ಬೆಂಗಳೂರು: ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ ಮುಗಿದ ನಂತರ ಮಾದರಿ ನೀತಿ ಸಂಹಿತೆ ಸಡಿಲಗೊಳಿಸಲಾಗಿದೆ ಎಂದು ಹೇಳಿಕೊಂಡು ರಾಜ್ಯ ಸರ್ಕಾರ ಕೆಲ ಯೋಜನೆಗೆ ಚಾಲನೆ ನೀಡಿದೆ. ಇದರಿಂದ ಚುನಾವಣಾ ನೀತಿ ಸಂಹಿತಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ವಿಧಿಸಿದ್ದ ನೀತಿ ಸಂಹಿತೆಯನ್ನು ವಾಪಸ್ ಪಡೆದಿರುವುದಾಗಿ ಹೇಳಿ ರಾಜ್ಯ ಸರ್ಕಾರ ಹಲವು ಯೋಜನೆಗಳಿಗೆ ಸಂಬಂಧಿಸಿದ ಖರೀದಿ ಮತ್ತು ಸೇವೆಗಳ ಟೆಂಡರ್‌ಗಳಿಗೆ ಬುಧವಾರದಿಂದ ಚಾಲನೆ ನೀಡಿದೆ. ಚುನಾ ವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಚುನಾವಣಾ ಅಧಿಸೂಚನೆ ಅನ್ವಯ ಫಲಿತಾಂಶ ಘೋಷಣೆ ಆಗುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಬರ ನಿರ್ವಹಣೆ, ಪ್ರಕೃತಿ ವಿಕೋಪ ಪರಿಹಾರದಂತಹ ತುರ್ತು ಪರಿಸ್ಥಿತಿ ಹೊರತುಪಡಿಸಿ ಬೇರೆ ಯಾವುದೇ ಕೆಲಸಕ್ಕೆ ವಿನಾಯ್ತಿ ನೀಡಲು ಅವಕಾಶ ಇಲ್ಲ. ಆದರೆ ರಾಜ್ಯ ಸರ್ಕಾರ ಎರಡು ದಿನಗಳಿಂದ ಆಯೋಗವೇ ವಿನಾಯಿತಿ ನೀಡಿದೆ ಎಂದು ಹೇಳಿಕೊಂಡು ಹಲವಾರು ಟೆಂಡರ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Advertisement
ಲೋಕಸಭೆ ಚುನಾವಣೆಗಾಗಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯನ್ನು ಕೇಂದ್ರ ಚುನಾವಣಾ ಆಯೋಗ ಸಡಿಲಗೊಳಿಸಿರುವುದಾಗಿ ಹೇಳಿ ರಾಜ್ಯ ಸರ್ಕಾರ ಮೂಲಸೌಕರ್ಯ ಯೋಜನೆಗಳು, ಖರೀದಿ ಹಾಗೂ ಮತ್ತಿತರ ಸೇವೆಗಳ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಕೂಡಲೇ ತಡೆ ಹಿಡಿಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಅಕ್ರಮಗಳಿಗೆ ದಾರಿ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿರುವುದು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಂತಿದೆ. ನೆರೆಯ ರಾಜ್ಯಗಳ ಮೇಲೆ ಪರಿಣಾಮ ಬೀರುವಂತಹ ಕೆಲ ನಿರ್ಧಾರಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ನೀತಿ ಸಂಹಿತೆ ಅನುಸಾರ ಕಾರ್ಯನಿರ್ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಯೋಗಕ್ಕೆ ಯಡಿಯೂರಪ್ಪ ಪತ್ರದ ಮೂಲಕ ಒತ್ತಾಯಿಸಿದ್ದಾರೆ.