Advertisement

ಹೊಸ ಮರಳು ನೀತಿ : ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ

09:52 AM Feb 12, 2020 | sudhir |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನೂತನ ಮರಳು ನೀತಿಯ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

Advertisement

ರಾಜ್ಯದ ಎಲ್ಲ ವರ್ಗದ ಜನರಿಗೆ ಹಾಗೂ ಸರ್ಕಾರದ ಪ್ರಮುಖ ಯೋಜನೆಗಳಿಗೆ ಸುಲಭ ದರದಲ್ಲಿ ಸುಲಭವಾಗಿ ಮರಳು ದೊರೆಯುವಂತೆ ಮಾಡಲು ಸಚಿವ ಸಂಪುಟ ಉಪ ಸಮಿತಿಯ ಶಿಫಾರಸಿನನ್ವಯ ರಚಿಸಲಾದ ಹೊಸ ಮರಳು ನೀತಿಯ ಕರಡಿನ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಮರಳು ನೀತಿ ಕರಡನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ನೂತನ ಮರಳು ನೀತಿಯಿಂದ ರಾಜ್ಯದಲ್ಲಿರುವ ಮರಳಿನ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿದೆ ಎಂಬ ಆಶಾಭಾವವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ಮರಳು ನೀತಿಯ ಮುಖ್ಯಾಂಶಗಳು :

• ರಾಜ್ಯದಲ್ಲಿ ಅಂದಾಜು 45 ದಶಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಮರಳಿನ ಬೇಡಿಕೆ ಇದೆ. ಈ ಪೈಕಿ 30 ದಶಲಕ್ಷ ಮೆಟ್ರಿಕ್ ಟನ್ ಮರಳನ್ನು ಎಂ ಸ್ಯಾಂಡ್ ಘಟಕಗಳಿಂದ ಹಾಗೂ ನದಿ ಪಾತ್ರಗಳಲ್ಲಿ ಹಾಗೂ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆ ಲೈಸೆನ್ಸ್ ಪ್ರದೇಶಗಳಿಂದ ಒಟ್ಟು 4.5 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಹೊರ ರಾಜ್ಯಗಳಿಂದ ಅಂದಾಜು 2 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಎಂಸ್ಯಾಂಡ್ ಮತ್ತು ನದಿ ಮರಳು ರಾಜ್ಯದಲ್ಲಿ ಪೂರೈಕೆಯಾಗುತ್ತಿದೆ. ಬೇಡಿಕೆ ಮತ್ತು ಸರಬರಾಜಿಗೆ 8.5 ದಶಲಕ್ಷ ಮೆಟ್ರಿಕ್ ಟನ್ ಕೊರತೆಯನ್ನು ನೀಗಿಸಲು ಸರ್ಕಾರ ಕರ್ನಾಟಕ ಉಪಖನಿಜ ರಿಯಾಯಿತಿ(ತಿದ್ದುಪಡಿ) ನಿಯಮಾವಳಿ 2017ನ್ನು ಜಾರಿಗೆ ತಂದಿದೆ.

Advertisement

• ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ನಿಗದಿತ ಸಮಯದಲ್ಲಿ ನಿಯಮಿತವಾಗಿ ಮರಳು ಪೂರೈಕೆಯಾಗದೇ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪಸಮಿತಿಯ ಶಿಫಾರಸ್ಸುಗಳನ್ವಯ ಮರಳು ನೀತಿಯ ಕರಡನ್ನು ತಯಾರಿಸಲಾಗಿದೆ.

• ರಾಜ್ಯದ ಭೌಗೋಳಿಕ, ಭೂವೈಜ್ಞಾನಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯನ್ನು ಪರಿಗಣಿಸಿ, ಸರ್ಕಾರಿ ಮತ್ತು ಸಾರ್ವಜನಿಕ ನಿರ್ಮಾಣ ಕಾಮಗಾರಿಗಳಿಗೆ ನಿಯಮಿತವಾಗಿ, ಸುಲಭವಾಗಿ ಮತ್ತು ಸ್ಪರ್ಧಾತ್ಮಕ ದರದಲ್ಲಿ ಮರಳು ದೊರೆಯುವಂತೆ ಮಾಡಲು ಹೊಸ ಮರಳು ನೀತಿ -2020ನ್ನು ರೂಪಿಸಿದೆ.

• ಅದರಂತೆ ಮೊದಲನೇ ಮತ್ತು ಎರಡನೇ ಶ್ರೇಣಿಯ ಹಳ್ಳ ತೊರೆಗಳಲ್ಲಿ ಲಭ್ಯವಿರುವ ಮರಳು ನಿಕ್ಷೇಪಗಳನ್ನು ಗುರುತಿಸಿ, ಸೂಕ್ತ ಅನುಮೋದನೆ ಪಡೆದು, ಸ್ಥಳೀಯ ಕಡಿಮೆ ವರಮಾನದ ವಸತಿ ಯೋಜನೆ, ಶೌಚಾಲಯ ನಿರ್ಮಾಣ ಹಾಗೂ ಇತರೆ ಸ್ಥಳೀಯ ನಿರ್ಮಾಣ ಕಾಮಗಾರಿಗಳಿಗೆ ಮಾತ್ರ ಖನಿಜ ರವಾನೆ ಪರವಾನಗಿಯೊಂದಿಗೆ ಮರಳನ್ನು ಗ್ರಾಮಪಂಚಾಯತ್ ಮೂಲಕ ಸರ್ಕಾರ ನಿಗದಿಪಡಿಸಿದ ದರದಲ್ಲಿ ವಿಲೇವಾರಿ ಮಾಡುವುದು.

• ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಲಘು ವಾಹನಗಳಲ್ಲಿ ಮಾತ್ರ ಮರಳು ಸಾಗಾಣಿಕೆಗೆ ಅನುಮತಿ ನೀಡಲಾಗುವುದು. 3, 4 , 5 ನೇ ಕ್ರಮಾಂಕದಂತೆ ಲಭ್ಯವಿರುವ ಮರಳನ್ನು ಪರವಾನಗಿ ಪಡೆದ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆ/ ನಿಗಮ, ಕಾರ್ಪೊರೇಷನ್‍ಗಳು ಮರಳು ಗಣಿಗಾರಿಕೆ, ಸಾಗಾಣಿಕೆ, ಸಂಗ್ರಹಣೆ ಮತ್ತು ಮರಳು ವಿಲೇವಾರಿ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಬೇಕು.

• ಮರಳನ್ನು ಬಳಕೆದಾರರಿಗೆ ಆನ್‍ಲೈನ್ ಬುಕಿಂಗ್ ಮೂಲಕ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ಮರಳು ಸಾಗಾಣಿಕೆ ವಾಹನಗಳ ಚಲನ ವಲನಗಳ ಮೇಲೆ Sand Vehicle Tracking System ಮೂಲಕ ನಿಗಾ ವಹಿಸಲಾಗುವುದು. ಸರ್ಕಾರಿ ಕಾಮಗಾರಿ/ಬೃಹತ್ ಯೋಜನೆಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆ/ಗುತ್ತಿಗೆದಾರರು ಜಿಲ್ಲಾ ಮರಳು ಸಮಿತಿ ನಿರ್ಧರಿಸಿದ ದರವನ್ನು ಸರ್ಕಾರಕ್ಕೆ ಪಾವತಿಸಿ ಮರಳು ಬ್ಲಾಕ್‍ಗಳನ್ನು ಮೀಸಲಿರಿಸಿ ಕಾಮಗಾರಿ/ಬೃಹತ್ ಯೋಜನೆಗ ಗಳಿಗೆ ಬಳಸಿಕೊಳ್ಳಬಹುದು.

• ಹೊರರಾಜ್ಯಗಳಿಂದ ಸಾಗಣೆಯಾಗುವ ಮರಳನ್ನು ರಾಜ್ಯದಲ್ಲಿ ಮಾರಾಟ ಮಾಡಬೇಕಿದ್ದಲ್ಲಿ ಸರ್ಕಾರ ನಿಗದಿಪಡಿಸಿರುವ ನಿಯಂತ್ರಣ ಶುಲ್ಕವನ್ನು ಪಾವತಿಸಬೇಕು. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಯನ್ನು ಪಟ್ಟಾದಾರರಿಗೆ ಅಥವಾ ಪಟ್ಟಾದಾರರಿಂದ ಪಡೆದ ಒಪ್ಪಿಗೆ ಪ್ರಮಾಣ ಪತ್ರವನ್ನು ಸಲ್ಲಿಸಿದವರಿಗೆ ಪರವಾನಗಿ ನೀಡಲಾಗುವುದು.

• ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನದಲ್ಲಿ ಮಿನರಲ್ ಪ್ರೊಟೆಕ್ಷನ್ ಫೋರ್ಸ್ ಸ್ಥಾಪಿಸಿ ಅನಧಿಕೃತ ಮರಳು ಗಣಿಗಾರಿಕೆ ದಾಸ್ತಾನು ಮತ್ತು ಸಾಗಾಣಿಕೆ ವಿರುದ್ಧ ಕ್ರಮ ಜರುಗಿಸಲಾಗುವುದು. ಕರ್ನಾಟಕ ಉಪಖನಿಜ ರಿಯಾಯಿತಿ(ತಿದ್ದುಪಡಿ) ನಿಯಮಾವಳಿ 2016 ರಂತೆ ಟೆಂಡರ್ ಕಂ ಹರಾಜು ಮೂಲಕ ಮಂಜೂರಾದ ಮರಳು ಗುತ್ತಿಗೆ ಪ್ರದೇಶಗಳಲ್ಲಿ ಗುತ್ತಿಗೆ ಅವಧಿ ಮುಗಿಯುವವರೆಗೆ ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸಲಾಗುವುದು. ಮರಳು ನೀತಿಯನ್ನು ಜಾರಿಗೊಳಿಸಲು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿಗಳು 1994 ಸೂಕ್ತ ತಿದ್ದುಪಡಿ ತರಲಾಗುವುದು.

ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂದೀಪ್ ದವೆ, ಗೃಹ ಮತ್ತು ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಯವರ ಸಲಹೆಗಾರ ಎಂ. ಲಕ್ಷ್ಮೀನಾರಾಯಣ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next