ಹೊಸಪೇಟೆ: ಬಳ್ಳಾರಿ ಉಪಚುನಾವಣೆ ರಾಷ್ಟ್ರದ ದಿಕ್ಸೂಚಿಯಾಗಲಿದ್ದು, ನವೆಂಬರ್ 10ರ ನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಶಾಸಕ ವಿ. ಸೋಮಣ್ಣ ಭವಿಷ್ಯ ನುಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸತ್ತು ಹೋಗಿದ್ದು, ಹಳಿ ತಪ್ಪಿದ ರೈಲಿನಂತಾಗಿದೆ. ಜೆಡಿಎಸ್, ಕಾಂಗ್ರೆಸ್‌ನವರಿಗೆ ಚುನಾವಣಾ ಕಣಕ್ಕಿಳಿಸಲು ಅಭ್ಯರ್ಥಿಗಳೇ ಸಿಕ್ತಿಲ್ಲ ಎಂದು ಲೇವಡಿ ಮಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧೆ ಮಾಡಿದ್ದರೆ, ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿತ್ತು. ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ಅವರಂತೆ ಜೆ.ಶಾಂತಾ ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಮಾತನಾಡಿ, ಮಾಜಿ ಸಂಸದೆ ಬಳ್ಳಾರಿ ಉಪಚುನಾವಣೆ ಯುದ್ಧದಂತೆ ಒಗ್ಗಾಟ್ಟಾಗಿ ಸೈನಿಕರಾಗಿ ಹೋರಾಡುತ್ತೇವೆ. ಕೃಷ್ಣದೇವರಾಯ ಆಳ್ವಿಕೆಗೊಳಗಾದ ಹೊಸಪೇಟೆಯಿಂದ ಚುನಾವಣಾ ಪ್ರಚಾರ ಆರಂಭವಾಗಿರುವುದು ವಿಜಯದ ಸಂಕೇತವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಪ್ರಧಾನಿ ಮೋದಿ ವಿರುದ್ಧ ಬೇರೆ ಯಾರೂ ಪ್ರಧಾನಿ ಅಭ್ಯರ್ಥಿಗಳಿಲ್ಲ. ಮತ್ತೂಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಖಚಿತವಾಗಿದೆ ಎಂದು ಭವಿಷ್ಯ ನುಡಿದರು. ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಲು ಹೆದರುತ್ತಿದ್ದಾರೆ. ರಾಮನಗರದಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪ್ರವಾಹ, ಇನ್ನೊಂದು ಕಡೆ ಬರಗಾಲವಿದ್ದರೂ ಸಿಎಂ ಕುಮಾರಸ್ವಾಮಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ. ಇಬ್ಬರೂ ಪರಸ್ಪರ ತಿಕ್ಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ ಇದೆಲ್ಲವನ್ನು ನೋಡಿದರೆ ಸರ್ಕಾರ ಇದೆಯೋ ? ಸತ್ತಿದೆಯೋ ಎಂಬ ಅನುಮಾನ ಬರುತ್ತಿದೆ ಎಂದರು.
ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಮಾಜಿ ಶಾಸಕ ಚಂದ್ರನಾಯ್ಕ, ಮೃತ್ಯುಂಜಯ ಜಿನಗಾ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಜಿಪಂ ಅಧ್ಯಕ್ಷೆ ಭಾರತಿರೆಡ್ಡಿ, ಮುಖಂಡರಾದ ಕೆ.ಎ.ರಾಮಲಿಂಗಪ್ಪ ಇನ್ನಿತರರಿದ್ದರು.
ಬಳ್ಳಾರಿ ಭವಿಷ್ಯವನ್ನು ನಾವು ನಿರ್ಧಾರ ಮಾಡುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಹಣದ ಬಲವಿದ್ದರೆ, ನಮಗೆ ಕಾರ್ಯಕರ್ತರ ಬಲವಿದ್ದು, ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿದ್ದಾರೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ಜೆ. ಶಾಂತಾ ಅಭ್ಯರ್ಥಿಯಾಗಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಣೆ ಮಾಡಲಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸಿಎಂ ಕುಮಾರಸ್ವಾಮಿ ಕುಟುಂಬದ ಭ್ರಷ್ಟಾಚಾರವನ್ನು ದಾಖಲೆಗಳ ಸಮೇತ ಕಾಂಗ್ರೆಸ್‌ನವರೇ ಬಿಡುಗಡೆ ಮಾಡಿದ್ದಾರೆ.
ಬಿ.ಶ್ರೀರಾಮುಲು, ಮೊಳಕಾಲ್ಮೂರು ಶಾಸಕ