ಬೆಂಗಳೂರು: ಕೋವಿಡ್ 19 ನಿಯಂತ್ರಣ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ, ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಪಾಲ್ಗೊಂಡವರ ವೈದ್ಯಕೀಯ ತಪಾಸಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಶುಕ್ರವಾರ ಮುಸ್ಲಿಂ ಮುಖಂಡರು ಮತ್ತು ಶಾಸಕರಾದ ಸಿ.ಎಂ.ಇಬ್ರಾಹಿಂ, ಎನ್.ಎ. ಹ್ಯಾರಿಸ್, ಜಮೀರ್ ಅಹ್ಮದ್, ನಸೀರ್ ಅಹಮದ್, ರಿಜ್ವಾನ್ ಅರ್ಷದ್, ಅಖಂಡ ಶ್ರೀನಿವಾಸಮೂರ್ತಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರೊಂದಿಗೆ ಮುಖ್ಯಮಂತ್ರಿ ಚರ್ಚೆ ನಡೆಸಿದರು.
ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕೋವಿಡ್ 19 ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಮುಸ್ಲಿಂ ಸಮುದಾಯದವರಲ್ಲಿ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ನಿಜಾಮುದ್ದೀನ್ ತಬ್ಲೀ ಮರ್ಕಜ್‌ಗೆ ಭೇಟಿ ನೀಡಿದ ರಾಜ್ಯದ ವ್ಯಕ್ತಿಗಳ ಮಾಹಿತಿ ನೀಡಿ, ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಮತ್ತು ಕ್ವಾರಂಟೈನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವೊಲಿಸಲು ಸಹಕಾರ ನೀಡುವುದಾಗಿ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೇ ಪರಿಹಾರ. ಲಾಕ್‌ಡೌನ್ ಅವಧಿ ಮುಗಿಯುವವರೆಗೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾತಿ, ಧರ್ಮ ಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಎಲ್ಲ ಮುಖಂಡರೂ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದರು. ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ತಮ್ಮ ಸಮುದಾಯದ ಜನರ ಮನವೊಲಿಸುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದ ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಎಲ್ಲರೂ ಒಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೋವಿಡ್ 19 ವಿರುದ್ಧದ ಸಮರವನ್ನು ಜಯಿಸಬೇಕಿದೆ ಎಂದರು.
ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳೋಕೆ ಏನಂತೆ? ಯಾರ್ಯಾರ ಮೇಲೆ ಅನುಮಾನ ಇದೆ ಎಂದು ಹೇಳುತ್ತಾರೆಯೋ ಆ ಮುಸ್ಲಿಂ ಬಾಂಧವರೆಲ್ಲ ತಪಾಸಣೆ ಮಾಡಿಸಿಕೊಳ್ಳಲೇಬೇಕು. ಸರಕಾರ ಸಾಮೂಹಿಕ ನಮಾಜ್ ನಿಲ್ಲಿಸುವಂತೆ ಹೇಳಿದೆ. ನಾವೂ ಸರಕಾರಕ್ಕೆ ಸಹಕಾರ ಕೊಡುತ್ತಿದ್ದೇವೆ. ಎಲ್ಲ ಕಡೆಗಳಲ್ಲೂ ಮಾಂಸ, ಮೀನು ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆಯೂ ಮುಖ್ಯಮಂತ್ರಿ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ.
-ಸಿ.ಎಂ.ಇಬ್ರಾಹಿಂ, ವಿಧಾನಪರಿಷತ್ ಸದಸ್ಯ
ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಪಾಲ್ಗೊಂಡವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ನನ್ನ ಕ್ಷೇತ್ರದಲ್ಲಿ ಹಲವರನ್ನು ನಾನೇ ಪರೀಕ್ಷೆ ಗೊಳಪಡಿಸಿದ್ದೇನೆ. ಜನರು ಸರಕಾರದ ಕ್ರಮಕ್ಕೆ ಬೆಂಬಲ ನೀಡ ಬೇಕು. ಆಶಾ ಕಾರ್ಯಕರ್ತೆಯರು ಯಾಕೆ ಬಂದಿದ್ದರು ಎನ್ನುವುದು ಜನರಿಗೆ ಗೊತ್ತಿ ರಲಿಲ್ಲ. ಎನ್‌ಆರ್‌ಸಿ ಸಮೀಕ್ಷೆಗೆ ಬಂದಿದ್ದಾರೆಂದು ಭಯಗೊಂಡು ಆ ರೀತಿ ಮಾಡಿದ್ದಾರೆ.
–
ಜಮೀರ್ ಅಹ್ಮದ್ ಖಾನ್, ಶಾಸಕ