆಂಗಳೂರು : ಕೇಂದ್ರ ಸರ್ಕಾರ ಕರ್ನಾಟಕ್ಕೆ ನೀಡಿರುವ 1,35,089 ಕೋಟಿ ರೂ.ಅನುದಾನದಲ್ಲಿ ಎಷ್ಟು ಬಳಕೆಯಾಗಿದೆ ಎಂಬ ಲೆಕ್ಕವನ್ನು ರಾಜ್ಯ ಸರ್ಕಾರ ನೀಡಿಲ್ಲ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜವಾಬ್ದಾರರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಕೇಂದ್ರದ ಅನುದಾನ ಕುರಿತು ಅಧ್ಯಕ್ಷ ಅಮಿತ್ ಶಾ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಸಚಿವ ಕೃಷ್ಣಬೈರೇಗೌಡ ಆರೋಪಕ್ಕೆ ಪತ್ರಿಕಾಗೋಷ್ಟಿ ನಡೆಸಿ ತಿರುಗೇಟು ನೀಡಿದ ಯಡಿಯೂರಪ್ಪ, ಎನ್‌ಡಿಎ ಸರ್ಕಾರದ ಅವಧಿಯಲ್ಲಿ 14ನೇ ಹಣಕಾಸು ಆಯೋಗದಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಅನುದಾನ ಹಂಚಿಕೆ ಶೇ.32ರಿಂದ ಶೇ.42ಕ್ಕೆ ಹೆಚ್ಚಿದೆ. ಕಾಂಗ್ರೆಸ್‌ನವರೇ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2010ರಿಂದ 2015ರ ವರೆಗೆ 13ನೇ ಹಣಕಾಸಿನಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ 73,209 ಕೋಟಿ ರೂ. ಬಿಡುಗಡೆಯಾಗಿತ್ತು. ಎನ್‌ಡಿಎ ಅಧಿಕಾರ ಬಂದ ನಂತರ 2014-15ರಿಂದ 2017-18ರ ನವೆಂಬರ್ ವರೆಗೆ 1,35,089 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕೇವಲ ಮೂರು ವರ್ಷದಲ್ಲಿ ಯುಪಿಎ ಸರ್ಕಾರಕ್ಕಿಂತ ದುಪ್ಪಟ್ಟು ಅನುದಾನ ಎನ್‌ಡಿಎ ಸರ್ಕಾರ ನೀಡಿದೆ ಎಂದು ಹೇಳಿದರು.
14ನೇ ಹಣಕಾಸಿನ ಶಿಫಾರಸಿನಂತೆ ರಾಜ್ಯಕ್ಕೆ 2,03,445 ಕೋಟಿ ರೂ. ಅನುಮೋದನೆಯಾಗಿದೆ. ಇದರ ಜತೆಗೆ ಕೇಂದ್ರ ವಲಯದ ಯೋಜನೆಗಳು(ಸಿಎಸ್‌ಎಸ್), ಎಸ್‌ಡಿಆರ್‌ಎಪ್, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಸಂಸ್ಥೆಗಳ ಅನುದಾನ ಸೇರಿ ಕೇಂದ್ರದಿಂದ 3 ಲಕ್ಷ ಕೋಟಿ ರೂ. ಅನುದಾನ ಬರಲಿದೆ. ಇದನ್ನೆಲ್ಲ ರಾಜ್ಯ ಕಾಂಗ್ರಸ್ ಸರ್ಕಾರ ಮುಚ್ಚಿಡುತ್ತಿದೆ. ರಾಜ್ಯ ಸರ್ಕಾರ ಯೋಜನೆಗಳ ಅನುಷ್ಠಾನ ಪತ್ರ ನೀಡದೇ ಇರುವುದರಿಂದ ಸುಮಾರು 10 ಸಾವಿರ ಕೋಟಿ ರೂ.ಗಳು ಕಳೆದ ಮೂರು ವರ್ಷಗಳಲ್ಲಿ ಬಂದಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರಿದರು.
ಯುಪಿಎ ಸರ್ಕಾರ ಇದ್ದಾಗ ರಾಜ್ಯದಿಂದ ಶೇ.19ರಷ್ಟು ತೆರಿಗೆ ಕೇಂದ್ರಕ್ಕೆ ಪಾವತಿಸಿದ್ದು, ಅದರಲ್ಲಿ 4.39ರಷ್ಟು ರಾಜ್ಯಕ್ಕೆ ಹಂಚಿಕೆಯಾಗಿದೆ. ಎನ್‌ಡಿಎ ಸರ್ಕಾರ ತೆರಿಗೆ ಹಂಚಿಕೆ ಪ್ರಮಾಣವನ್ನು ಶೇ.4.70ಕ್ಕೆ ಏರಿಸಿದೆ. ಜನಸಂಖ್ಯೆ ಮತ್ತು ಸಮಾನತೆ ಆಧಾರದಲ್ಲಿ ಹಣಕಾಸಿನ ಹಂಚಿಕೆ ಮಾಡಲಾಗಿದೆ. ಇದನ್ನು ಹಿಂದಿನ ಕಾಂಗ್ರೆಸ್ ಸರ್ಕಾರವೇ ನಿಗದಿ ಮಾಡಿದ್ದು ಎಂದು ತಿರುಗೇಟು ನೀಡಿದರು.
14ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಅನುದಾನ ಹಂಚಿಕೆ ಶೇ.32ರಿಂದ ಶೇ.42ರಷ್ಟು ಹೆಚ್ಚಾಗಿರುವುದರಿಂದ 5 ವರ್ಷದಲ್ಲಿ 1.25 ಲಕ್ಷ ಕೋಟಿ ಅನುದಾನ ಹೆಚ್ಚಿಗೆ ಬರಲಿದೆ ಎಂದು ಹೇಳಿದರು.